ತ್ರಾಸಿ : ಅಂತರ್ ಜಿಲ್ಲಾ “ಮಾಸ್ಟರ್ ಮೂವ್ – 2019” ಚೆಸ್ ಪಂದ್ಯಾವಳಿ
ಮನುಷ್ಯನ ಬುದ್ಧಿಶಕ್ತಿಯೂ ದೈಹಿಕ ಶಕ್ತಿಗಿಂತ ಮಿಗಿಲಾದುದು. ಮನುಷ್ಯ ತನ್ನ ಬುದ್ಧಿಯ ಬಲದಿಂದಲೇ ದೈಹಿಕವಾಗಿ ತನಗಿಂತ ಹೆಚ್ಚು ಬಲಶಾಲಿಯಾದ ಪ್ರಾಣಿಗಳಿಗಿಂತ ಅಧಿಕ ಶಕ್ತಿಶಾಲಿ ಆಗಿದ್ದಾನೆ ಎಂದು ಮಂಗಳೂರಿನ ಡೆರಿಕ್ಸ್ ಚೆಸ್ ಶಾಲೆ ನಿರ್ವಾಹಕ ನಿರ್ದೇಶಕ ಡೆರಿಕ್ ಪಿಂಟೋ ಹೇಳಿದರು.
ತ್ರಾಸಿಯ ಡಾನ್ ಬಾಸ್ಕೊ ಸ್ಕೂಲ್ ನಲ್ಲಿ ಶನಿವಾರ ನಡೆದ ಸಿಬಿಎಸ್ಇ ಮತ್ತು ಐಸಿಎಸ್ಇ ಶಾಲೆಗಳ ವಿಭಾಗ ಮಟ್ಟದ ಅಂತರ್ ಜಿಲ್ಲಾ “ಮಾಸ್ಟರ್ ಮೂವ್ 2019” ಚೆಸ್ ಪಂದ್ಯಾವಳಿ ಜ್ಯೋತಿ ಬೆಳಗಿಸಿ ಮತ್ತು ಚೆಸ್ ಬೋರ್ಡ್ ನಲ್ಲಿ ಮೊದಲ ಚಾಲನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಚೆಸ್ ನಿಜ ಜೀವನಕ್ಕೆ ತುಂಬಾ ಹತ್ತಿರವಾಗಿದೆ. ಚೆಸ್ ಮಕ್ಕಳಲ್ಲಿ ತಾಳ್ಮೆಯ ಜೊತೆಗೆ ಬುದ್ಧಿ ಕೌಶಲ ವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಚೆಸ್ ಆಟ ಬುದ್ಧಿಯನ್ನು ಹರಿತಗೊಳಿಸುತ್ತದೆ. ಮನಸ್ಸನ್ನು ದೃಢಗೊಳಿಸುವ ವ್ಯಕ್ತಿಯ ಭಾವನಾತ್ಮಕ ಸಮತೋಲನವನ್ನು ರಕ್ಷಿಸುತ್ತದೆ. ಅದಕ್ಕಾಗಿಯೇ ಚೆಸ್ ಅನ್ನು ಬೌದ್ಧಿಕ ಕ್ರೀಡೆಗಳ ರಾಜ ಎಂದು ಕರೆಯಲಾಗುತ್ತದೆ ವಿದ್ಯಾರ್ಥಿಗಳು ಅದರಲ್ಲಿ ತೊಡಗುವುದರಿಂದ ಅವರ ದೇಶಕ್ಕೆ ಉದ್ದೀಪನಗೊಳ್ಳುತ್ತದೆ ಎಂದು ಡೆರಿಕ್ ಪಿಂಟೋ ಹೇಳಿದರು.
ಸಂಸ್ಥೆಯ ಪ್ರಾಂಶುಪಾಲ ಫಾ. ಮ್ಯಾಕ್ಸಿಮ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿ ಡೆರಿಕ್ ಚೆಸ್ ಶಾಲೆಯ ನಿರ್ದೇಶಕ ಹಾಗೂ ಪ್ರಧಾನ ತೀರ್ಪುಗಾರ ಪ್ರಸನ್ನ ರಾವ್ ಸ್ಪರ್ಧಾ ಕೂಟಕ್ಕೆ ಶುಭವನ್ನು ಹಾರೈಸಿದರು.ಸಂಸ್ಥೆಯ ಆಡಳಿತ ಅಧಿಕಾರಿ ಫಾ. ಲಿಯೋ ಪಿರೇರಾ, ಉಪ ಪ್ರಾಂಶುಪಾಲ ಹಾಗೂ ಸಂಚಾಲಕ ಫಾ. ಮರ್ವಿನ್ ಫೆರ್ನಾಂಡಿಸ್, ಶಿಕ್ಷಕ ರಕ್ಷಕ ಸಂಘದ ಪ್ರತಿನಿಧಿ ಕಿರಣ್ ಲೋಬೋ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿವಿಧ ಶಾಲೆಗಳಿಂದ 14 ಮತ್ತು 17 ವಯಸ್ಸಿನ ಒಳಗಿನ ಎರಡು ವಿಭಾಗಗಳಲ್ಲಿ 40 ತಂಡಗಳು ಭಾಗವಹಿಸಿದ್ದವು.ಶಿಕ್ಷಕ ಶಿಕ್ಷಕಿ ಟೀನಾ ವಂದಿಸಿದರೆ, ವಿದ್ಯಾರ್ಥಿಗಳಾದ ಅಲ್ರಿಕ್ ನಜರೆತ್ ಮತ್ತು ಡಿಯೋನ್ ಪಿಂಟೊ ಕಾರ್ಯಕ್ರಮ ನಿರೂಪಿಸಿದರು.