ಜಯಂತ ಕಾಯ್ಕಿಣಿಯವರ ರೂಪಾಂತರ ನಾಟಕಕ್ಕೆ ಸಂಘ ಪರಿವಾರದ ಕಾರ್ಯಕರ್ತರಿಂದ ತಡೆ

ಶಿವಮೊಗ್ಗ ಜು.4: ಜಯಂತ ಕಾಯ್ಕಿಣಿ ಅವರು ಕನ್ನಡಕ್ಕೆ ರೂಪಾಂತರ ಮಾಡಿರುವ ‘ಜತೆಗಿರುವನು ಚಂದಿರ’ ನಾಟಕ  ಮುಸ್ಲಿಮರ ಪರವಾಗಿದೆ ಎಂದು ಆರೋಪಿಸಿ ಸಂಘ ಪರಿವಾರದ ಕಾರ್ಯಕರ್ತರು ನಾಟಕ ಪ್ರದರ್ಶನಕ್ಕೆ ಅಡ್ಡಿಪಡಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಇದೀಗ ಘಟನೆಗೆ ಸಂಬಂಧಿಸಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ನಾಟಕ ಆಯೋಜಕರು ಆತಂಕ ವ್ಯಕ್ತಪಡಿಸಿದ್ದಾರೆ. ಹಾಗೂ ಶಿವಮೊಗ್ಗ ಜಿಲ್ಲೆಯ ಕಲಾವಿದರ ಸಂಘ ಸಭೆ ಕರೆದಿದ್ದಾರೆ. ಬಳಿಕ ಆ ಸಭೆಯಲ್ಲಿಕಾನೂನು ಹೋರಾಟದ ಬಗ್ಗೆ ತೀರ್ಮಾನ ಮಾಡ್ತೇವೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಮಾಧ್ಯಮವೊಂದಕ್ಕೆ ಮಾತನಾಡಿದ ಆಯೋಜಕರಲ್ಲಿ ಒಬ್ಬರಾದ ಕೊಟ್ರಪ್ಪ ಹಿರೇಮಾಗಡಿ ಅವರು, ಬಹಳ ನಿರೀಕ್ಷೆ ಇಟ್ಟಿದ್ದ ನಾಟಕ ಇದಾಗಿತ್ತು. ನನ್ನ ರಂಗಭೂಮಿಯ 20 ವರ್ಷದ ಅನುಭವದಲ್ಲಿ ನಾಟಕ ಅರ್ಧಕ್ಕೆ ನಿಲ್ಲಿಸಿದ ಇಂಥ ಕಹಿ ಘಟನೆಯಾಗಿದ್ದು ಇದೇ ಮೊದಲು. ನಾನು ಎರಡನೇ ತಾಯಿ ಅಂತ ಭಾವಿಸಿ ಪ್ರೀತಿಯಿಂದ, ಬಹಳ ಗೌರವದಿಂದ ಕೆಲಸ ಮಾಡಿಕೊಂಡು ಬಂದಿದ್ದೇನೆ. ಈ ರೀತಿ ನಾಟಕ ನಡೆಯ್ತಾ ಇದ್ದ ಸಂದರ್ಭದಲ್ಲಿ ನಿಲ್ಲಿಸುವಂತ ಅಗತ್ಯ ಏನಿತ್ತು? ಅಲ್ಲಿ ಸರ್ಕಾರಿ ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಸೇರಿದಂತೆ 150 ಮಂದಿ ಪ್ರೇಕ್ಷಕರಿಗೆಲ್ಲ ಘಟನೆಯಿಂದ ಬಹಳ ನೋವಾಗಿದೆ. ಕಟ್ಟುತ್ತಿರುವ ಮನೆಯನ್ನು ಕೊನೆಯ ಹಂತದಲ್ಲಿ ಮಾಡು ಹಚ್ಚುವಂತ ಸಂದರ್ಭದಲ್ಲಿ  ಗೋಡೆಯನ್ನೇ ಬೀಳಿಸಿಬಿಟ್ಟರೆ ಹೇಗಾಗುತ್ತೆ ? ಬೇಜಾರಾಗಲ್ವಾ ಎಂದು ನೊಂದುಕೊಂಡರು. 

ಇದೊಂದು ಆಘಾತಕಾರಿ ಘಟನೆ ಎಂದಿರುವ ಅವರು, ಕಲೆಯನ್ನು ಆರಾಧಿಸಿಕೊಂಡು, ಪೂಜಿಸಿಕೊಂಡು ಬಂದಿರುವ ನಾಡು ನಮ್ಮದು. ಇಂಥದರಲ್ಲಿ ಏಕಾ ಏಕಿ ಬಂದು ನಾಟಕ ನಿಲ್ಲಿಸಿಬಿಟ್ಟರೆ ತಮಾಷೆ ವಿಷಯನಾ ? ಏನಿದ್ದರೂ ಮಾತನಾಡಿ ಮುಗಿಸಬಹುದಿತ್ತು. 

ಆದರೆ ನಾಟಕ ನಡಿತಾ ಇರಬೇಕಾದರೆ ‘ನಮ್ಮ ಸಂಘಟಕರೊಂದಿಗೆ ಮಾತನಾಡಬೇಕು ಅಂತ ಒಂದು

ಗುಂಪು ವೇದಿಕೆ ಕೆಳಗಡೆಯಿಂದ ನನ್ನನ್ನು ಕರೆಯ್ತಾ ಇದ್ದರು. ಆ ಬಳಿಕ ಅವರು ಫೋನ್ ಮಾಡಿದಾಗ ಈ ನಾಟಕ ಮುಗಿದ ಮೇಲೆ ಮಾತನಾಡಬಹುದು ಅಂತ ಕೇಳಿಕೊಂಡಿದ್ದರೂ ಅವರಲ್ಲಿ  ಮೂರು ಮಂದಿ ಏಕಾ ಏಕಿ ವೇದಿಕೆಗೆ ಹತ್ತಿದ್ದಲ್ಲದೆ, ನಾಟಕ ನಿಲ್ಲಿಸುವಂತೆ ಪಟ್ಟು ಹಿಡಿದರು. ಆ ಸಂದರ್ಭದಲ್ಲಿ ನಾಟಕದಲ್ಲಿ ತಂದೆ ಮಗಳನ್ನು ಕಳಿಸಿಕೊಡುತ್ತಾ ಇರುವ  ಒಂದು ಭಾವನಾತ್ಮಕ ದೃಶ್ಯ ಇತ್ತು. ಪ್ರೇಕ್ಷಕರು ಕೂಡ ಕಣ್ಣೀರು ಹಾಕ್ತಾ ಇದ್ದರು. ಅಂತ ದೃಶ್ಯವನ್ನು ಅದೇಗೆ ನಿಲ್ಲಿಸುವುದು ಅಂತಾನೇ ನಮಗೆ ಗೊತ್ತಾಗಿಲ್ಲ. ಅದೆಷ್ಟು ಕೇಳಿಕೊಂಡಿದ್ದರೂ ನಿಲ್ಲಿಸದೇ ಹೋದರೆ ವೇದಿಕೆಯಲ್ಲಿರುವ ಕಲಾವಿದರನ್ನೆಲ್ಲ ಕೊಲ್ಲುತ್ತೇವೆ ಅಂತ ಬೆದರಿಕೆ ಹಾಕಿದರು ಎಂದು ವಿವರಿಸಿದರು. 

ಮಾತ್ರವಲ್ಲದೆ ‘ಮುಸ್ಲಿಮರ ಕತೆ ಯಾಕೆ ಮಾಡ್ತೀರಿ ಟೋಪಿ ಎಲ್ಲ ಹಾಕಿದ್ದಾರೆ ಅಂತ ಮತ್ತೆ ಅವರು ಮೈಕ್ ಕಿತ್ತುಕೊಂಡು ‘ಬೋಲೋ ಭಾರತ್ ಮಾತಾಕಿ ಜೈ ಅಂತ ಘೋಷಣೆ ಕೂಗುತ್ತಾ ನಾಟಕ ಇಲ್ಲಿಗೆ ಮುಗಿಯಿತು. ಈ ವೀರಶೈವ ಕಲ್ಯಾಣ ಮಂದಿರದಲ್ಲಿ ಮುಸ್ಲಿಮರ ನಾಟಕ ಎಲ್ಲ ನಡೆಯಲ್ಲ ಅಂತ ಅಲ್ಲಿದ್ದ ಪ್ರೇಕ್ಷಕರೆನ್ನೆಲ್ಲ ಹೊರಗಡೆ ಕಳುಹಿಸಿದರು. ಬಳಿಕ ಅವರು ತೆರಳಿದ ಮೇಲೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಜನರನ್ನೆಲ್ಲ ಕಳಿಸಿದರು ಎಂದು ಬೇಸರ ವ್ಯಕ್ತಪಡಿಸಿದರು. 

Leave a Reply

Your email address will not be published. Required fields are marked *

error: Content is protected !!