ಗೋವಾ: ಇಬ್ಬರು ಶಾಸಕರನ್ನು ಅನರ್ಹಗೊಳಿಸುವಂತೆ ಸ್ಪೀಕರ್ ಗೆ ‘ಕೈ’ ಮನವಿ

ಪಣಜಿ: ಮಹಾರಾಷ್ಟ್ರದಲ್ಲಿ ರಾಜಕೀಯ ಬಿರುಗಾಳಿಯ ಬೆನ್ನಲ್ಲೇ ನೆರೆ ರಾಜ್ಯ ಗೋವಾ ಕಾಂಗ್ರೆಸ್ ನಲ್ಲೂ ಭಿನ್ನಮತ ಸ್ಫೋಟಗೊಂಡಿದ್ದು, ಬಿಜೆಪಿ ಜೊತೆಗೆ ಸಖ್ಯ ಬೆಳೆಸ್ತಿರೋ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ 11 ಶಾಸಕರ ಪೈಕಿ ಇಬ್ಬರು ಶಾಸಕರಾದ ದ ದಿಗಂಬರ್ ಕಾಮತ್ ಮತ್ತು ಮೈಕೆಲ್ ಲೋಬೋ ಅವರನ್ನು ಪಕ್ಷಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಅನರ್ಹಗೊಳಿಸಬೇಕು ಎಂದು ವಿಧಾನಸಭೆಯ ಸ್ಪೀಕರ್‌ಗೆ ಮನವಿ ಮಾಡಿದೆ.

ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ದಿನೇಶ್ ಗುಂಡೂರಾವ್ ಮೈಕೆಲ್ ಲೋಬೋ ಮತ್ತು ದಿಗಂಬರ್ ಕಾಮತ್ ಆಡಳಿತಾರೂಢ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಪಕ್ಷವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್ ಅವರು ದಿನೇಶ್ ಗುಂಡೂರಾವ್ ಅವರ ಹೇಳಿಕೆ ಆಘಾತ ಮತ್ತು ದಿಗ್ಭ್ರಮೆ ಮೂಡಿಸಿದೆ ಎಂದು  ಹೇಳಿದ ಕೆಲವೇ ಗಂಟೆಗಳ ನಂತರ ಕಾಂಗ್ರೆಸ್ ಸ್ಪೀಕರ್ ಗೆ ಮನವಿ ಮಾಡಿದೆ.

ಕಾಂಗ್ರೆಸ್ ಈ ಹಿಂದೆ ಮೈಕೆಲ್ ಲೋಬೋ ಅವರನ್ನು ವಿರೋಧ ಪಕ್ಷದ ನಾಯಕ ಸ್ಥಾನದಿಂದ ತೆಗೆದುಹಾಕಿತ್ತು. ಆಡಳಿತಾರೂಢ ಬಿಜೆಪಿಯು ಹಣದ ಆಫರ್ ನೀಡುವ ಮೂಲಕ ಕಾಂಗ್ರೆಸ್ ನಾಯಕರನ್ನು ಸೆಳೆಯಲು ಯತ್ನಿಸ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಆದರೆ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಲೋಬೊ ಯಾರೂ ನನ್ನನ್ನು ಸಂಪರ್ಕಿಸಿಲ್ಲ ಮತ್ತು ಪಕ್ಷಾಂತರದ ಯಾವುದೇ ಆಲೋಚನೆ ಇಲ್ಲ ಎಂದು ಹೇಳಿದ್ದಾರೆ.

ಆದರೆ ಈ ಇಬ್ಬರು ನಾಯಕರು ಪಕ್ಷಾಂತರ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್ ರಾವ್ ಹೇಳಿದ್ದಾರೆ. ದಿಗಂಬರ್ ಕಾಮತ್ ವಿರುದ್ಧ ಅನೇಕ ಪ್ರಕರಣಗಳಿದ್ದು ಇವುಗಳಿಂದ ರಕ್ಷಣೆ ಪಡೆಯಲು ಪಕ್ಷಾಂತರಕ್ಕೆ ಮುಂದಾಗಿದ್ರೆ,  ಮೈಕೆಲ್ ಲೋಬೋ ಅಧಿಕಾರ ಮತ್ತು ಸ್ಥಾನದ ಆಸೆಗಾಗಿ ಕೈ ಕೊಡುವ ಪ್ರಯತ್ನದಲ್ಲಿದ್ದಾರೆ ಎಂದಿದ್ದಾರೆ.  ಅಲ್ಲದೆ ಬಿಜೆಪಿ ಅಧಿಕಾರಕ್ಕೆ ಏನು ಬೇಕಾದರೂ ಮಾಡುತ್ತದೆಂದು ವಾಗ್ದಾಳಿ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!