ಮಕ್ಕಳ ಮನಸ್ಥಿತಿಯನ್ನು ಅರಿತು ವರ್ತಿಸುವವರೇ ನಿಜವಾದ ಶಿಕ್ಷಕರು – ಉದ್ಯಾವರ ನಾಗೇಶ್ ಕುಮಾರ್

ಉದ್ಯಾವರ: ಶಾಲೆಗೆ ಬರುವ ಮಕ್ಕಳು ವಿವಿಧ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಹಿನ್ನಲೆಯಿಂದ ಬರುತ್ತಾರೆ. ಅವರ ವರ್ತನೆ, ಮಾನಸಿಕ ಸ್ಥಿತಿಯು ಕೂಡಾ ಬೇರೆ ಬೇರೆಯಾಗಿರುತ್ತದೆ. ಅವರನ್ನು ಒಂದೇ ಮಾನದಂಡದಲ್ಲಿ ಅಳೆಯಲು ಸಾಧ್ಯವಾಗುವುದಿಲ್ಲ.

ಮಕ್ಕಳ ಈ ಭಿನ್ನ ಮನಸ್ಥಿತಿಯನ್ನು ಗುರುತಿಸಿ ಅವರೊಡನೆ ವರ್ತಿಸಿ ಪಾಠ ಪ್ರವಚನಗಳನ್ನು ಮಾಡುವವರೇ ನಿಜವಾದ ಶಿಕ್ಷಕರು. ಶಿಕ್ಷಕರು ಮಕ್ಕಳ ಮೊಗದಲ್ಲಿ ತಮ್ಮ ಮಕ್ಕಳನ್ನು ಕಾಣಬೇಕು. ಶಿಕ್ಷಕ ವೃತ್ತಿ ಅನ್ನೋದು ತಮ್ಮ ಕುಟುಂಬ ಪಾಲನೆಯೊಂದಿಗೆ ಇರುವ ಬಹುದೊಡ್ಡ ಸಾಮಾಜಿಕ ಜವಾಬ್ದಾರಿಯ ಬಗ್ಗೆ ಶಿಕ್ಷಕರು ಎಚ್ಚರವಹಿಸಬೇಕು. ಶಿಕ್ಷಕ ತಪ್ಪುದಾರಿ ಹಿಡಿದರೆ ತಪ್ಪು ದಾರಿ ಹಿಡಿಯುವ ಒಂದು ಸಮಾಜವೇ ನಿರ್ಮಾಣವಾಗುತ್ತದೆ ಎಂದು ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲಾ ಸಂಚಾಲಕ ಶ್ರೀ ಉದ್ಯಾವರ ನಾಗೇಶ್ ಕುಮಾರ್ ಅವರು ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಸಂಘ ಮತ್ತು ರಕ್ಷಕ-ಶಿಕ್ಷಕ ಸಂಘದ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಜರಗಿದ ಗುರು ವಂದನ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿದರು.

ಅವರು ಮುಂದುವರಿಯುತ್ತಾ ಈ ಸಂದರ್ಭದಲ್ಲಿ ಶಿಕ್ಷಕರ ಮೌಲ್ಯ ಕುಸಿಯುತ್ತಿದೆ. ಸಮಾಜದ ವರ್ತನೆಯೂ ಅದಕ್ಕೆ ಕಾರಣವಾಗಿದೆ. ಎಲ್ಲಾ ಶಿಕ್ಷಕರು ವಂದನೀಯರು ಆದರಣೀಯರೂ, ಪೂಜ್ಯನೀಯರೂ ಅನ್ನುವ ಹೊತ್ತಿಗೆ ತಾನು ಕಲಿಸಿದ ವಿದ್ಯೆ ನಿನಗೆ ಬೇಕಾದಾಗ ನೆನಪಿಗೆ ಬಾರದಿರಲಿ ಎಂದು ಕರ್ಣನನ್ನು ಶಪಿಸಿದ ಪರಶುರಾಮರನ್ನು, ತನಗೆ ಅನ್ನ ಕೊಡುವ ಪ್ರಿಯ ಶಿಷ್ಯ ಅರ್ಜುನನನ್ನು ಈ ದಲಿತ ಶಿಷ್ಯ ಏಕಲವ್ಯ ಬಿಲ್ವಿದ್ಯೆಯಲ್ಲಿ ಮೀರಿಸುತ್ತಾನೆ ಎಂದು ಏಕಲವ್ಯನ ಹೆಬ್ಬೆರಳನ್ನು ಗುರು ಕಾಣಿಕೆಯನ್ನಾಗಿ ಕೇಳಿದ ದ್ರೋಣಾಚಾರ್ಯರನ್ನು ಕೂಡಾ ನಾವು ಮರೆಯಬಾರದು ಎಂದರು.

ಗುರುವಂದನೆಯನ್ನು ಸ್ವೀಕರಿಸಿದ ಶಾಲಾ ಮುಖ್ಯೋಪಾದ್ಯಾಯ ಶ್ರೀ ಗಣಪತಿ ಕಾರಂತ್ ಅವರು ಗುರು ಶಿಷ್ಯರ ಸಂಬಂಧದ ಬಗ್ಗೆ ಮಾತನಾಡಿ ಒಬ್ಬ ಶಿಕ್ಷಕನಿಗೆ ಈ ರೀತಿಯ ಗುರುವಂದನೆ ಸಂದರ್ಭ ಆಗುವ ಸಂತಸ ಯಾವುದರಿಂದಲೂ ಆಗೋದಿಲ್ಲ. ನಾವು ಶಿಕ್ಷಕರು ಧನ್ಯರು. ನಮ್ಮನ್ನು ಅಭಿನಂದಿಸಿದ ವಿದ್ಯಾರ್ಥಿಗಳಿಗೆ ಮತ್ತು ಹೆತ್ತವರಿಗೆ ನಮ್ಮ ವಂದನೆಗಳು ಎಂದರು.

ವಿದ್ಯಾರ್ಥಿಗಳು ಮತ್ತು ಹೆತ್ತವರ ಪರವಾಗಿ ಶಿಕ್ಷಕರನ್ನು ವಿದ್ಯಾರ್ಥಿಗಳಾದ ಸಮರ್ಥ್ ಸಿ.ಎಸ್., ಪರಿಣಿತ್, ಅನುಷಾ, ಸೃಷ್ಠಿ, ಲವಿಕಾ, ಅನನ್ಯ ಕೆ., ಅನ್ವಿತಾ, ವಿನ್ಯಾಸ್, ಕೀರ್ತನ್ ಜಿ, ಷರೀಪ್ ಸಂಮಾನಿಸಿದರು.ವೇದಿಕೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಉಮೇಶ್ ಕರ್ಕೇರ, ಉಪಾಧ್ಯಕ್ಷರಾದ ಡಾ| ತ್ರಿವೇಣಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶ್ರೀ ಗಣೇಶ್ ಕುಮಾರ್, ಉಪಸ್ಥಿತರಿದ್ದರು.

ವಿದ್ಯಾರ್ಥಿ ನಾಯಕ ಮಾ| ಮನ್ವಿತ್ ತಿಂಗಳಾಯ ಸ್ವಾಗತಿಸಿದರು, ಕು| ರಶ್ಮಿ ಸನ್ಮಾನದ ವಿವರ ಮತ್ತು ಲವೀಶ್ ಪಿ. ಬಹುಮಾನದ ವಿವರವನ್ನು ವಾಚಿಸಿದರು. ಕು| ತೇಜಸ್ವಿನಿ ಧನ್ಯವಾದವಿತ್ತರು. ಕು| ದೀಕ್ಷಾ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಮೊದಲು ಶಿಕ್ಷಕರಿಗೆ ವಿವಿಧ ಸ್ಪರ್ಧೆಗಳು ಜರಗಿತು.

Leave a Reply

Your email address will not be published. Required fields are marked *

error: Content is protected !!