ಎರಡು ದಿನ ಬ್ಯಾಂಕ್ ಬಂದ್ ಮುಂದೂಡಿಕೆ

ನವದೆಹಲಿ: ಬ್ಯಾಂಕ್ ಗಳ ವಿಲೀನ ಪ್ರಕ್ರಿಯನ್ನು ವಿರೋಧಿಸಿ ಸಪ್ಟೆಂಬರ್ 26 ಮತ್ತು 27 ರಂದು ಕರೆ ನೀಡಿದ್ಧ ಸಾರ್ವಜನಿಕ ಬ್ಯಾಂಕುಗಳ ಬಂದನ್ನು ಮುಂದೂಡಲಾಗಿದೆ. ಸಾರ್ವಜನಿಕ ವಲಯದ ಬ್ಯಾಂಕ್ ಗಳ ವಿಲೀನಕ್ಕೆ ಸಂಬಂಧಿಸಿದ ವಿಚಾರದಲ್ಲಿ ಇರುವ ಆಕ್ಷೇಪಗಳನ್ನು ಪರಾಮರ್ಶಿಸುವುದಾಗಿ ಹಣಕಾಸು ಕಾರ್ಯದರ್ಶಿ ರಾಜೀವ್ ಕುಮಾರ್ ಖಾತ್ರಿ ನೀಡಿದ್ದರಿಂದ ಸಾರ್ವಜನಿಕ ಬ್ಯಾಂಕ್ ಗಳ ಅಧಿಕಾರಿಗಳ ಒಕ್ಕೂಟವು ಎರಡು ದಿನದ ಬಂದ್ ಅನ್ನು ಮುಂದೂಡುವ ಬಗ್ಗೆ ನಿರ್ಣಯವನ್ನು ತೆಗೆದುಕೊಂಡಿದ್ದಾರೆ.

ನವದೆಹಲಿಯಲ್ಲಿ ರಾಜೀವ್ ಕುಮಾರ್ ಅವರನ್ನು ಭೇಟಿ ಮಾಡಿದ ನಂತರ ನಾಲ್ಕು ಬ್ಯಾಂಕ್ ಒಕ್ಕೂಟಗಳ ಪ್ರತಿನಿಧಿಗಳು ಸೋಮವಾರ ಹೇಳಿಕೆ ನೀಡಿದ್ದಾರೆ. ಮೆಗಾ ಬ್ಯಾಂಕ್ ವಿಲೀನ ಘೋಷಣೆಯೂ ಸೇರಿದಂತೆ ಇತರ ಆಕ್ಷೇಪಗಳ ಬಗ್ಗೆ ತಿಳಿದುಕೊಳ್ಳಲು ಸಮಿತಿ ರಚಿಸಲು ಸರಕಾರ ಒಪ್ಪಿಕೊಂಡಿದೆ ಎಂದು ಒಕ್ಕೂಟಗಳ ನಾಯಕರು ತಿಳಿಸಿದ್ದಾರೆ.

ಸಾರ್ವಜನಿಕ ವಲಯದ ಬ್ಯಾಂಕ್ ಗಳನ್ನು ನಾಲ್ಕಕ್ಕೆ ಇಳಿಸುವುದರ ವಿರುದ್ಧ ಎರಡು ದಿನಗಳ ಬಂದ್ ನಡೆಸಲು ನಾಲ್ಕು ಬ್ಯಾಂಕ್ ಅಧಿಕಾರಿಗಳ ಒಕ್ಕೂಟವು ಎಚ್ಚರಿಕೆ ನೀಡಿತ್ತು. ಈ ಹಿಂದೆ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ನೀಡಿದ ಮಾಹಿತಿ ಪ್ರಕಾರ, ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್ ಕಾನ್ಫಡರೇಷನ್, ಆಲ್ ಇಂಡಿಯಾ ಬ್ಯಾಂಕ್ ಆಫೀಸರ್ಸ್ ಅಸೋಸಿಯೇಷನ್, ಇಂಡಿಯನ್ ನ್ಯಾಷನಲ್ ಬ್ಯಾಂಕ್ ಆಫೀಸರ್ಸ್ ಕಾಂಗ್ರೆಸ್ ಮತ್ತು ನ್ಯಾಷನಲ್ ಆರ್ಗನೈಸೇಷನ್ ಆಫ್ ಬ್ಯಾಂಕ್ ಆಫೀಸರ್ಸ್ ನಿಂದ ಅಖಿಲ ಭಾರತ ಮಟ್ಟದ ಬಂದ್ ಗೆ ಕರೆ ನೀಡಲಾಗಿತ್ತು.

Leave a Reply

Your email address will not be published. Required fields are marked *

error: Content is protected !!