ರಾಜ್ಯ ಸರಕಾರದ ಲಿಖಿತ ಭರವಸೆ-ಪೌರಕಾರ್ಮಿಕರ ಮುಷ್ಕರ ಅಂತ್ಯ

ಬೆಂಗಳೂರು, ಜು.4: ರಾಜ್ಯ ಸರಕಾರವು ಪೌರ ಕಾರ್ಮಿಕರ ಬೇಡಿಕೆಗಳನ್ನು ಈಡೆರಿಸುವ ಕುರಿತು

ಲಿಖಿತ ರೂಪದಲ್ಲಿ ಭರವಸೆ ನೀಡಿರುವ ಹಿನ್ನೆಲೆ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿದ್ದ ಪೌರಕಾರ್ಮಿಕರ ಮುಷ್ಕರವನ್ನು ಇಂದು ಅಂತ್ಯಗೊಳಿಸಲಾಗಿದೆ.

ಮುಷ್ಕರದ ನಾಲ್ಕನೆ ದಿನ ಸೋಮವಾರ ಸಂಜೆ ವೇಳೆಗೆ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೀಡಿದ ಭರವಸೆಗಳನ್ನು ಲಿಖಿತರೂಪದಲ್ಲಿ ಅಧಿಕೃತ ಪ್ರತಿಯಲ್ಲಿ ರಾಜ್ಯ ಸರಕಾರ ಬಿಡುಗಡೆ ಮಾಡಿದ ಹಿನ್ನೆಲೆ ಕರ್ನಾಟಕ ರಾಜ್ಯ ನಗರಪಾಲಿಕೆ, ಪುರಸಭೆ, ನಗರಸಭೆ, ಪೌರಕಾರ್ಮಿಕರ ಮಹಾಸಂಘ ನೇತೃತ್ವದಲ್ಲಿ ನಡೆಯುತ್ತಿದ್ದ ಮುಷ್ಕರವನ್ನು ಕೈಬಿಡಲಾಯಿತು.

ಪೌರಕಾರ್ಮಿಕರ ಮುಷ್ಕರ ಹಿನ್ನೆಲೆಯಲ್ಲಿ ಕಾರ್ಮಿಕರ ಮುಖಂಡರೊಂದಿಗೆ ಶುಕ್ರವಾರ ಸಭೆ ನಡೆಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಎಲ್ಲಾ ಬೇಡಿಕೆಗಳನ್ನು ಈಡೇರಿಸಲಾಗುವುದೆಂದು ಭರವಸೆ ನೀಡಿದ್ದರು. ಆದರೆ, ಮರುದಿನ ಇದು ಲಿಖಿತರೂಪದಲ್ಲಿ ಕೈಸೇರಿಲ್ಲ ಎಂದು ಪೌರಕಾರ್ಮಿಕರು ಮುಷ್ಕರ ಮುಂದುವರೆಸಿದ್ದರು.

ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪೌರಕಾರ್ಮಿಕ ಬೇಡಿಕೆ ಈಡೇರಿಸುವ ಭರವಸೆ ನೀಡಿರುವ ಬಗ್ಗೆ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ ಅವರು ಲಿಖಿತ ರೂಪದಲ್ಲಿ ಪ್ರಕಟಿಸಿದ್ದಾರೆ.

ಅದರಂತೆ ಪೌರಕಾರ್ಮಿಕರನ್ನು ಖಾಯಂಗೊಳಿಸಲು ಸರಕಾರದ ತಾತ್ವಿಕ ಒಪ್ಪಿಗೆ ಇದೆ. ಇದನ್ನು ಕಾನೂನುಬದ್ಧವಾಗಿ ಜಾರಿಗೊಳಿಸಲು ಸಮಿತಿಯೊಂದನ್ನು ರಚಿಸಿ, ಮೂರು ತಿಂಗಳೊಳಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ. ಅದೇರೀತಿ, ನೇಮಕಾತಿ ನಿಯಮಗಳಲ್ಲಿ ಮಾರ್ಪಾಡು ಹಾಗೂ ಸಚಿವ ಸಂಪುಟದ ಅನುಮೋದನೆಯನ್ನು ಹಾಗೂ ಉಭಯ ಸದನಗಳ ಅನುಮೋದನೆಯನ್ನು ಮೂರು ತಿಂಗಳಲ್ಲಿ ಪಡೆಯಲಾಗುವುದು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಪೌರಕಾರ್ಮಿಕರಿಗೆ ಸಾಮಾಜಿಕವಾಗಿ ಗೌರವ, ಸೌಲಭ್ಯ ಹಾಗೂ ಸುರಕ್ಷತೆ ಅಗತ್ಯ ಎನ್ನುವುದು ಸರಕಾರಕ್ಕೆ ಮನವರಿಕೆಯಾಗಿದೆ. ಸರಕಾರವು ಪೌರಕಾರ್ಮಿಕರ ಸಮಸ್ಯೆಗಳಿಗೆ ಮಾನವೀಯತೆಯಿಂದ ಸ್ಪಂದಿಸಲಿದೆ. ಈ ಉದ್ದೇಶದಿಂದಲೇ ಆಯವ್ಯಯದಲ್ಲಿ ಪೌರಕಾರ್ಮಿಕರಿಗೆ ಮಾಸಿಕ 2000 ರೂ.ಸಂಕಷ್ಟ ಭತ್ತೆ ಘೋಷಿಸಿದ್ದು, ಇಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಲಾಗಿದೆ ಎಂದು ಮುಖ್ಯಮಂತ್ರಿಗಳು ಮಾಹಿತಿ ನೀಡಿದ್ದಾರೆ.

ಇದರೊಂದಿಗೆ ಪೌರಕಾರ್ಮಿಕರ ನೇಮಕಾತಿ ಸರಳೀಕರಣಗೊಳಿಸಲು ವಿಶೇಷ ನೇಮಕಾತಿ ನಿಯಮಗಳನ್ನು ರೂಪಿಸಲಾಗುವುದು ಹಾಗೂ ನೇಮಕಾತಿ ನೀತಿಯನ್ನೂ ಜಾರಿಗೆ ತರಲಾಗುವುದು. ಈ ಸಂದರ್ಭದಲ್ಲಿ ಐ.ಪಿ.ಡಿ. ಸಾಲಪ್ಪ ವರದಿ, ಚಂದ್ರಶೇಖರ್ ಸಮಿತಿ ವರದಿ ಹಾಗೂ ರಾಷ್ಟ್ರೀಯ ಕಾನೂನು ಶಾಲೆಯ ವರದಿಗಳನ್ನು ಪರಿಗಣಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜೊತೆಗೆ ಬೇರೆ ರಾಜ್ಯಗಳಲ್ಲಿ ನೀಡಲಾಗುತ್ತಿರುವ ಸೌಲಭ್ಯಗಳ ಮಾಹಿತಿಯನ್ನೂ ಪಡೆಯಲು ಸೂಚಿಸಿದರು.

ಇದರೊಂದಿಗೆ ಪೌರಕಾರ್ಮಿಕರಿಗೆ ಪ್ರತ್ಯೇಕವಾಗಿ ಗೃಹಭಾಗ್ಯ ಯೋಜನೆ ಜಾರಿಗೊಳಿಸಲು ಹೊಸದಾಗಿ ಮಂಜೂರಾತಿ ನೀಡಲಾಗುವುದು. ಪೌರಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವಂತೆ ರೈತ ವಿದ್ಯಾನಿಧಿ ಮಾದರಿಯಲ್ಲಿ ವಿದ್ಯಾರ್ಥಿ ವೇತನ ನೀಡಲಾಗುವುದು. ಪೌರಕಾರ್ಮಿಕ ಮಹಿಳೆಯರಿಗೆ ಸರಕಾರಿ ನೌಕರರಿಗೆ ನೀಡುವಂತೆ ಹೆರಿಗೆ ಸೌಲಭ್ಯಗಳನ್ನು ವಿಸ್ತರಿಸಲಾಗುವುದು ಎಂದು ಹೇಳಿದ್ದಾರೆ.

ಅದೇರೀತಿ, ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ಪೌರಕಾರ್ಮಿಕರಿಗೆ ವಿಶ್ರಾಂತಿ ಕೊಠಡಿ, ಶೌಚಾಲಯ ಸೌಲಭ್ಯ ಒದಗಿಸಬೇಕು. ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತಿ ವಾರ್ಡ್‍ನಲ್ಲಿ ಒಂದು ಅಥವಾ ಎರಡು ವಿಶ್ರಾಂತಿ ಕೊಠಡಿಗಳನ್ನು ನಿರ್ಮಿಸಲು ಸೂಚಿಸಿದ್ದಾರೆ.

ಬಿಬಿಎಂಪಿ ಹೊರತಾಗಿ ರಾಜ್ಯದ ಇತರ ಕಡೆ ಚಾಲ್ತಿಯಲ್ಲಿರುವ ಗುತ್ತಿಗೆ ಪದ್ಧತಿಯನ್ನು ಹಂತ ಹಂತವಾಗಿ ಕಸದ ನಿರ್ವಹಣೆಗೆ ತೊಂದರೆಯಾಗದಂತೆ ನೇರ ಪಾವತಿಯಡಿಯಲ್ಲಿ ತರಲಾಗುವುದು ಎಂದು ಮುಖ್ಯಮಂತ್ರಿ ಅಧಿಕೃತವಾಗಿ ಹೇಳಿದ್ದಾರೆ ಎಂದು ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!