“ನಮೋ” ಎಂದವರ ಬಾಯಿ ಬಂದ್‌ ಆಗುವ ಸ್ಥಿತಿ ಬಂದಿದೆ: ಪ್ರಮೋದ್‌

ಉಡುಪಿ: ‘ನಮೋ ಅಂದರೆ ನರೇಂದ್ರ ಮೋದಿ ಅಲ್ಲ; ನಮಗೆ ಮೋಸ’. ಮೋದಿ ಮೋಸದ ಬಗ್ಗೆ ನಿಧಾನವಾಗಿ ಜನರಿಗೆ ಅರಿವಾಗುತ್ತಿದೆ. ನಮೋ ಎಂದು ಕೂಗಿದವರ ಬಾಯಿ ಬಂದ್‌ ಆಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಟೀಕಿಸಿದರು.

ಅಜ್ಜರಕಾಡಿನ ಹುತಾತ್ಮ ಸ್ಮಾರಕದ ಎದುರು ಗುರುವಾರ ಕೇಂದ್ರ ಸರ್ಕಾರದ ವಿರುದ್ಧ ಜಿಲ್ಲಾ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗಳು ದೇಶವನ್ನು ಸಂಕಷ್ಟಕ್ಕೆ ದೂಡಿದೆ. ಅಂದು ನಮೋ ಎಂದವರ ಹೊಟ್ಟೆಗೂ ಹೊಡೆತ ಬಿದ್ದಿದೆ. ಇಷ್ಟಾದರೂ, ಬಿಜೆಪಿ ತಪ್ಪನ್ನು ಒಪ್ಪಿಕೊಳ್ಳಲು ತಯಾರಿಲ್ಲ’ ಎಂದು ವ್ಯಂಗ್ಯವಾಡಿದರು.

ಮನಮೋಹನ್‌ ಸಿಂಗ್ ಪ್ರಧಾನಿಯಾಗಿದ್ದಾಗ ಆರ್ಥಿಕತೆ ಉತ್ತಮ ಸ್ಥಿತಿಯಲ್ಲಿತ್ತು. ಪ್ರಸ್ತುತ ದೇಶದ ಅಭಿವೃದ್ಧಿ ಸೂಚ್ಯಂಕ ಪಾತಾಳಕ್ಕೆ ಕುಸಿದಿದೆ. ಯುಪಿಎ ಅವಧಿಯಲ್ಲಿ ಶೇ 9ರಷ್ಟಿದ್ದ ಜಿಡಿಪಿ, ಈಗ ಶೇ 4ರ ಆಸುಪಾಸಿಗೆ ಬಂದಿದೆ. ಶೇ 1ರಷ್ಟು ಜಿಡಿಪಿ ಕುಸಿದರೂ ಸರ್ಕಾರದ ₹ 5 ಲಕ್ಷ ಕೋಟಿ ಆದಾಯ ಕಡಿಮೆಯಾಗುತ್ತದೆ ಎಂದು ಹೇಳಿದರು. 

6 ತಿಂಗಳಿನಿಂದ ವಸತಿ ಯೋಜನೆಗಳಿಗೆ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ. ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಹಾಲಿನ ಸಬ್ಸಿಡಿ ಬಿಡುಗಡೆ ಮಾಡಿಲ್ಲ. ರಸ್ತೆ ಕಾಮಗಾರಿಗಳಿಗೆ ಅನುದಾನ ಸಿಗುತ್ತಿಲ್ಲ. ಸಿದ್ದರಾಮಯ್ಯ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳು ಮಾತ್ರ ನಡೆಯುತ್ತಿವೆ ಎಂದರು.

ಆರ್ಥಿಕ ಹಿಂಜರಿತದಿಂದ ಉದ್ಯೋಗ ನಷ್ಟವಾಗಿದೆ. ಕರಾವಳಿಯಲ್ಲಿ ಗೋಡಂಬಿ ಕಾರ್ಖಾನೆಗಳು ಮುಚ್ಚುತ್ತಿವೆ. ಮೀನುಗಾರಿಕಾ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ರಿಕ್ಷಾ, ಟ್ಯಾಕ್ಸಿ ಚಾಲಕರಿಗೆ ದುಡಿಮೆ ಇಲ್ಲ. ಪ್ರಧಾನಿ ಮೋದಿ ಬಿಟ್ಟರೆ ದೇಶದಲ್ಲಿ ಯಾರೂ ಸಂತೋಷವಾಗಿಲ್ಲ ಎಂದು ಮಧ್ವರಾಜ್ ಟೀಕಿಸಿದರು. ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ ವಿನಯ ಕುಮಾರ ಸೊರಕೆ, ಗೋಪಾಲ ಪೂಜಾರಿ ಸೇರಿದಂತೆ ನನ್ನನ್ನೂ ಮತದಾರರು ಚುನಾವಣೆಯಲ್ಲಿ ಸೋಲಿಸಿದರು. ಹಾಗಾಗಿ, ಅಭಿವೃದ್ಧಿ ಮಾಡಿದರೆ ಬಿಜೆಪಿಯೂ ಸೋಲಲಿದೆ ಎಂಬ ಭಯದಿಂದ ಬಿಜೆಪಿ ನಾಯಕರು ಕೇವಲ ಹಿಂದುತ್ವ ಹಾಗೂ ಮೋದಿ ಮಂತ್ರ ಪಠಿಸುತ್ತಲೇ ಯುವಕರನ್ನು ಬೀದಿಗಿಳಿಯುವಂತೆ ಮಾಡಿದ್ದಾರೆ ಎಂದು ಪ್ರಮೋದ್ ಮಧ್ವರಾಜ್ ಟೀಕಿಸಿದರು.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ‘ಶಾಸಕರನ್ನು ಅನರ್ಹಗೊಳಿಸಲು ಸಿದ್ದರಾಮಯ್ಯ ನಡೆಸಿದ ಕುತಂತ್ರ ಫಲ ನೀಡಲಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಸುಪ್ರೀಂ ಕೋರ್ಟ್‌ ಸ್ಪೀಕರ್‌ ಕ್ರಮವನ್ನು ಎತ್ತಿ ಹಿಡಿದಿದೆ ಎಂದು ಅವರು ಹೇಳಿದರು.

ಜತೆಗೆ, ಬಿಜೆಪಿಯ ಕುದುರೆ ವ್ಯಾಪಾರ, ಕುತಂತ್ರ ದೇಶದ ಜನರ ಮುಂದೆ ಬಯಲಾಗಿದೆ. ಉಪ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.‌

ಮುಖಂಡ ಯು.ಆರ್‌.ಸಭಾಪತಿ ಮಾತನಾಡಿ, ಕಾಂಗ್ರೆಸ್‌ ನಾಯಕರ ತ್ಯಾಗ ಬಲಿದಾನದಿಂದ ದೇಶ ಸದೃಢವಾಗಿದೆ. ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷವನ್ನು ಬಲಪಡಿಸಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೇರುವಂತೆ ಸಂಕಲ್ಪ ಮಾಡೋಣ ಎಂದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕೆಪಿಸಿಸಿ ಕಾರ್ಯದರ್ಶಿ ಮೋಹನ್‌, ಸುನಿತಾ ಶೆಟ್ಟಿ,ಪ್ರಖ್ಯಾತ್ ಶೆಟ್ಟಿ,ರಮೇಶ್ ಕಾಂಚನ್,ಹರೀಶ್ ಕಿಣಿ,ನರಸಿಂಹ ಮೂರ್ತಿ, ಭಾಸ್ಕರ್ ಕಿದಿಯೂರ್,ಉದ್ಯಾವರ ನಾಗೇಶ್,ಶಶಿಧರ ಶೆಟ್ಟಿ ಭಾಗವಹಿಸಿದರು.

Leave a Reply

Your email address will not be published. Required fields are marked *

error: Content is protected !!