ಕ್ರಿಸ್ತರ ಪುನಾರುತ್ಥಾನ: ಹೊಸ ಜೀವನ ಜೀವಿಸಲು ಕರೆ
ಎಪ್ರಿಲ್ 12 ರಂದು ವಿಶ್ವದಾದ್ಯಾಂತ ಸಮಸ್ತ ಕ್ರೈಸ್ತ ಭಾಂದವರು ಈಸ್ಟರ್ ಹಬ್ಬವನ್ನು ಆಚರಿಸುತ್ತಾರೆ. ಆದರೆ ಈ ವರ್ಷದ ಈಸ್ಟರ್ ಹಬ್ಬವು ವಿಶೇಷವಾಗಿದೆ ಪ್ರಪಂಚದಲ್ಲಿ ಕೋರೊನಾ ಎಂಬ ರೋಗದಿಂದಾಗಿ ಸಾಮೂಹಿಕ ಆಚರಣೆಗೆ ನಿರ್ಬಂಧವಿರುವಾಗ ನಮ್ಮದೇ ಮನೆಯಲ್ಲಿ, ನಮ್ಮ ಪ್ರೀತಿಯ ವ್ಯಕ್ತಿಗಳೊಂದಿಗೆ ಈ ಹಬ್ಬದ ಸಂಭ್ರಮವನ್ನು ಅಚರಿಸಲು ನಮಗೊಂದು ಅವಕಾಶವಾಗಿದೆ. ಇಂದು ನಾವೆಲ್ಲರೂ ಕ್ರಿಸ್ತರ ಪುನಾರುತ್ಥಾನವು ನಮಗೆಲ್ಲಾರಿಗೂ ಹೊಸ ಜೀವನವನ್ನು ಜೀವಿಸಲು ಕರೆ ಮತ್ತು ಪ್ರೇರಣೆಯನ್ನು ನೀಡುತ್ತದೆ ಎಂಬ ವಿಷಯವನ್ನು ಧ್ಯಾನಿಸಲು ಪ್ರಯತ್ನಿಸೋಣ. ಈಸ್ಟರ್ ಹಬ್ಬವನ್ನು ನಾವು ಪಾಸ್ಖ ಹಬ್ಬ ಎಂದು ಕರೆಯುತ್ತೇವೆ. ಪಾಸ್ಖ ಎಂದರೆ ‘ದಾಟುವಿಕೆ’ ಎಂದರ್ಥ. ಇಂದು ಪ್ರಭು ಯೇಸು ಕ್ರೀಸ್ತರು ಮರಣದಿಂದ ಅಮರತ್ವಕ್ಕೆ ದಾಟಿದರು. ನಾವು ನಮ್ಮ ಜೀವನದ ಪ್ರತಿಯೊಂದು ಹಂತದಲ್ಲೂ ದಾಟಬೇಕು. ದಾಟಿ ಮುಂದೆ ಸಾಗಬೇಕು. ಈ ದಾಟುವಿಕೆಯ ನಿಟ್ಟಿನಲ್ಲಿ ಮನುಷ್ಯ ತನ್ನನ್ನೇ ತಾನು ರೂಪಿಸಿ ಕೊಳ್ಳುತ್ತಾನೆ. ಈ ದಾಟುವಿಕೆಯು ಹೊಸ ಆರಂಭದ ಸಂಕೇತವಾಗಿದೆ.
ಪಾಸ್ಕ ಹಬ್ಬ ಕೂಡ ಈ ದಾಟುವಿಕೆಯ ಸಂಕೇತವಾಗಿದೆ. ನಮಗಾಗಿ ಶಿಲುಬೆಯ ಮೇಲೆ ಸತ್ತ ಕ್ರೀಸ್ತರು ಮರಣವನ್ನು, ಪಾಪಾವನ್ನು ದಾಟಿ ಪುನಾರುತ್ಥಾನವಾದ ದಿನವನ್ನು ಇಂದು ಜಗತ್ತು ಆಚರಿಸುತ್ತದೆ. ಬಾಹ್ಯಾ ರೀತಿಯಲ್ಲಿ ನಮಗೆ ಕ್ರಿಸ್ಮಸ್ ಹಾಗೂ ಇತರ ಹಬ್ಬಗಳು ಶ್ರೇಷ್ಟವಾದವುಗಳು ಎಂದು ಅನಿಸುತ್ತದೆ ಆದರೆ ಕ್ರೈಸ್ತರ ಪರಮ ಹಬ್ಬವು ಈಸ್ಟರ್ ಆಗಿದೆ. ಹಳೆಯ ಒಡಂಬಡಿಕೆಯನ್ನು ನೋಡಲು ಹೋದರೆ ಇಸ್ರಾಯೇಲ ಜನರಿಗೆ ಈಜಿಪ್ಟಿನ ದಾಸತ್ವದಿಂದ ಬಿಡುಗಡೆಗೊಳಿಸಿದ ದೇವರು ಕೆಂಪು ಸಮುದ್ರವನ್ನು ದಾಟಿಸಿ ನೀವು ನನ್ನ ಜನರು ಎಂಬ ಪ್ರೀತಿಯ ಒಡಂಬಡಿಕೆಯನ್ನು ಸ್ಮರಿಸುವ ದಿನವಾಗಿದೆ. ನಮಗೆ ಹೊಸ ಒಡಂಬಡಿಕೆಯ ಕ್ರೈಸ್ತರಿಗೆ ಈ ಹಬ್ಬವು ಶ್ರೀಯೇಸುವು ಶಿಲುಬೆಯ ಮರಣವನ್ನು ಜಯಿಸಿ ಜೀವಂತರಾದ ಘಳಿಗೆಯನ್ನು ಸ್ಮರಿಸಿ ದೇವರಿಗೆ ಸ್ತುತಿ ಹಾಡುವ ದಿನವಾಗಿದೆ. ನಮ್ಮ ಪ್ರಭುವು ಪಾಪಾದ ಅಂಧಕಾರವನ್ನು ತೊಲಗಿಸಿ ಹೊಸ ಜೀವನದ ಪ್ರಕಾಶಮಾನವಾದ ಬೆಳಕಿಗೆ ನಮ್ಮನ್ನು ದಾಟಿಸಿದರು. ಆದ್ದರಿಂದಲೆ ಈ ಹಬ್ಬ ಸಂತೋಷದ, ಸಂಭ್ರಮದ, ಹಾಗೂ ಭರವಸೆಯ ಹಬ್ಬ. ಪವಿತ್ರ ಗುರುವಾರದ ಸಂಭ್ರಮದಂದು ನಿಶ್ಯಬ್ದವಾಗಿದ್ದ ಧರ್ಮಸಭೆ, ಪವಿತ್ರ ಶುಕ್ರವಾರದಂದು ಪ್ರಭುವಿನ ಯಾತನೆ, ಮರಣವನ್ನು ಧ್ಯಾನಿಸಿ ಇಂದು ಯೇಸುವಿನ ಪುನಾರುತ್ಥನದ ಮಹೋತ್ಸವದಲ್ಲಿ ಭಾಗಿಯಾಗುತ್ತದೆ. ಆದುದರಿಂದ ಈ ಹಬ್ಬವನ್ನು ಭಕ್ತಿಯಿಂದ ಸಂಭ್ರಮದಿಂದ ಆಚರಿಸಿದರೆ ಮಾತ್ರ ಸಾಲದು ಭರವಸೆಯಿಂದ ಜೀವಿಸಿ ಹಿಂದಿನ ಜೀವನವನ್ನು ಮರೆತು ಹೊಸ ಜೀವನವನ್ನು ಜೀವಿಸುವ ವ್ಯಕ್ತಿಗಳಾಗಬೇಕು ಎಂಬುದೆ ಈ ಬರಹದ ಆಶಯ.
ಈಸ್ಟರ್- ದೇವರ ಅಸ್ತಿತ್ವದ ಮೇಲೆ ವಿಶ್ವಾಸವಿಡಲು ಕರೆ
ಜರ್ಮನಿಯ ಪ್ರಸಿದ್ಧ ತತ್ವಶಾಸ್ತ್ರಿ ಫ್ರೆಡಿಕ್ ನೀಶೆ ಒಬ್ಬ ನಾಸ್ತಿಕ ಮಾತ್ರವಲ್ಲ. ದೇವರ ಅಸ್ತಿತ್ವವನ್ನು ವಿರೋಧಿಸಿದ, ಹಾಗೂ ದೇವರೇ ಇಲ್ಲ ಎಂದು ವಾದಿಸಿದ ಪ್ರಮುಖ ತತ್ವಶಾಸ್ತ್ರಿಯಾಗಿದ್ದ. ಈತ ಒಮ್ಮೆ ಗೋಡೆಯ ಮೇಲೆ ದೇವರು ಸತ್ತಿದ್ದಾರೆ ಎಂದು ದೊಡ್ಡ ಅಕ್ಷರಗಳಲ್ಲಿ ಬರೆದು ಕೆಳಗಡೆ ನೀಶೆ ಎಂದು ಸಹಿ ಮಾಡಿದ. ೧೮೯೦ರಲ್ಲಿ ಈ ತತ್ವಶಾಸ್ತ್ರಿ ಬುದ್ದಿ ಭ್ರಾಂದನಾಗಿ ರೋಗದಿಂದ ನರಳುತ್ತಾ ಸತ್ತು ಹೋದ. ಆಗ ಒಬ್ಬ ಭಕ್ತ ವಿಶ್ವಾಸಿ, ಅದೇ ಗೋಡೆಯಲ್ಲಿ ನೀಶೆ ಇನ್ನಿಲ್ಲ, ಸತ್ತು ಹೋದ ಎಂದು ಕೆಳಗಡೆ ದೇವರು ಎಂದು ಸಹಿ ಮಾಡಿದನಂತೆ. ಪಾಸ್ಖಹಬ್ಬ ದೇವರು ಸತ್ತಿಲ್ಲ, ಕ್ರಿಸ್ತರು ಮರಣಹೊಂದಿ ಪುನಾರುತ್ಥಾನವಾಗಿದ್ದಾರೆ, ಇನ್ನು ಎಂದಿಗೂ ಸಾಯುವುದಿಲ್ಲ, ಅವರು ಮರಣವನ್ನು ಜಯಿಸಿರುವಾಗ, ನಾವೂ ಕೂಡ್ ಅವರನ್ನು ವಿಶ್ವಾಸಿಸುವವರು ಮರಣವನ್ನು ಜಯಿಸುವೆವು’ ಎಂಬ ಸತ್ಯವನ್ನು ಸಾರುತ್ತದೆ. ಇದೇ ಪಾಸ್ಖ ಅಥವಾ ದಾಟುವಿಕೆ, ಯೇಸುವು ಈ ಲೋಕದಿಂದ ಪಿತನ ಬಳಿಗೆ ದಾಟಿ ಹೋಗಿದ್ದಾರೆ, ಮರಣ್ ದಿಂದ ಅಮರತ್ವಕ್ಕೆ, ಕತ್ತಲೆಯಿಂದ ಬೆಳಕಿನೆಡೆಗೆ ನಮ್ಮನ್ನು ದಾಟಿಸಲು ಆವರು ದಾಟಿಸಲು ಹೋಗಿದ್ದಾರೆಂಬುದು ಇಂದು ನಾವು ಹೊಂದಿರುವ ವಿಶ್ವಾಸ.
ಪ್ರಭುವಿನ ಪುನಾರುತ್ಥಾನ ನಮ್ಮ ವಿಶ್ವಾಸದ ಮೂಲ.
ಪ್ರಭು ಯೇಸು ಕ್ರಿಸ್ತರು ಪುನಾರುತ್ಥಾನ ಹೊಂದಿರುತ್ತಿಲ್ಲವಾದರೆ ನಮ್ಮ ವಿಶ್ವಾಸಕ್ಕೆ ಅರ್ಥವಿರುತ್ತಿರಲಿಲ್ಲ. ನೀರಿನಿಂದ ಬೇರ್ಪಟ್ಟ ಮೀನಿನಂತೆ, ರೆಕ್ಕೆಯಿಲ್ಲದ ಹಕ್ಕಿಯಂತೆ ಅದಾಗುತಿತ್ತು. ಈಗ ಪ್ರಭುವಿನ ಪುನಾರುತ್ಥಾನವೇ ನಮ್ಮ ವಿಶ್ವಾಸದ ಮೂಲವಾದ್ದರಿಂದ ನಮ್ಮ ವಿಶ್ವಾಸಕ್ಕೆ ಜೀವ ಬಂದಿದೆ, ಬಲ ಬಂದಿದೆ. ಯೇಸು ಪುನಾರುತ್ಥಾನವಾಗಿಲ್ಲದಿದ್ದರೆ ಶಿಲುಬೆಯ ಮರಣ ಒಂದು ವಿಪರ್ಯಾಸವಾಗುತಿತ್ತು, ನಮ್ಮ ಪ್ರಾರ್ಥನೆ, ಪ್ರಾಯಶ್ಚಿತ ಡಾಂಭಿಕತೆಯಾಗುತಿತ್ತು. ದೇವರು ತಮ್ಮ ಪುತ್ರ ಯೇಸುವನ್ನು ಲೋಕಕ್ಕೆ ಕಳುಹಿಸಿದ ಕಾರ್ಯ ಅಸಂಪೂರ್ಣವಾಗುತ್ತಿತ್ತು. ನಮ್ಮ ದೇವರು ಸತ್ತ ದೇವರಾಗಿರುತಿದ್ದರು. ಆದ್ದರಿಂದ ನಾವು ಇಂದು ಅಲ್ಲೆಲೂಯ ಎಂದು ಸಂಭ್ರಮಿಸೋಣ, ಅನಂದಿಸೋಣ. ಏಕೆಂದರೆ ಯೇಸು ಸತ್ತು ಪುನಾರುತ್ಥಾನಾರಾಗಿದ್ದಾರೆ. ನಮ್ಮನ್ನು ಅವರ ಪುನಾರುತ್ಥಾನದಲ್ಲಿ ಭಾಗಿಯಾಗಿಸಿದ್ದಾರೆ.
ನಾವೆಲ್ಲರೂ ಯೇಸುವಿನ ಪುನಾರುತ್ಥಾನದ ಸಾಕ್ಷಿಗಳು
ಯೇಸುವಿನ ಪುನಾರುತ್ಥಾನಕ್ಕೆ ಸಾಕ್ಷಿಗಳನ್ನು ಹುಡುಕುವ ಅಗತ್ಯವಿಲ್ಲ. ಯೇಸುವಿನ ಪುನಾರುತ್ಥಾನವಿಲ್ಲದಿರೆ ಕೇರಳದ ಭಗಿನಿ ರಾಣಿ ಮರಿಯಳಿಗೆ ದಲಿತರಿಗಾಗಿ ಜೀವಕೊಡಲು ಸಾಧ್ಯವಾಗುತಿತ್ತೆ? ಗ್ರಹಾಂ ಸ್ಟೇಯ್ನ್ನ ಹೆಂಡತಿ ಗ್ಲ್ಯಾಡಿಸ್ ಸ್ಟೇಯ್ನಳಿಗೆ ತನ್ನ ಮಕ್ಕಳ ಮತ್ತು ಪತಿಯ ಕೊಲೆಗಡುಕರಿಗೆ ಕ್ಷಮಿಸಲು ಸಾಧ್ಯವಾಗುತಿತ್ತೆ? ಎಲ್ ಸಾಲ್ವಾದೊರಿನ ಧರ್ಮಧ್ಯಕ್ಷರಾದ ಬಿಷಪ್ ಆಸ್ಕರ್ ರೋಮೆರೊರವರಿಗೆ ತಮ್ಮ ಜನರಿಗಾಗಿ ಸಾಯಲು ಶಕ್ತಿ ಸಿಗುತಿತ್ತೆ? ಮದರ್ ತೇರೆಸಾರವರಿಗೆ ಕೊಳೆತು ನಾರುವ ಗಾಯಗಳನ್ನು ತೊಳೆಯಲು ಸಾಧ್ಯವಾಗುತಿತ್ತೆ? ಇವರಿಗೆ ಇದೆಲ್ಲವು ಸಾಧ್ಯವಾಗಿಸಿದೆ ಪ್ರಭುವಿನ ಪುನಾರುತ್ಥಾನ. ಯೇಸುವಿನ ಪುನಾರುತ್ಥಾನ ಅವರಿಗೆ ಶಕ್ತಿ ನೀಡಿತ್ತು, ಭರವಸೆಯಿಂದ ತುಂಬಿತ್ತು. ಇಂದು ನಾನು ನೀವು ಸರ್ವರು ಪ್ರಭು ಯೇಸುವಿನ ಪುನಾರುತ್ಥಾನಕ್ಕೆ ಸಾಕ್ಷಿಗಳು. ನಮ್ಮ ಜೀವನ ಪುನಾರುತ್ಥಾನದ ಜೀವನವಾದಾಗ ನಾನು ಯೆಸುವಿನ ಪುನಾರುತ್ಥಾನಕ್ಕೂ ಸಾಕ್ಶಿಯಾಗುತ್ತೇವೆ
ಪುನರುತ್ಥಾನ ಕ್ರ್ತಿಸ್ತರನ್ನು ಸಾರುವುದು ಒಂದು ಪಂಥಹ್ವಾನ
ಪುನಾರುತ್ಥಾನರಾದ ಪ್ರಭು ಯೇಸುವಿನ ಜೀವನವನ್ನು ಜೀವಿಸಿ ನಾವು ಅವರ ಪುನಾರುತ್ಥಾನದ ಸಾಕ್ಷಿಗಳಾಗಬೇಕು. ಪುನಾರುತ್ಥಾನದ ಸಾಕ್ಷಿಗಳಾಗುದು ಸುಲಭದ ಕೆಲಸವಲ್ಲ. ಅದೊಂದು ಪಂಥಹ್ವಾನ. ಇದು ಬಾಯಿ ಮಾತಿನಲ್ಲಿ ಹೇಳಿದರೆ ನಂಬುವ ಕಾಲವಲ್ಲ. ನಮ್ಮ ಜೀವನದ ಮುಖಾಂತರ ಕ್ರಿಸ್ತರನ್ನು ನಾವು ಸಾರಬೇಕು. ಬೇರೆಯವರ್ ಕಷ್ಟಗಳನ್ನು ಅರಿತು ಅವರಿಗೆ ಸಾಹಾಯ ಮಾಡುವುದೆ ನಿಜವಾದ ಕ್ರೈಸ್ತೀಯ ಜೀವನವೆಂದು ನಾವು ಅರಿಯ ಬೇಕು. ಆಗ ನಮ್ಮ ಜೀವನವು ಪುನಾರುತ್ಥಾನದ ಜೀವನವಾಗುವುದರಲ್ಲಿ ಸಂಶಯವಿಲ್ಲ. ಸತ್ತ ಮೇಲೆ ನಾವು ಕ್ರಿಸ್ತರ ಪುನಾರುತ್ಥಾನದಲ್ಲಿ ಭಾಗಿಯಾಗುತ್ತೇವೆ ನಿಜ. ಜೀವಂತವಾಗಿರುವಾಗಲು ನಾವು ಅವರ ಪುನರುತ್ಥಾನದಲ್ಲಿ ಭಾಗಿಗಳಾಗಬೇಕು. ನಮ್ಮ ಜೀವನದಲ್ಲಿ ಅನೇಕ ನೋವಿನ, ನಿರಾಶೆಯ, ಸೋಲಿನ ಕ್ಷಣಗಳು ಎದುರಾಗುತ್ತವೆ. ಇವೆಲ್ಲವನ್ನು ನಾವು ವಿಶ್ವಾಸದಿಂದ ಜಯಿಸಬೇಕು. ಆಗ, ನಮ್ಮ ಜೀವನ್ ಪುನಾರುತ್ಥಾನದ ಜೀವನವಾಗುತ್ತದೆ. ಸಮಸ್ಯೆಗಳಿಗೆ ಅಂಜಿದರೆ ನಾವು ಪುನಾರುತ್ಥಾನದ ಮಹಿಮೆಯನ್ನು ಅರಿಯದ ವ್ಯಕ್ತಿಗಳಾಗುತ್ತೇವೆ. ನಮ್ಮ ಜೀವನ್ ಪುನಾರುತ್ಥಾನದೆಡೆಗೆ ಪಯಣವಾಗಲಿ. ನಮ್ಮ ಜೀವನ ಯಾವಗಲೂ ಪ್ರೀತಿಯ ಜೀವನವನ್ನು ಜೀವಿಸುವ ಜೀವನವಾಗಬೇಕು ಆಗ ನಮ್ಮ ಈ ಜೀವನಕ್ಕೆ ನಿಜವಾದ ಅರ್ಥ ಬರುತ್ತದೆ. ಈ ಜೀವನ ಎಂಬ ಪಯಣದಲಿ ಲೌಕಿಕ ವಿಚಾರಗಳ ಲಗ್ಗೇಜ್ ಕಡಿಮೆಯಾಗಲಿ. ಅಧ್ಯಾತ್ಮಿಕತೆಯ ಹಾಗೂ ಮೌಲ್ಯಗಳ ಲಗ್ಗೇಜ್ ಭಾರವಾಗಲಿ. ಇದೇ ಕ್ರಿಸ್ತರನ್ನು ಸಾರುವ ಜೀವನವಾಗುತ್ತದೆ. ಇಂದು ನಾವೆಲ್ಲರೂ ಉತ್ತಮ ಜೀವನವನ್ನು ಜೀವಿಸಿ ಪ್ರಭುಯೇಸು ಕ್ರಿಸ್ತರು ನಮಗೆ ಕಲಿಸಿದ ಭೋದನೆಗಳಾನ್ನು ಜೀವಿಸುವ ವ್ಯಕ್ತಿಗಳಾಗೋಣ. ಈ ಪುನಾರುತ್ಥನದ ಹಬ್ಬವು ಶಾಂತಿಯನ್ನು ಸೂಚಿಸುವ ಹಬ್ಬವಾಗಿದೆ. ಶಾಂತಿ ಪುನರುತ್ಥಾನರಾದ ಯೇಸುವಿನ ವರದಾನ. ಪುನಾರುತ್ಥನರಾಗಿ ಮೊದಲು ಯೇಸು ಕಾಣಿಸಿಕೊಂಡಾಗ ಅವರು ಹೇಳಿದ ನುಡಿಗಳು ಶಾಂತಿ ನಿಮಗೆ. ತನ್ನನ್ನು ತಿರಸ್ಕರಿಸಿದವರಿಗೆ, ತನ್ನನ್ನು ಹೊಡೆದವರಿಗೆ, ತನಗೆ ಉಗುಳಿದವರಿಗೆ, ತನ್ನನ್ನು ಪ್ರೀತಿಯಿಂದ ಹಿಂಬಾಲಿಸಿದವರಿಗೆ, ತನ್ನನ್ನು ಒಬ್ಬಂಟಿಯಾಗಿಯೆ ಬಿಟ್ಟು ಹೋದವರಿಗೆ, ಯಾರನ್ನು ಬಿಡದೆ ಯೇಸು ತಮ್ಮ ಶಾಂತಿಯನ್ನು ಕೊಟ್ಟರು. ಈ ಹಬ್ಬವನ್ನು ಆಚರಿಸುವಾಗ ಇಂದಿನ ಈ ಸಮಾಜದಲ್ಲಿ ನಾವು ಶಾಂತಿಯ ವ್ಯಕ್ತಿಗಳಾಗೋಣ. ಈ ಕೋರೋನಾ ರೋಗದಿಂದ ಬಳಲುತ್ತಿರುವ ಪ್ರಪಂಚಕ್ಕಾಗಿ ಪ್ರಾರ್ಥಿಸೋಣ ಆನಿ ಶಾಂತಿಯಿಂದ, ಸಾಮರಸ್ಯದಿಂದ ತುಂಬಿದ ಹೊಸ ಜೀವನವನ್ನು ಜೀವಿಸೋಣ.
ವಂದನೀಯ ಫಾದರ್ ಜಿತೇಶ್ ಐರಲ್ ಕ್ಯಾಸ್ತೆಲಿನೊ
ಸಹಾಯಕ ಧರ್ಮಗುರುಗಳು
ಸಂತ ಲೋರೆನ್ಸ್ ದೇವಾಲಯ, ಮೂಡುಬೆಳ್ಳೆ.