ವೆಲಂಕಣಿ ಮಾತೆಯ ಪುಣ್ಯಕ್ಷೇತ್ರ ಕಲ್ಮಾಡಿ…

ರಾಜ್ಯ ಮತ್ತು ದೇಶದ ಪ್ರಮುಖ ಹಾಗೂ ಸುಪ್ರಸಿದ್ಧ ಪ್ರಾಕೃತಿಕ ಬಂದರು ಮಲ್ಪೆ ಹಾಗೂ ಕಡಲ ತೀರಕ್ಕೆ ಉಡುಪಿಯಿಂದ ಪಶ್ಚಿಮಾಭಿಮುಖವಾಗಿ ಸಾಗುವ ಹಾದಿಯಲ್ಲಿ ಕೇವಲ 4ಕಿಲೋಮೀಟರ್ ಸಾಗಿದರೆ ಸಿಗುವಂತಹ ಸುಂದರ ಊರೇ ಕಲ್ಮಾಡಿ. ಕಳೆದ ಐವತ್ತು ವರ್ಷಗಳಿಂದ ಜನರ ಕಷ್ಟ ಕಾರ್ಪಣ್ಯಗಳಿಗೆ ಧ್ವನಿಯಾಗಿ ಊರ ಹಾಗೂ ಪರವೂರ ಜನರ ಶಾಂತಿ ಸಮಾಧಾನದ ತಾಣವಾಗಿ ರೂಪಿತಗೊಂಡಿರುವ ಸಮುದ್ರ ತಾರೆ ವೆಲಂಕಣಿ ಮಾತೆ ದೇವಾಲಯವು, ಇದೀಗ ಉಡುಪಿ ಧರ್ಮಪ್ರಾಂತ್ಯದ ಅಧಿಕೃತ ಪುಣ್ಯಕ್ಷೇತ್ರವಾಗಿ ಘೋಷಣೆಗೆ ಕ್ಷಣಗಣನೆ ಆರಂಭವಾಗಿದೆ.

ತಮಿಳುನಾಡಿನ ನಾಗಪಟ್ಟಣಂನಲ್ಲಿರುವ ವಿಶ್ವಪ್ರಸಿದ್ಧ ವೆಲಂಕಣಿ ಮಾತೆಯ ಪುಣ್ಯ ಕ್ಷೇತ್ರದ ಮಾದರಿಯಲ್ಲಿ ಕಲ್ಮಾಡಿಯಲ್ಲೂ ವೆಲಂಕಣಿ ಮಾತೆಯ ಸ್ಮರಣೆ ತಾಣವೇ ಸ್ಟೆಲ್ಲಾ ಮಾರೀಸ್ ದೇವಾಲಯ. ಸಮುದ್ರ ತಾರೆ ವೆಲಂಕಣಿ ಮಾತೆಯ ಪುಣ್ಯಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿರುವ ಸ್ಟೆಲ್ಲಾ ಮಾರಿಸ್ ದೇವಾಲಯವು 1972ರಲ್ಲಿ ಸ್ಥಾಪಿತವಾಯಿತು. ಅದಕ್ಕಿಂತ ಮೊದಲು ಕಲ್ಮಾಡಿಯ ಕ್ರೈಸ್ತ ಭಕ್ತಾದಿಗಳು ತಮ್ಮ ಧಾರ್ಮಿಕ ಅಗತ್ಯತೆಗಳಿಗೆ ಉಡುಪಿ ಅಥವಾ ತೊಟ್ಟಂನ ದೇವಾಲಯದ ಮೇಲೆ ಅವಲಂಬಿತರಾಗಿದ್ದರು. ದಿನಕಳೆದಂತೆ ಇಲ್ಲಿಯ ಭಕ್ತಾದಿಗಳಿಗೆ ದೂರದ ಕಲ್ಮಾಡಿ ಮತ್ತು ಉಡುಪಿಯ ದೇವಾಲಯಗಳಿಗೆ ಬಲಿಪೂಜೆ ಮತ್ತು ಇನ್ನಿತರ ಅಗತ್ಯತೆಗಳನ್ನು ಪೂರೈಸುವುದು ಕಷ್ಟವಾಗತೊಡಗಿತು. ಭಕ್ತಾದಿಗಳಿಗೆ ಪ್ರಾರ್ಥನಾ ಮಂದಿರದ ಅಗತ್ಯತೆಯನ್ನು ಅರಿತು ಕಲ್ಮಾಡಿಯವರ ಆದ ಧರ್ಮಗುರು ವಂ. ಚಾಲ್ಸ್ ಡಿಸೋಜರವರು ಖರೀದಿಸಿದ ಜಮೀನಿನಲ್ಲಿ ಊರ ಜನರ ಸಹಕಾರದಿಂದ ಕಲ್ಮಾಡಿಯಲ್ಲಿ ಮೊತ್ತಮೊದಲ ದೇವಾಲಯ ನಿರ್ಮಾಣವಾಯಿತು. 1972ರ ಫೆಬ್ರವರಿ 5ರಂದು ಮಂಗಳೂರು ಧರ್ಮಪ್ರಾಂತ್ಯದ ಅಂದಿನ ಧರ್ಮಾಧ್ಯಕ್ಷರಾಗಿದ್ದ ಅ.ವಂ.ಡಾ. ಬಾಸಿಲ್ ಡಿಸೋಜರವರು ಆಶೀರ್ವಚನ ಮತ್ತು ಲೋಕಾರ್ಪಣೆಯನ್ನು ನಡೆಸಿದರು. ಪ್ರಾರಂಭದ ದಿನಗಳಲ್ಲಿ ಉಡುಪಿ ಹಾಗೂ ಕಲ್ಯಾಣಪುರ ದೇವಾಲಯದ ಧರ್ಮಗುರುಗಳು ಆದಿತ್ಯವಾರದ ಬಲಿ ಪೂಜೆಗಾಗಿ ಕಲ್ಮಾಡಿಗೆ ಆಗಮಿಸಿ ಭಕ್ತರ ಅಗತ್ಯತೆಗಳನ್ನು ಪೂರೈಸುತ್ತಿದ್ದರು. 1987ರಲ್ಲಿ ಸ್ಟೆಲ್ಲಾ ಮಾರೀಸ್ ದೇವಾಲಯದ ಪ್ರಪ್ರಥಮ ಧರ್ಮಗುರುವಾಗಿ ಫಾ. ಡೆನಿಸ್ ಕ್ಯಾಸ್ತಲಿನೊರವರು ಅಧಿಕಾರ ವಹಿಸಿಕೊಂಡರು.

ಕಲ್ಮಾಡಿ ದೇವಾಲಯವು ಇಂದು ಉಡುಪಿಯಲ್ಲಿ ಮಾತ್ರವಲ್ಲದೇ ವಿಶ್ವದೆಲ್ಲೆಡೆ ಪ್ರಸಿದ್ದಿಯನ್ನು ಪಡೆದಿದೆ. 1988ರ ಅಗಸ್ಟ್ 15ರಂದು ವೆಲಂಕಣಿ ಮಾತೆಯ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಯಿತು. ವಂ. ಫಾ. ಡೆನಿಸ್ ಕ್ಯಾಸ್ತಲಿನೊ ಹಾಗೂ ಕಲ್ಯಾಣ್ ಪುರದ ಮಿಲಾಗ್ರಿಸ್ ಕಾಲೇಜಿನ ಪ್ರಾಧ್ಯಾಪಕರಾಗಿದ್ದ ವಂ. ಫಾ. ವಿಲ್ಸನ್ ವೈಟಸ್ ಡಿಸೋಜ ರವರು ನಾಗಪಟ್ಟಣದ ವೆಲಂಕಣಿ ದೇವಾಲಯಕ್ಕೆ ಭೇಟಿ ಕೊಟ್ಟು ದಿವ್ಯ ಬಲಿಪೂಜೆಯನ್ನು ಅರ್ಪಿಸಿ, ಸಮುದ್ರ ತಾರೆ ವೆಲಂಕಣಿ ಮಾತೆಯ ಪ್ರತಿಮೆಯನ್ನು ತಂದು ಬಂದಿದ್ದರು. ಉಡುಪಿ ಶೋಕಮಾತಾ ದೇವಾಲಯದಲ್ಲಿ ವೆಲಂಕಣಿ ಮಾತೆಯ ಪ್ರತಿಮೆಗೆ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಆಶೀರ್ವಚನ ಮಾಡಿದ ಬಳಿಕ ಉಡುಪಿಯಿಂದ ಕಲ್ಮಾಡಿ ದೇವಾಲಯದವರೆಗೆ ಭವ್ಯವಾದ ಮೆರವಣಿಗೆಯಲ್ಲಿ ತಂದು ಪ್ರತಿಷ್ಠಾಪಿಸಲಾಗಿತ್ತು. ಆ ಬಳಿಕ ನಡೆದದ್ದೆಲ್ಲವೂ ಪವಾಡ ಮತ್ತು ಇತಿಹಾಸ. 

ತನ್ನ ನಂಬಿದ ಭಕ್ತಾದಿಗಳನ್ನು ವೆಲ್ಲಂಕಣಿ ಮಾತೆ ಎಂದೂ ಕೈಬಿಟ್ಟಿಲ್ಲ ಮತ್ತು ನಿರಾಶೆಗೊಳಿಸಿದ್ದು ಇಲ್ಲ. ಕಲ್ಮಾಡಿ ವೆಲಂಕಣಿ ಮಾತೆಯ ಮೂಲಕವಾಗಿ ದಿನಂಪ್ರತಿ ಎಂಬಂತೆ ನೂರಾರು ಭಕ್ತಾದಿಗಳು ತಮ್ಮ ಕಷ್ಟ ಕಾರ್ಪಣ್ಯಗಳಿಂದ ಮುಕ್ತಿ ಪಡೆದಿದ್ದಾರೆ. ಕಲ್ಮಾಡಿ ದೇವಾಲಯದಲ್ಲಿ ಸೇವೆ ಸಲ್ಲಿಸಿದ ಎಲ್ಲ ಧರ್ಮಗುರುಗಳು ತಮ್ಮ ಅವಧಿಗಳಲ್ಲಿ ದೇವಾಲಯದ ಅಭಿವದ್ಧಿಗೆ ಮಾತ್ರವಲ್ಲದೆ ಭಕ್ತಾದಿಗಳ ಧಾರ್ಮಿಕ ಅಗತ್ಯತೆಗಳನ್ನು ಪೂರೈಸಿದ್ದಾರೆ.

1991ರಲ್ಲಿ ಸ್ವತಂತ್ರ ದೇವಾಲಯವೆಂದು ಮಂಗಳೂರು ಧರ್ಮಪ್ರಾಂತ್ಯ ಘೋಷಣೆ ಮಾಡಿದ ಬಳಿಕ, 1994ರಲ್ಲಿ ವಂ. ರೋಬರ್ಟ್ ಪಿಂಟೋರವರು ಕಲ್ಮಾಡಿಯ ನೂತನ ಧರ್ಮಗುರುಗಳಾಗಿ ನೇಮಕವಾದರು. 4 ವರ್ಷ ಸೇವೆ ಸಲ್ಲಿಸಿದ ಅವರು ದೇವಾಲಯದ ಬಲಿಪೀಠವನ್ನು ನವೀಕರಣಗೊಳಿಸಿದ್ದರು. 1998ರಲ್ಲಿ ವಂ. ಐವನ್ ಡಿಮೆಲ್ಲೋರವರು ದೇವಾಲಯದ 3 ನೇ  ಧರ್ಮಗುರುಗಳಾಗಿ ನೇಮಕಗೊಂಡರು. ತನ್ನ 7ವರ್ಷಗಳ ಅವಧಿಯಲ್ಲಿ ದೇವಾಲಯಕ್ಕೆ ಸ್ಮಶಾನದ ಅಗತ್ಯತೆಯನ್ನು ಮನಗಂಡು, ಸಾಕಷ್ಟು ವಿರೋಧದ ನಡುವೆಯೂ ದೇವಾಲಯದ ಆವರಣದಲ್ಲಿ ಸ್ಮಶಾನವನ್ನು ನಿರ್ಮಿಸಲು ಸಕಲ ಪ್ರಯತ್ನ ನಡೆಸಿದರು. 2005 ರಿಂದ 2012ರ 7ವರ್ಷಗಳ ಕಾಲ ಸ್ಟೆಲ್ಲಾ ಮಾರಿಸ್ ದೇವಾಲಯವು ಜೆಜ್ವಿತ್ ಸಭೆಯ ಆಡಳಿತಕ್ಕೆ ಒಳಪಟ್ಟಿತು. ಈ ಅವಧಿಯಲ್ಲಿ 3ಧರ್ಮಗುರುಗಳು ದೇವಾಲಯದಲ್ಲಿ ಸೇವೆ ಸಲ್ಲಿಸಿದರು. ವಂ. ರಿಚರ್ಡ್ ಮಸ್ಕರೇನಸ್, ವಂ. ಮ್ಯಾಕ್ಸಿಮ್ ಮಿಸ್ಕಿತ್, ವಂ. ಜೋಸೆಫ್ ಡಿಸೋಜಾ ತಮ್ಮ ಅವಧಿಯಲ್ಲಿ ತಮ್ಮಿಂದ ಆಗುವ ಕೊಡುಗೆಯನ್ನು ಈ ದೇವಾಲಯಕ್ಕೆ ನೀಡಿದ್ದಾರೆ. ವಂ. ಮ್ಯಾಕ್ಸಿಮ್ ವಿುಸ್ಕಿತ್ ರವರ ಅವಧಿಯಲ್ಲಿ ದೇವಾಲಯದ ವಠಾರದಲ್ಲಿ ವೆಲಂಕಣಿ ಮಾತೆ ಗ್ರೊಟ್ಟೊ ನಿರ್ಮಿಸಲ್ಪಟ್ಟಿದ್ದು, ಮಾತ್ರವಲ್ಲದೆ ಸ್ಮಶಾನದ ನಿರ್ಮಾಣದ ಕೀರ್ತಿಯೂ ಇವರಿಗೆ ಸಲ್ಲುತ್ತದೆ.

2012ರಲ್ಲಿ ಉಡುಪಿ ಧರ್ಮಪ್ರಾಂತ್ಯ ಘೋಷಣೆಯ ಬಳಿಕ, ಅದೇ ವರ್ಷದ ಜುಲೈ 10ರಂದು ಸ್ಟೆಲ್ಲಾ ಮಾರಿಸ್ ದೇವಾಲಯದ ಇದರ ನೂತನ ಧರ್ಮಗುರುಗಳಾಗಿ ವಂ. ಆಲ್ಬನ್ ಡಿಸೋಜಾ ಅವರು ಅಧಿಕಾರ ವಹಿಸಿಕೊಂಡರು. ತಮ್ಮ ಪ್ರಾರ್ಥನೆ ಮತ್ತು ವಿಶಿಷ್ಟ ವ್ಯಕ್ತಿತ್ವದಿಂದ ಸರ್ವರ ಜನಮನ ಗೆದ್ದ ಧರ್ಮಗುರುಗಳ ಆಗಮನದಿಂದ ಕಲ್ಮಾಡಿ ದೇವಾಲಯದ ಧರ್ಮ ಪ್ರಜೆಗಳು ಮತ್ತು ಪುಣ್ಯಕ್ಷೇತ್ರದ ಭಕ್ತಾಭಿಮಾನಿಗಳಲ್ಲಿ ಹೊಸ ಹುರುಪು ಮೂಡಿತು. ಈ ನಡುವೆ ದೇವಾಲಯಕ್ಕೆ ಬರುವ ಭಕ್ತಾದಿಗಳ ಸಂಖ್ಯೆಯೂ ದಿನೇದಿನೆ ಏರಿಕೆ ಕಂಡಿತು. ಭಕ್ತಾದಿಗಳ ಅನುಕೂಲಕ್ಕಾಗಿ ನೂತನ ವಿಶಾಲ ದೇವಾಲಯದ ಅಗತ್ಯತೆ ಮನಗಂಡು ವಂ. ಆಲ್ಬನ್ ಡಿಸೋಜರವರು ಜನರ ಸಹಕಾರದೊಂದಿಗೆ ಹಡಗಿನಾಕಾರದ ಬೃಹತ್ ದೇವಾಲಯದ ರೂಪುರೇಷೆ ಸಿದ್ಧಪಡಿಸಿದರು.

2014ರ ನವೆಂಬರ್ 1ರಂದು ಉಡುಪಿ ಧರ್ಮಪ್ರಾಂತ್ಯದ ಧಮಾಧ್ಯಕ್ಷರಾದ ಅತಿ ವಂದನೀಯ ಡಾ. ಜೆರಾಲ್ಡ್ ಐಸಾಕ್ ಲೋಬೋ ರವರು ನೂತನ ದೇವಾಲಯದ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದರು. 2018ರ ಜನವರಿ 6ರಂದು ಸುಮಾರು 5ಕೋಟಿ₹ ವೆಚ್ಚದಲ್ಲಿ ನಿರ್ಮಾಣಗೊಂಡ ವಿನೂತನ ಮಾದರಿಯ ಭವ್ಯವಾದ ಸ್ಥಳಾವಕಾಶದ ಸ್ಟೆಲ್ಲಾ ಮಾರಿಸ್ ದೇವಾಲಯವು ಹಲವಾರು ಧರ್ಮಾಧ್ಯಕ್ಷರು, ಧರ್ಮಗುರುಗಳು ಮತ್ತು ಸಾವಿರಾರು ಭಕ್ತಾದಿಗಳ ಉಪಸ್ಥಿತಿಯಲ್ಲಿ ಲೋಕಾರ್ಪಣೆಗೊಂಡಿತು. 

ಪ್ರತಿ ಶನಿವಾರದಂದು ಪ್ರಾರ್ಥನಾ ಕೂಟ ಮತ್ತು ವಿಶೇಷ ಸಂದರ್ಭಗಳಲ್ಲಿ ಅಹೋರಾತ್ರಿ ಧ್ಯಾನ ಕೂಟವನ್ನು ಆಯೋಜಿಸಿ, ಸರ್ವರ ಪಾಲಿಗೆ ‘ಪ್ರಾರ್ಥನೆಯ ಧರ್ಮಗುರು’ ಎಂದೇ ಖ್ಯಾತಿ ಪಡೆದಿದ್ದ ವಂ. ಆಲ್ಬನ್ ಡಿಸೋಜರವರು 2021ರ ಜುಲೈ 5ರಂದು ಅತ್ತೂರು ಮೈನರ್ ಬಸಿಲಿಕದ ನಿರ್ದೇಶಕರಾಗಿ ನೇಮಕಗೊಂಡು ಕಲ್ಮಾಡಿಯಿಂದ ತೆರಳಿದರು.

ಪ್ರಸ್ತುತ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ಕಲ್ಮಾಡಿ ವೆಲಂಕಣಿ ಮಾತೆಯ ದೇವಾಲಯದಲ್ಲಿ ಪ್ರಧಾನ ಧರ್ಮಗುರುಗಳಾಗಿ ವಂ. ಬ್ಯಾಪ್ಟಿಸ್ಟ್ ಮಿನೇಜಸ್ ಹಾಗೂ ಸಹಾಯಕ ಧರ್ಮಗುರುಗಳಾಗಿ ವಂ. ರೊಯ್ ಲೋಬೊರವರು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಧರ್ಮಗುರುಗಳ ಮಾರ್ಗದರ್ಶನದಲ್ಲಿ ವೆಲಂಕಣಿ ಮಾತೆಯ ಕೇಂದ್ರವು ಉಡುಪಿ ಧರ್ಮಪ್ರಾಂತ್ಯದಲ್ಲಿನ ‘ಧರ್ಮಪ್ರಾಂತ್ಯದ ಪುಣ್ಯಕ್ಷೇತ್ರ’ವೆಂದು ಘೋಷಣೆ ಮತ್ತು ಸ್ಟೆಲ್ಲಾ ಮೆರೀಸ್ ದೇವಾಲಯದ ಸುವರ್ಣ ಮಹೋತ್ಸವ ಸಂಭ್ರಮದ ಕಾರ್ಯಕ್ರಮಕ್ಕೆ ಸಂಪೂರ್ಣವಾಗಿ ಸಿದ್ದಗೊಂಡಿದೆ. ವಾರ್ಷಿಕ ಮಹೋತ್ಸವಕ್ಕೆ ಪೂರ್ವಭಾವಿಯಾಗಿ 9ದಿನಗಳ ನೊವೆನಾ ಪ್ರಾರ್ಥನೆ ಈಗಾಗಲೇ ನಡೆಯುತ್ತಿದ್ದು, ಉಡುಪಿ ಮಂಗಳೂರು ಧರ್ಮ ಪ್ರಾಂತ್ಯದ ವಿವಿಧ ಧರ್ಮಗುರುಗಳು ಪ್ರತಿಜ್ಞಾವಿಧಿಯ ನಡೆಸುತ್ತಿದ್ದಾರೆ. ದಿನಂಪ್ರತಿ ಎಂಬಂತೆ ನೊವೆನಾ ಪ್ರಾರ್ಥನೆಗೆ ನೂರಾರು ಭಕ್ತಾದಿಗಳು ಭಾಗವಹಿಸುತ್ತಿದ್ದು, ವೆಲಂಕಣಿ ಮಾತೆಯ ಆಶೀರ್ವಾದವನ್ನು ಪಡೆಯುತ್ತಿದ್ದಾರೆ.

ಲ್ಯಾನ್ಸಿ ಫೆರ್ನಾಂಡಿಸ್ ಕಲ್ಮಾಡಿ ಮಾಜಿ ಅಧ್ಯಕ್ಷರು, ಐಸಿವೈಎಂ ಮತ್ತು ಸಚೇತಕರು, ಐಸಿವೈಎಂ ಕಲ್ಮಾಡಿ.

Leave a Reply

Your email address will not be published. Required fields are marked *

error: Content is protected !!