ಅಕ್ರಮ ಗಣಿಗಾರಿಕೆಯ ಕಾರ್ಯಾಚರಣೆಗಿಳಿದಿದ್ದ ಡಿಎಸ್ಪಿ ಮೇಲೆ ಟ್ರಕ್ ಹರಿಸಿ ಹತ್ಯೆ

ಚಂಡೀಗಢ: ಹರಿಯಾಣದಲ್ಲಿ ಗಣಿಗಾರಿಕೆ ಮಾಫಿಯಾ ತಂಡವನ್ನು ಸೆರೆಹಿಡಿಯುವ ಕಾರ್ಯಾಚರಣೆ ವೇಳೆ ಹಿರಿಯ ಪೊಲೀಸ್ ಅಧಿಕಾರಿ ಮೇಲೆ ಟ್ರಕ್ ಹರಿಸಿ ಹತ್ಯೆ ಮಾಡಿರುವ ಭಯಾನಕ ಘಟನೆ ವರದಿಯಾಗಿದೆ.

ಅರಾವಳಿ ಪರ್ವತ ಶ್ರೇಣಿಯ ಸಮೀಪದ ಪಚಗಾಂವ್‌ನಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ ಮಾಹಿತಿ ಪಡೆದಿದ್ದ ಡಿಎಸ್‌ಪಿ ಶ್ರೇಣಿಯ ಅಧಿಕಾರಿ ಸುರೇಂದ್ರ ಸಿಂಗ್ ಬಿಷ್ಣೋಯ್ ಅವರು ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಪೊಲೀಸ್ ತಂಡದೊಂದಿಗೆ ಸ್ಥಳಕ್ಕೆ ಬಂದಿದ್ದರು.

ಪೊಲೀಸ್ ಸಿಬ್ಬಂದಿಯನ್ನು ಕಂಡು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದವರು ಸ್ಥಳದಿಂದ ಪರಾರಿಯಾಗಲು ಆರಂಭಿಸಿದರು. ಹಿರಿಯ ಅಧಿಕಾರಿ ಸುರೇಂದ್ರ ಸಿಂಗ್ ಬಿಷ್ಣೋಯ್ ದಾರಿಯಲ್ಲಿ ನಿಂತು ಕಲ್ಲು ತುಂಬಿದ ವಾಹನಗಳನ್ನು ನಿಲ್ಲಿಸುವಂತೆ ಸೂಚಿಸಿದರು. ಆದರೆ ಟ್ರಕ್‌ನ ಚಾಲಕ ಆತನ ಮೇಲೆ ಟ್ರಕ್ ಹರಿಸಿದ್ದು, ಪೊಲೀಸ್ ಅಧಿಕಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಪೊಲೀಸರು ಪಕ್ಕಕ್ಕೆ ಜಿಗಿದಿದ್ದು, ಸ್ವಲ್ಪದರಲ್ಲೇ ಪಾರಾಗಿದ್ದಾರೆ. ನಂತರ ಆರೋಪಿಗಳು ಪ್ರದೇಶದಿಂದ ಪರಾರಿಯಾಗಿದ್ದಾರೆ.

ಆಘಾತಕಾರಿ ಘಟನೆಯ ನಂತರ, ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಅವರು ಗಣಿಗಾರಿಕೆ ಮಾಫಿಯಾವನ್ನು ಬಿಡುವುದಿಲ್ಲ. ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ, ಯಾರನ್ನೂ ಬಿಡುವುದಿಲ್ಲ ಎಂದಿದ್ದಾರೆ.

2009 ರ ಹಿಂದಿನ ಸುಪ್ರೀಂ ಕೋರ್ಟ್ ನಿಷೇಧದ ಆದೇಶದ ಹೊರತಾಗಿಯೂ, ಅರಾವಳಿ ಪ್ರದೇಶದ ಹಲವಾರು ಸ್ಥಳಗಳಲ್ಲಿ ಗಣಿಗಾರಿಕೆ ಅವ್ಯಾಹತವಾಗಿ ಮುಂದುವರೆದಿದೆ. ಅರಾವಳಿ ಬಚಾವೋ ಸಿಟಿಜನ್ಸ್ ಮೂವ್ಮೆಂಟ್ ಹೆಸರಿನ ನಾಗರಿಕರ ಗುಂಪು ಈ ವರ್ಷದ ಆರಂಭದಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯನ್ನು ಸಂಪರ್ಕಿಸಿತು. ಈ ಪ್ರದೇಶದಲ್ಲಿ ಕನಿಷ್ಠ 16 ಸ್ಥಳಗಳಲ್ಲಿ ಅಕ್ರಮ ಗಣಿಗಾರಿಕೆ ವ್ಯಾಪಕವಾಗಿ ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದರು

Leave a Reply

Your email address will not be published. Required fields are marked *

error: Content is protected !!