ಗ್ರಾಹಕರ ವಿಶ್ವಾಸ ಗಳಿಸಿದರೆ ಮಾತ್ರ ಉದ್ಯಮದಲ್ಲಿ ಯಶಸ್ಸು ಗಳಿಸಲು ಸಾಧ್ಯ : ಪ್ರಮೋದ್ ಮಧ್ವರಾಜ್
ನಾವು ನಡೆಸುವ ಯಾವುದೇ ಉದ್ಯಮದಲ್ಲಿ ಯಶಸ್ಸು ಸಾಧಿಸಬೇಕಾದರೆ ಗ್ರಾಹಕರ ಪ್ರೀತಿ, ವಿಶ್ವಾಸ ಅತಿದೊಡ್ಡ ಕಾರಣ. ಗ್ರಾಹಕರನ್ನು ತೃಪ್ತಿ ಗೊಳಿಸುವುದೇ ನಮ್ಮ ಹಿಂದಿರುವ ಶಕ್ತಿಯಾಗಿರಬೇಕು. ಆಗ ಉದ್ಯಮದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ ಎಂದು ಉಡುಪಿ ಜಿಲ್ಲಾ ಮಾಜಿ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ ತಿಳಿಸಿದರು.
ಶೃಂಗೇರಿಯ ಶಂಕರಾಚಾರ್ಯ ಸರ್ಕಲ್ ಬಳಿಯ ಶಾರದಾ ಕಂಪಾರ್ಟ್ ನಲ್ಲಿ ಆರಂಭವಾದ “ಗೋಕುಲ್ ವೆಜ್” ನ ನಾಲ್ಕನೇ ಶಾಖೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಉಡುಪಿಯಲ್ಲಿ ತನ್ನದೇ ನೇತೃತ್ವದಲ್ಲಿ ಹಲವಾರು ಸಮಾಜ ಸೇವೆಯನ್ನು ಮಾಡುತ್ತಿರುವಂತಹ ಕೃಷ್ಣಮೂರ್ತಿ ಆಚಾರ್ಯ ದಂಪತಿಗಳು ಇದೀಗ ತಮ್ಮ ಉದ್ಯಮವನ್ನು ಜಿಲ್ಲೆಯ ಹೊರ ಭಾಗಕ್ಕೂ ವಿಸ್ತರಿಸಿದ್ದು, ನಿಜಕ್ಕೂ ಸಂತಸದ ವಿಚಾರ. ಗ್ರಾಹಕರ ವಿಶ್ವಾಸ ಗಳಿಸಿ ಇನ್ನಷ್ಟು ಶಾಖೆ ಆರಂಭಿಸಲು ಸಾಧ್ಯವಾಗಲಿ ಎಂದು ಪ್ರಮೋದ್ ಮಧ್ವರಾಜ್ ಶುಭ ಹಾರೈಸಿದರು.
ಅತಿಥಿಗಳಾಗಿ ಕಟ್ಟಡದ ಮಾಲೀಕರಾದ ಶ್ರೀನಿವಾಸ್ ಮತ್ತು ಇ೦ಜಿತ್ ಕುಮಾರ್ ಉಪಸ್ಥಿತರಿದ್ದರು.
ಗೋಕುಲ್ ವೆಜ್ನ ಮಾಲಕರಾದ ಕೆ.ಕೃಷ್ಣಮೂರ್ತಿ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರೆ, ಉಡುಪಿ ನಗರಸಭಾ ಸದಸ್ಯೆ ಅಮೃತಾ ಕೃಷ್ಣಮೂರ್ತಿ ಆಚಾರ್ಯ ಧನ್ಯವಾದ ಸಮರ್ಪಿಸಿದರು. ಗವ೦ತಿ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ಉಡುಪಿ ಕಿನ್ನಿಮೂಲ್ಕಿಯ ಕೃಷ್ಣಮೂರ್ತಿ ಆಚಾರ್ಯ ಸದಾ ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಖ್ಯಾತರಾಗಿದ್ದು, ಪತ್ನಿ ಅಮೃತಾ ಕೃಷ್ಣಮೂರ್ತಿ ಆಚಾರ್ಯ ಉಡುಪಿ ನಗರಸಭೆಯ ಸಭೆಯ ಸದಸ್ಯರಾಗಿ ಜನಮೆಚ್ಚುಗೆ ಗಳಿಸಿದ್ದಾರೆ.
ಇತಿಹಾಸ ಪ್ರಸಿದ್ಧ ಉಡುಪಿ ಶ್ರೀಕೃಷ್ಣಮಠದ ಬಳಿಯ ಪಾರ್ಕಿಂಗ್ ಸಮೀಪ ಕೆಲವು ವರ್ಷಗಳ ಹಿಂದೆ ಆರಂಭಿಸಿದಂತಹ ಮೊದಲ ಶಾಖೆ ಮಥುರಾ ಗೋಕುಲ್ ವೆಜ್ ಗೆ ಗ್ರಾಹಕರಿಂದ ಉತ್ತಮ ಸ್ಪಂದನೆ ಸಿಕ್ಕಿದ್ದರಿಂದ, ಇದೀಗ ರಾಮನಗರ ಮತ್ತು ಹಾಸನದಲ್ಲಿ ಕೆಲವು ಸಮಯಗಳ ಹಿಂದೆಯಷ್ಟೇ ಗೋಕುಲ್ ವೆಜ್ ಅನ್ನು ಲೋಕಾರ್ಪಣೆಗೊಳಿಸಿದ್ದಾರೆ. ಶೃಂಗೇರಿಯಲ್ಲಿ ಉದ್ಘಾಟನೆಗೊಂಡ “ಗೋಕುಲ್ ವೆಜ್” ನ ನಾಲ್ಕನೇ ಶಾಖೆಯಲ್ಲಿ 540ಕ್ಕೂ ಅಧಿಕ ಬಗೆಯ ವಿವಿಧ ಖಾದ್ಯಗಳು ಸಿದ್ಧಗೊಂಡಿದ್ದು, ಗ್ರಾಹಕರಿಗೆ ಸಂತೃಪ್ತಿ ಸಿಗಲಿದೆ ಎಂಬುದು ಕೃಷ್ಣಮೂರ್ತಿ ಆಚಾರ್ಯ ದಂಪತಿಗಳ ದೃಢವಾದ ವಿಶ್ವಾಸ.