ಜೂನ್ ತನಕ ಮೂರನೇ ಲಾಕ್‌ಡೌನ್ ಕನ್ಫರ್ಮ್…?
(ಸ್ಪೆಶಲ್ ರಿಪೋರ್ಟ್- ಎಸ್ಸೆನ್ ಕುಂಜಾಲ್)
ಕರೆಂಟ್ ಬಿಲ್ಲು ಫ್ರೀ ಆಗುತ್ತಾ? ಎಲ್ಲಾ ಸಿಮ್‌ಗಳಿಗೆ ಒಂದೆರಡು ತಿಂಗಳ ಮಟ್ಟಿಗೆ ಅಮೌಂಟ್ ಪೇ ಮಾಡದೇ ತನ್ನಿಂದತಾನೇ ಆಕ್ಟಿವ್ ಆಗಿರುತ್ತಾ? ಎಸ್.ಬಿ ಅಕೌಂಟಿಗೆ ಸ್ಪಲ್ಪನಾದ್ರೂ ಅಮೌಂಟು ರಿಸರ್ವ್ ಬ್ಯಾಂಕಿಂದ ತನ್ನಿಂದ ತಾನೇ ಟ್ರಾನ್ಸ್‌ಫರ್ ಆಗ್ಬಿಡುತ್ತಾ? ಮನೆ ಬಾಗಿಲಿಗೆ ಹಾಲಿನ ಪ್ಯಾಕೆಟ್ಟು ಬಂದು ಬೀಳುತ್ತಾ? ಹೊಲದಲ್ಲಿ ಕೊಳೆಯುತ್ತಿರುವ ಕೃಷಿಕ ಬೆಳೆಸಿದ ಹಣ್ಣು-ಹಂಪಲು-ತರಕಾರಿ-ದವಸ-ಧ್ಯಾನಕ್ಕೆ ಸರಕಾರವೇ ಪೇಮೆಂಟ್ ಮಾಡಿ ಸ್ವಯಂಸೇವಕರ ಮೂಲಕ ಮನೆ ತನಕ ತಲುಪಿಸ್ತಾರಾ? ಹಾಸ್ಪಿಟಲಿಂದ ಮನೆಗೆ ದೂಡಲ್ಪಟ್ಟ ಪೇಷಂಟುಗಳಿಗೆ ಬೆಡ್ಡಿನ ತನಕ ಮೆಡಿಸಿನ್ ರೀಚ್ ಮಾಡಿಸ್ತಾರಾ?
ದೇವರು ವರವನು ಕೊಟ್ರೇ.. ನಾ ನಿನ್ನೇ ಕೋರುವೆ..ಚೆಲುವಾ….
ಇಂಥದ್ದೇ ಪ್ರಶ್ನೆಗಳನ್ನ ಹಾಗೂ ನಿರೀಕ್ಷೆಗಳನ್ನ ಇಟ್ಕೊಂಡೇ ‘ಕಾಮನ್ ಮ್ಯಾನ್’ ತನ್ನ ಬಾಯಿಯನ್ನ ಆ….. ಅಂತ ತೆರ್‍ಕೊಂಡೇ ಟೀವಿ ಆನ್ ಮಾಡ್ಕೊಂಡು ಕೂತಿದ್ದ ಕ್ಷಣವೇ ಇವತ್ತಿನ ಹತ್ತು ಗಂಟೆ! ಯಸ್! ಅಂದುಕೊಂಡಂತೆ ಎಕ್ಸಾಕ್ಟ್ ಟೆನ್ ಒ ಕ್ಲಾಕ್‌ಗೆ ನಮ್ಮ ಮೋದಿ ಟೀವಿ ಸ್ಕ್ರೀನಿನ ಮುಂದೆ ಕಾಣಿಸಿಯೇಕೊಂಡರು. ‘ಸಾಥಿಯೋ’ ಎಂಬ ವ್ಯಾಖ್ಯಾನದೊಂದಿಗೆ ಅದ್ಯಾವ ಕ್ಷಣದಲ್ಲಿ ‘ರಿಕ್ವೆಸ್ಟ್’ ಪರಿಯಲ್ಲಿ ಮಾತಿಗೆ ಶುರುವಿಟ್ಟುಕೊಂಡರೋ ಆವಾಗಲೇ ಬಡವರಲ್ಲಿ, ಕೂಲಿ ಕಾರ್ಮಿಕರಲ್ಲಿ ಕೃಷಿಕರ ಹೊಟ್ಟೆಯಲ್ಲಿ ಒಂಥರಾ ತಳಮಳ ಶುರುವಿಟ್ಟುಕೊಂಡಿದೆ. ಒಂದರ್ಥದಲ್ಲಿ ನಮ್ಮ ಬಹುತೇಕ ಇಂಡಿಯನ್ಸುಗಳು ಮೋದಿಯವರನ್ನ ಕೇವಲ ಪ್ರಧಾನ ಮಂತ್ರಿಯಾಗಿ ಕಂಡಿಲ್ಲ; ಅವರನ್ನ ‘ದೇವರು’ ಅಂತಲೇ ನಂಬಿಕೊಂಡು ಬಂದವರಿದ್ದಾರೆ. ಅವರು ‘ಚಪ್ಪಾಳೆ ಹೊಡೀರಿ’ ಅಂದಾಗ ಜಾತಿ-ಮತ-ಪಕ್ಷ-ಪ್ರಾಂತ್ಯ ಭೇದ ಮರೆತು ಚಪ್ಪಾಳೆ ತಟ್ಟಿದ್ದಾರೆ. ‘ಜ್ಯೋತಿ ಬೆಳಗಿಸಿ’ ಅಂತ ಮೋದೀಜಿ ಕೇಳಿಕೊಂಡಾಗ ಬಹುಪಾಲು ಭಾರತೀಯರು ‘ದೀಪವೋ, ಕ್ಯಾಂಡಲ್ಲೋ, ಟಾರ್ಚೋ, ಮೊಬೈಲೋ ಯಾವ್ದು ಕೈಲಾಗುತ್ತೆ ಅದ್ರಲ್ಲಿ ಲೈಟ್ ಬೆಳಗಿಸಿ ನಿಮ್ಮ ಮಾತಿಗೆ ನಾವು ಬದ್ಧರು’ ಎಂದು ರುಜುಪಡಿಸಿದ್ದಾರೆ.
ಆರತಿ ಬೆಳಗೋಣಾ…. ದೇವಂಗೆ…. ಕತ್ತಲ ಕಳೆಯುತಾ.. ಬಾಳು ಬೆಳಗೆಂದೂ.. ಇದೆಲ್ಲವನ್ನ ಮೋದೀಜಿ ಒಬ್ಬ ಪ್ರಧಾನಿ ಅಂತ ಯಾರೂ ಮಾಡಿದ್ದಲ್ಲ. ‘ಭಾರತಾಂಬೆಯ ನಾವೆಲ್ಲಾ ಒಂದು’ ಎಂಬುದನ್ನು ಸಾಬೀತುಪಡಿಸಿದ್ದಾರೆ. ನೀವು ನಂಬಲಾರಿರಿ; ಮಾಜಿ ಪ್ರಧಾನಿ, ಜಾತ್ಯತೀತ ಪಕ್ಷದ ನೇತಾರ ದೇವೇಗೌಡರೇ ಮೋದಿ ಹೇಳಿದ್ಹಂಗೆ ದೀಪ ಬೆಳಗಿಸಿ ಕೈಮುಗಿದಿದ್ದಾರೆ ಎಂದರೆ ಇದು ಅನ್ಯಥಾ ಭಾವದಿಂದಲ್ಲ; ಆಗ ಅವರು ಕಂಡದ್ದು ಮೋದಿಯನ್ನು ‘ಗಾಡ್’ ಎಂಬಾರ್ಥದಲ್ಲಿ ಕಂಡಿರಬಹುದು. ಈಗ ನೋಡಿ; ಹಾಗೇ ಎಲ್ಲರೂ ನಾಡಿದ್ದು ಒಂದು ದಿನ ಮಧ್ಯಾಹ್ನ 2 ರಿಂದ 3 ರ ತನಕ ‘ಶವಾಸನ’ ಮಾಡಿ ಅಂತ ಮೋದಿ ಹೇಳಿದರೆ ಬಿಲ್‌ಕುಲ್ ಯಾರೂ ನೋ ಅನ್ನಲಾರರು ಅಲ್ಲವೇ?!
ಸಪ್ತಪದೀ..ಇದು ಸಪ್ತಪದೀ..ಈ ಏಳು ಶರ್ತಗಳಾ.. ಸಂಬಂಧಾ..
ಹೌದು; ಒಪ್ಪಿಕೊಳ್ಳಂಥದ್ದೇ. ನೂರಾ ಮೂವತ್ತು ಕೋಟಿ ಜನರ ಮುಂದೆ ವಾಸ್ತವತೆಯನ್ನ ಬಿಚ್ಚಿಡುವಂಥ ಪ್ರಧಾನಿಯನ್ನ ಭಾರತ ಈವರೆಗೂ ಕಂಡಿರಲಾರದು. ಅಂತಹ ಮಾತಿನ ಮೋಡಿಗಾರ ನಮ್ಮ ಮೋದೀಜಿ. ಟೀವಿ ಪರದೆಯಲ್ಲಿ ಕಾಣಿಸಿಕೊಂಡ ಅವರ ಮಾತುಗಳಲ್ಲಿ ಜನಪರ ಕಾಳಜಿ ಇತ್ತು. ಶ್ರೀಮಂತ, ಅಭಿವೃದ್ಧಿ ರಾಷ್ಟಗಳೂ ಅಧ:ಪತನದತ್ತ ಸಾಗುತ್ತಿವೆ ಎಂಬುದನ್ನೂ ಸೂಚ್ಯವಾಗಿ ಬಿಂಬಿಸಿದ್ದಾರೆ ಅನ್ನುವುದರಲ್ಲೂ ತಕರಾರಿಲ್ಲ. ಜನರಿಗೂ ಒಂದಿಷ್ಟು ಟಾಸ್ಕ್ ಕೊಟ್ಟು ರೆಸ್ಪಾನ್ಸಿಬಿಲಿಟಿಯನ್ನೂ ಹೊರಿಸಿರುವುದು, ಸಪ್ತಸೂತ್ರಗಳನ್ನು ಹೇಳ್ತಾ ಸಪ್ತಪದಿ ತುಳಿದಲ್ಲಿ ವಿಜಯಪ್ರಾಪ್ತಿ ಎಂಬುದಾಗಿ ಜನರನ್ನ ಹುರಿದಿಂಬಿಸ್ತಾ, ರಿಕ್ವೆಸ್ಟಿಂಗ್ ಮೋಡ್‌ನಲ್ಲಿ ಮಾತನಾಡ್ತಾ ಎಲ್ಲರಲ್ಲಿ ‘ಕನ್ಸರ್ನ್’ ತೋರ್‍ಸಿದ್ದಾರೆ ಎಂಬುದಂತೂ ಮೆಚ್ಚತಕ್ಕಂಥದ್ದೇ. ಎಪ್ರಿಲ್ ಇಪ್ಪತ್ತಾಗಲಿ, ಆ ನಂತರ ರಿಲ್ಯಾಕ್ಸೇಶನ್ ಕೊಡ್ತೇನೆ ಎಂಬಂತೆ ಧೈರ್ಯ ಕೂಡಾ ತುಂಬಿದ್ದಾರೆ. ವಿಸ್ತೃತ ಹೊಸ ಗೈಡ್‌ಲೈನ್ ನಾಳೆ ನಾಡಿದ್ದಿನೊಳಗಾಗಿ ರಾಜ್ಯ ಸರಕಾರಕ್ಕೆ ಕಳುಹಿಸುವುದಾಗಿಯೂ ಭರವಸೆಯ ಮಾತುಗಳನ್ನಾಡಿದ್ದಾರೆ. ಹೀಗೆಯೇ ಬಡವ-ಮಧ್ಯಮ-ಶ್ರೀಮಂತ ಎಲ್ಲಾ ವರ್ಗದವರ ಬಗ್ಗೆಯಂತೂ ಕಾಳಜಿ ಇದ್ದದ್ದು ನಮ್ಮ ‘ನಮೋ’ ಮಾತಿನಲ್ಲಿ ಎದ್ದು ಕಾಣುತ್ತಿತ್ತು.
ನಮ್ಮನೆಲ್ಲಾ ಕಾಯ್ವ ದ್ಯಾವ್ರೇ.. ನೀ… ಎಲ್ಲಿ ಕುಂತಿದ್ದೀ..
ಹೀಗೇ ಮೋದೀಜಿ ಹತ್ತೂವರೆಗೆ ಮಾತು ಮುಗಿಸುತ್ತಿದ್ದಂತೆ, ಒಬ್ಬೊಬ್ಬರಾಗಿಯೇ ಕರೆ ಮಾಡತೊಡಗಿದ್ದಾರೆ. ಆಟೋರಿಕ್ಷಾ ಡ್ರೈವರ್ ಶಂಕರ ಮೋದಿ ಅರ್ಧ ಗಂಟೆ ಸ್ಪೀಚ್ ಮಾಡಿದ್ರಲ್ವಾ.. ನನ್ನಂಥ ಡ್ರೈವರುಗಳ ಬಗ್ಗೆ ಏನ್ ಸೊಲ್ಯೂಶನ್ ಕೊಟ್ಟಿದ್ದಾರೆ? ‘ಆಹಾರ ಸ್ಟಾಕ್ ಇದೆ’ ಅಂತಾರೆ. ಇಪ್ಪತ್ತೊಂದು ದಿನವಾಯ್ತು. ಇನ್ನೂ ರೀಚ್ ಆಗಿಲ್ಲ. ಇನ್ಯಾವಾಗ ಮುಟ್ಟಿಸ್ತಾನಂತೆ ಅವ? ಅಂತ ಪ್ರಶ್ನಿಸಿದ್ದಾರೆ. ಎಳನೀರು ಮಾರಿ ಸಂಸಾರ ಸಾಗಿಸ್ತಿದ್ದ ನಾರಾಯಣ ಸಾಮಾನ್ಯ ಜನರ ಬಗ್ಗೆ ಕಾಳಜಿ ಇಲ್ಲದ ಸ್ಪೀಚ್ ಇದಾಗಿದೆ. ಟೀವಿಯವರಿಗೆ ಅಡ್ವರ್ಟೈಸ್‌ಮೆಂಟ್ ಅಂತ ಒಂದಿಷ್ಟು ಕೋಟಿ ಸುರೀತಾನೆ. ಮತ್ತೆ ಬಿಲ್ಡಪ್ ಕೊಡ್ತಾನೆ. ಅವಂದು ಒಂಥರಾ ಹಿಟ್ಲರ್ ಸ್ಟೈಲು ಅಂತ ಕ್ಯಾತೆ ತೆಗಿದಿದ್ದಾನೆ. ಮೀನುಗಾರ ಆನಂದ ಕುಂದರ್ ನಾವು ಹಿಡಿದು ತಂದ ಮೀನನ್ನು ಎಲ್ಲೆಲ್ಲಿ ಖಾಲಿ ಜಾಗ ಸಿಗುತ್ತಾ ಅಲ್ಲೆಲ್ಲಾ ಎಸೆದಿದ್ದೇವೆ. ನಾವು ಕಷ್ಟಪಟ್ಟು, ರಿಸ್ಕ್ ತೆಕೊಂಡು ತಂದ ಮೀನಿಗೆ ಬೆಲೆ ಇಲ್ಲದಾದಾಗ ಈ ಮೋದಿ ಅದೇನ್ ಪರಿಹಾರ ಕೊಡ್ತಾನಾ?ಅಂತ ವಾದಕ್ಕಿಳಿದರೆ, ತನ್ನ ಹೊಲದಲ್ಲಿ ಗುಳ್ಳ ಬದನೆಕಾಯಿ ಬೆಳೆಸಿದ ಮನೋಹರ ಸುವರ್ಣ ಗೊಬ್ಬರ ತಂದು ಹಾಕಿ ಬೆವರಿಳಿಸಿಕೊಂಡು ಒಂದು ವರ್ಷಕ್ಕೆ ಖರ್ಚಿಗೆ ಇರಲಿ ಅಂತ ಬೆಳೆಸಿದ ಗುಳ್ಳ ಬದನೆಕಾಯಿ ಗದ್ದೆಯಲ್ಲೇ ಬಿದ್ದು ಸಾಯ್ತಿದೆ. ಇದಕ್ಯಾರು ಪರಿಹಾರ ಕೊಡ್ತಾರೆ? ಅಂತ ಕಣ್ಣೀರಿಡ್ತಿದ್ದಾರೆ.
ಈ ಬಂಧನಾ.. ಜನುಮ ಜನುಮದ ಅನುಬಂಧನಾ..
ಇಲ್ಲಿಗೆ ಮುಗೀತು ಅಂದ್ಕೊಂಡಿದ್ದೀರಾ? ಫೋನಿಂದ ಮೇಲೆ ಫೋನು! ಎಲ್ಲರ ಬಾಯಲ್ಲೂ ಒಂದೇ ಮಾತು. ಚೌಕೀದಾರ ನಮ್ಮನ್ನ ಬೋಳಿಸಿ ಬಿಟ್ಟ ಎಂಬಂಥ ವೇದನೀಯ ನುಡಿಗಳವು. ಹಳ್ಳಿಯಿಂದ ಬಂದ ದೂರವಾಣಿ ಕರೆಯಲ್ಲಿ ಮಾತನಾಡಿದ ಶಾಂಭವಿ ಅಲ್ಲಾರ್ರೀ.. ನಿಮ್ಗೇ ಪೇಟೇಲಿರೋರಿಗೆ ‘ಸ್ವಿಗ್ಗಿ’ ಇದೆ. ‘ಝೊಮೆಟೋ’ ಇದೆ. ಆರ್ಡರ್ ಮಾಡಿದ್ರೆ ಅವ್ರು ತಂದುಕೊಡ್ತಾರೆ. ನಮಗ್ಯಾರ್ರೀ ತಂದು ಕೊಡ್ತಾರೆ. ಟೀವಿಲೀ ಮಾತಾಡುದು ಈಸೀ. ಪ್ರಾಕ್ಟಿಕಲ್ ಅವಂಗೆ ಅರ್ಥ ಆಗ್ಬೇಕಲ್ವಾ? ಅಂತ ದೂಷಿಸ್ತಾಳೆ.
ಲಾಸ್ಟ್ ಸಿಪ್!
ಈ ಮಧ್ಯೆ ದೆಹಲಿಯಿಂದ ಮಾತನಾಡಿದ ಬಾತ್ಮೀದಾರ ಕಮಲಾಕರ ಅಂದ ಮಾತೇನು ಗೊತ್ತಾ? ಇದು ಮೇ ಮೂರಕ್ಕೆ ಎಂಡ್ ಆಗಲ್ಲ. ಆ ದಿನದಂದು ಮೋದಿ ಮತ್ತೆ ಟೀವಿ ಸ್ಕ್ರೀನಿನ ಮುಂದೆ ಕಾಣಿಸಿಕೊಳ್ತಾರೆ. ಥರ್ಡ್ ಸ್ಟೇಜ್ ಜೂನ್ ತನಕ ಕಂಟಿನ್ಯೂ ಆಗುತ್ತೆ ಅಂತಾರಂತೆ! ನನ್ನೆಲ್ಲಾ ಓದುಗರಿಗೆ ‘ಬಿ ರೆಡಿ ಫಾರ್ ಮೋರ್ ಡೇಸ್’ ಅನ್ನುತ್ತಾ ಪರಿಸ್ಥಿತಿ ಹೀಗೇ ಮುಂದವರೆದರೆ ಸೀರಿಯಲ್ ಸುಸೈಡ್ಸ್ ಡೆಫಿನೆಟ್, ಆದ್ರಲ್ಲೂ ಕೊರೋನಾದಲ್ಲಿ ಸಾಯೋಕ್ಕಿಂತ ಹೆಚ್ಚು ಜನ ಹೀಗೇ ಲಾಕ್‌ಡೌನ್‌ನಿಂದ ಲಾಕ್ ಆಗ್ಬಿಟ್ಟು ಸತ್ತು ಬಿಡ್ತಾರೆ ಎಂಬ ಬಗ್ಗೆಯೂ ಅಸಂಖ್ಯ ರೈತಾಪಿ ಬಡಜನ ಪ್ರತಿಕ್ರಿಯಿಸಿದ್ದಾರೆ. ಈ ಅಂಕಣ ಮುಗಿಸುವ ಮುನ್ನ ಒಬ್ಬಾಕೆ ಕರೆ ಮಾಡಿದ್ದಾಳೆ. ಬದುಕಲಾಗದ ಸ್ಥಿತಿಯಲ್ಲಿದ್ದೇನೆ ಅಂತ ಅರಚಿಕೊಂಡಿದ್ದಾಳೆ. ನಂಗೆ ಸರಿಯಾದ ಸೆಲ್ಯೂಶನ್ ಸರಕಾರ ಕೊಡದ್ರಿದೆ ಸುಸೈಡ್ ಗ್ಯಾರಂಟಿ ಅಂದಿದ್ದಾಳೆ. ಅವಳ ಬಗ್ಗೆ ನಾಳೆ ನಿಮ್ಮೊಂದಿಗೆ ಮಾತಾಡ್ತೇನೆ; ಪ್ಲೀಸ್ ವೈಟ್… -ಎಸ್ಸೆನ್ ಕುಂಜಾಲ್
ಯೆಸ್, ನಿಮ್ಮ ಮಾತುಗಳು ಸತ್ಯಕ್ಕೆ ಹತ್ತಿರವಾಗಿವೆ. ಪೊಲೀಸ್ ಎಷ್ಟೇ ಕಂಟ್ರೋಲ್ ಮಾಡಿದರೂ ಈ ಜನ ಬೀದಿ ಬೀದಿ ಗಳಲ್ಲಿ ತಿರುಗುತ್ತಿರುವುದನ್ನು ಗಮನಿಸಿದರೆ, ಲಾಕ್ ಡೌನ್ ವಿಸ್ತರಣೆ ಗ್ಯಾರೆಂಟಿ ಅನ್ನಿಸುತ್ತಿದೆ.