ನೂಪುರ್ ಶರ್ಮಾ ಹತ್ಯೆಗೆ ಭಾರತಕ್ಕೆ ಬಂದಿದ್ದ ಪಾಕಿಸ್ತಾನದ ವ್ಯಕ್ತಿಯ ಬಂಧನ
ನವದೆಹಲಿ: ಬಿಜೆಪಿಯ ಉಚ್ಚಾಟಿತ ವಕ್ತಾರೆ ನೂಪುರ್ ಶರ್ಮಾ ಅವರನ್ನು ಹತ್ಯೆ ಮಾಡುವ ಉದ್ದೇಶದಿಂದ ಭಾರತದ ಗಡಿ ದಾಟಿ ಬಂದಿದ್ದ ಎನ್ನಲಾದ ಪಾಕಿಸ್ತಾನದ ವ್ಯಕ್ತಿಯೋರ್ವನನ್ನು ರಾಜಸ್ಥಾನದ ಶ್ರೀಗಂಗಾ ನಗರ್ ಜಿಲ್ಲೆಯಲ್ಲಿ ಬಂಧಿಸಲಾಗಿದೆ.
ಗುಪ್ತಚರ ಇಲಾಖೆ ಹಾಗೂ ಇತರ ಸಂಸ್ಥೆಗಳ ಜಂಟಿ ಕಾರ್ಯಾಚರಣೆಯಲ್ಲಿ ಈತನನ್ನು ಬಂಧಿಸಲಾಗಿದ್ದು, ಬಂಧಿತ ಪಾಕಿಸ್ತಾನಿ ವ್ಯಕ್ತಿಯನ್ನು ವಿಚಾರಣೆ ನಡೆಸಲಾಗುತ್ತಿದೆ. ಹಿರಿಯ ಬಿಎಸ್ಎಫ್ ಅಧಿಕಾರಿ ಒಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದು, “ಪಾಕಿಸ್ತಾನ ಮೂಲದ ವ್ಯಕ್ತಿಯನ್ನು ಜುಲೈ 16 ರಂದು ರಾತ್ರಿ 11 ಗಂಟೆ ವೇಳೆಗೆ ಹಿಂದೂಮಲ್ಕೋಟ್ ಗಡಿಯ ಔಟ್ ಪೋಸ್ಟ್ ನಲ್ಲಿ ಬಂಧಿಸಲಾಗಿದೆ. ಗಸ್ತು ತಂಡಕ್ಕೆ ಈತನ ಚಲನವಲನಗಳು ಅನುಮಾನ ಮೂಡಿಸುವಂತಿದ್ದವು. ತಕ್ಷಣವೇ ಆತನನ್ನು ಬಂಧಿಸಲಾಯಿತು” ಎಂದು ತಿಳಿಸಿದ್ದಾರೆ.
ಬಂಧಿತ ವ್ಯಕ್ತಿಯಿಂದ 11 ಇಂಚಿನ ಉದ್ದದ ಚಾಕು, ಧಾರ್ಮಿಕ ಪುಸ್ತಕಗಳು, ಬಟ್ಟೆಗಳು, ಆಹಾರ ಹಾಗೂ ಮರಳನ್ನು ವಶಕ್ಕೆ ಪಡೆಯಲಾಗಿದೆ. ಆತನನ್ನು ರಿಜ್ವಾನ್ ಅಶ್ರಫ್ ಎಂದು ಗುರುತಿಸಲಾಗಿದ್ದು, ಪಾಕಿಸ್ತಾನದ ಉತ್ತರ ಪಂಜಾಬ್ ನ ಮಂಡಿ ಬಹಉದ್ದೀನ್ ನಗರದ ನಿವಾಸಿಯಾಗಿದ್ದಾನೆ. ಪ್ರಾಥಮಿಕ ವಿಚಾರಣೆಯಲ್ಲಿ ಆತ, ಪ್ರವಾದಿ ಮೊಹಮ್ಮದ್ ಬಗ್ಗೆ ಹೇಳಿಕೆ ನೀಡಿದ್ದ ನೂಪುರ್ ಶರ್ಮಾ ಅವರನ್ನು ಹತ್ಯೆ ಮಾಡುವುದಕ್ಕಾಗಿ ಭಾರತಕ್ಕೆ ಬಂದಿದ್ದ, ತನ್ನ ಯೋಜನೆ ಯನ್ನು ಕಾರ್ತಗತಗೊಳಿಸುವುದಕ್ಕೂ ಮುನ್ನ ಅಜ್ಮೀರ್ ದರ್ಗಾಗೆ ಭೇಟಿ ನೀಡಲು ಯೋಜನೆ ಹೊಂದಿದ್ದ ಎಂದು ತಿಳಿದುಬಂದಿದೆ. ಹೆಚ್ಚಿನ ವಿಚಾರಣೆಗಾಗಿ ಸ್ಥಳೀಯ ಪೊಲೀಸರಿಗೆ ಆತನನ್ನು ಒಪ್ಪಿಸಿದ್ದೇವೆ ಎಂದು ಬಿಎಸ್ಎಫ್ ಅಧಿಕಾರಿಗಳು ತಿಳಿಸಿದ್ದಾರೆ.