ಬೀಳುವ ಸ್ಥಿತಿಯಲ್ಲಿದೆ ಕುಕ್ಕಿಕಟ್ಟೆ ಶಾಲಾ ಮುಖ್ಯ ರಸ್ತೆಯಲ್ಲಿರುವ ಪಾಳುಬಿದ್ದ ಕಟ್ಟಡ
ಉಡುಪಿ: ಕುಕ್ಕಿಕಟ್ಟೆ ಶಾಲಾ ಮುಖ್ಯ ರಸ್ತೆಯ ಪಕ್ಕದಲ್ಲೇ ಹಳೆ ಕಟ್ಟಡವೊಂದು ಇಂದೊ ನಾಳೆಯೋ ಬೀಳುವ ಸ್ಥಿತಿಯಲ್ಲಿದೆ. ರಾಜ್ಯ ಹೆದ್ದಾರಿಯಾದ ಇದನ್ನು ಇತ್ತೀಚೆಗೆ ಅಗಲಿಕರಣಗೊಳಿಸಲಾಗಿದ್ದರೂ ಕೆಲವೊಂದು ಕಡೆಗಳಲ್ಲಿ ಭೂ ಮಾಲಕರು ರಸ್ತೆ ಹಾಗೂ ಚರಂಡಿ ನಿರ್ಮಿಸಲು ಭೂಮಿ ಬಿಟ್ಟುಕೊಡದ ಕಾರಣ ರಸ್ತೆಯನ್ನು ಇದ್ದ ಹಾಗೆ ದುರಸ್ತಿಗೊಳಿಸಲಾಗಿದೆ.
ಶಾಲೆಗೆ ನೂರಾರು ವಿದ್ಯಾರ್ಥಿಗಳು, ವಾಹನಗಳು ಈ ರಸ್ತೆ ಯಲ್ಲಿ ಸಂಚರಿಸುತ್ತವೆ, ರಸ್ತೆ ಅಂಚಿನಲ್ಲೇ ಈ ಪಾಳುಬಿದ್ದ ಕಟ್ಟಡ ಕುಸಿದು ಆಗುವ ದುರಂತವನ್ನು ಉಡುಪಿ ನಗರಸಭೆ ತಪ್ಪಿಸಬೇಕಾಗಿದೆ.
ಕಳೆದ ಮಳೆಗಾಲದಲ್ಲಿ ಕುಂದಾಪುರ ಶಾಲೆಗೆಂದು ಹೊರಟ ವಿದ್ಯಾರ್ಥಿನಿಯೊರ್ವಳ ಮೇಲೆ ಮನೆಯೊಂದರ ಆವರಣ ಗೋಡೆ ಕುಸಿದು ಬಿದ್ದು ಆಕೆ ಮ್ರತಪಟ್ಟಿದ್ದಳು. ಇಂತಹ ಘಟನೆ ಮತ್ತೆ ಮರುಕಳಿಸುವ ಮೊದಲು ನಗರಸಭೆ,ಹೆದ್ದಾರಿ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ.
ಇದೇ ರಸ್ತೆಯಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ಮುಖ್ಯ ರಸ್ತೆಯಲ್ಲೇ ಹರಿಯುವುದರಿಂದ ಪಾದಚಾರಿ, ದ್ವಿಚಕ್ರ ವಾಹನ ಸವಾರರು ಕೇಸರು ನೀರಿನಲ್ಲಿ ಸಂಚರಿಸುವಂತಾಗಿದೆ. ರಸ್ತೆಯ ಎರಡು ಬದಿ ಮಳೆ ನೀರು ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.