ಯುವ ಮದ್ದಲೆಗಾರ ನಿಧನ
ಬಂಟ್ವಾಳ: ತೆಂಕುತಿಟ್ಟು ಯಕ್ಷಗಾನದ ಯುವ ಕಲಾವಿದ ಕಡಬ ವಿನಯ ಆಚಾರ್ಯ ಅವರು ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆ ಯೊಂದರಲ್ಲಿ ನಿಧನ ಹೊಂದಿದರು. ಅವರಿಗೆ 33 ವರ್ಷ ವಯಸ್ಸಾಗಿತ್ತು. ಮೃತರು ತಾಯಿ,ಮೂವರು ಸಹೋದರರು,ಒರ್ವ ಸಹೋದರಿ ಸಹಿತ ಅಪಾರ ಬಂಧು,ಬಳಗವನ್ನು ಅಗಲಿದ್ದಾರೆ.
ಮದ್ದಲೆಗಾರನಾಗಿ ಯಕ್ಷ ರಂಗದಲ್ಲಿ ಪ್ರಸಿದ್ದಿಯಾಗಿದ್ದ ವಿನಯ ಆಚಾರ್ಯ ಅವರು ಅನಾರೋಗ್ಯದ ಬಳಿಕ ಬಂಟ್ವಾಳ ತಾಲೂಕಿನ ವಾಮದಪದವು ಸಮೀಪದ ಬಸ್ತಿ ಕೋಡಿಯಲ್ಲಿರುವ ಅಣ್ಣನ ಮನೆಯಲ್ಲಿ ವಾಸವಿದ್ದರು.
ತಂದೆ ಕಡಬ ನಾರಾಯಣ ಆಚಾರ್ಯ ಅವರು ಪ್ರಸಿದ್ಧ ಮದ್ದಲೆಗಾರರಾಗಿದ್ದರು. ಯುವ ಪ್ರತಿಭಾನ್ವಿತ, ಭರವಸೆಯ ಮದ್ದಲೆಗಾರರಾಗಿದ್ದ ಕಡಬ ವಿನಯ ಆಚಾರ್ಯ ಹೊಸನಗರ, ಎಡನೀರು, ಹನುಮಗಿರಿ ಮೇಳದಲ್ಲಿ ತಿರುಗಾಟ ನಡೆಸಿದ್ದರು. ಅಸೌಖ್ಯದಿಂದಾಗಿ ಕಳೆದ ವರ್ಷ ಮೇಳದ ತಿರುಗಾಟವನ್ನು ಮಾಡಿರಲಿಲ್ಲ.ವಿನಯ ಆಚಾರ್ಯ ಅವರ ಶಿಕ್ಷಣ ಪುಂಜಾಲಕಟ್ಟೆ ಸ.ಹಿ.ಪ್ರಾ.ಶಾಲೆಯಲ್ಲಿ ಪೂರೈಸಿದ್ದರು. ಪುಂಜಾಲಕಟ್ಟೆಯ ಬಳಿಕ ಅವರ ಕುಟುಂಬ ನಯನಾಡು, ವಾಮದಪದವು ನಲ್ಲಿ ವಾಸವಾಗಿದ್ದರು. ಕಳೆದ ಎರಡು ವರ್ಷ ದಿಂದ ಕಡಬದಲ್ಲಿದ್ದರು. ಇವರ ನಿಧನಕ್ಕೆ ಯಕ್ಷಪ್ರೇಮಿಗಳು,ಅಭಿಮಾನಿಗಳು ಶೋಕ ವ್ಯಕ್ತಪಡಿಸಿದ್ದಾರೆ.