ಮೋದಿ ದುರಹಂಕಾರ ಆಡಳಿತದ ಜತೆಗೆ ಪತ್ರಿಕೋದ್ಯಮದ ಕರಾಳ ಅಧ್ಯಾಯವೂ ಆರಂಭವಾಗಿದೆ: ಚಿಂತಕ ಜಿ.ರಾಜಶೇಖರ್‌

ಉಡುಪಿ: ‘ಕೊಬ್ಬಿದ ಶ್ರೀಮಂತರು ಹಾಗೂ ಅಟ್ಟಹಾಸದಲ್ಲಿ ಮೆರೆಯುತ್ತಿರುವ ಅಧಿಕಾರಿಶಾಹಿಗಳ ನಡುವೆ ಬಡವರ ಆಕ್ರಂದನ ಯಾರಿಗೂ ಕೇಳಿಸುತ್ತಿಲ್ಲ. ಮಾಧ್ಯಮಗಳಿಗೂ ಬಡವರ ನೋವು, ಹತಾಶೆ, ಅಳು ಕೇಳಿಸುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ದುರಹಂಕಾರ ಆಡಳಿತದ ಜತೆಗೆ ಪತ್ರಿಕೋದ್ಯಮದ ಕರಾಳ ಅಧ್ಯಾಯವೂ ಆರಂಭವಾಗಿದೆ’ ಎಂದು ಚಿಂತಕ ಜಿ.ರಾಜಶೇಖರ್‌ ಹೇಳಿದರು.


ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಹಾಗೂ ಉಡುಪಿ ಜಿಲ್ಲಾ ಗೌರಿ ಬಗಳದ ವತಿಯಿಂದ ನಗರದ ಮುಸ್ಲಿಂ ವೆಲ್‌ಫೇರ್‌ ಅಸೋಸಿಯೇಷನ್‌ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ‘ಗೌರಿ ಸಂಸ್ಮರಣೆ ಹಾಗೂ ಗೌರಿ ಬಳಗದ ಆರಂಭ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


‘ಪ್ರಜಾಪ್ರಭುತ್ವ ಮೌಲ್ಯಗಳನ್ನು ಉಳಿಸಬೇಕಾದರೆ ಅಧಿಕಾರಿಶಾಹಿಯ ವಿರುದ್ಧ ಹೋರಾಟ ಮಾಡುವ ಅನಿವಾರ್ಯತೆ ಇದೆ. ಮೋದಿ ಸರ್ಕಾರ ಜನವಿರೋಧಿಯಾಗಿದ್ದು, ಇದು ಆದಷ್ಟು ಬೇಗ ತೊಲಗಬೇಕು. ಈ ಸರ್ಕಾರವು ಜನರ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಇದು ಬೇಗ ತೊಲಗಿದಷ್ಟು ಪ್ರಜಾಸತ್ತೆಯ ಮೌಲ್ಯಗಳಿಗೆ ಅನುಕೂಲವಾಗುತ್ತದೆ’ ಎಂದರು.


‘ಗೌರಿ ಲಂಕೇಶ್‌ ತೀರಿ ಹೋದ ಬಳಿಕ ಬಹಳ ಸಮಯ ಶೂನ್ಯ ಕಾಡುತ್ತಿತ್ತು. ಕರ್ನಾಟಕ ಪತ್ರಿಕೋದ್ಯಮದಲ್ಲಿ ಇನ್ನು ಎಂದಿಗೂ ಗೌರಿ ಬಿಟ್ಟು ಹೋದ ಜಾಗವನ್ನು ತುಂಬಿಸಲು ಸಾಧ್ಯವಿಲ್ಲ ಎಂಬ ವಿಚಾರ ಮನಸಿಗೆ ಆವರಿಸಿಕೊಂಡಿತ್ತು. ಅದು ಸ್ವಲ್ಪ ಮಟ್ಟಿಗೆ ನಿವಾರಣೆಯಾಗುವ ಆಶಾಭಾವ ಕಂಡುಬರುತ್ತಿದೆ’ ಎಂದು ತಿಳಿಸಿದರು.


‌ಈ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಎ.ಕೆ.ಸುಬ್ಬಯ್ಯ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಚಿಂತಕರಾದ ಹಯವದನ ಮೂಡಸಗ್ರಿ, ವರದರಾಜ ಬಿರ್ತಿ, ಸಂವರ್ತ್‌ ಸಾಹಿಲ್‌, ಹುಸೇನ್‌, ಶಾರೂಕ್‌ ತೀರ್ಥಹಳ್ಳಿ ಗೌರಿ ಲಂಕೇಶ್‌ಗೆ ನುಡಿನಮನ ಸಲ್ಲಿಸಿದರು.
ಹಿರಿಯ ಲೇಖಕ ಗೋಪಾಲ ಬಿ. ಶೆಟ್ಟಿ, ಧರ್ಮಗುರು ವಿಲಿಯ ಮಾರ್ಟಿಸ್‌ ಉಪಸ್ಥಿತರಿದ್ದರು. ವೇದಿಕೆಯ ಉಪಾಧ್ಯಕ್ಷ ಪ್ರೊ. ಫಣಿರಾಜ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದ್ರೀಸ್‌ ಹೂಡೆ ವಂದಿಸಿದರು. ದಿನಕರ ಬೆಂಗ್ರೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!