ಎಸ್ಪಿ ಕಚೇರಿ ಸ್ಥಳಾಂತರ ಬಂಟ್ವಾಳವೇ ಸೂಕ್ತ ಸ್ಥಳ : ರೈ
ಬಂಟ್ವಾಳ: ಜಿಲ್ಲಾ ಕೇಂದ್ರದಲ್ಲಿ ಕಾರ್ಯಾಚರಿಸುತ್ತಿರುವ ಪೊಲೀಸ್ ವರಿಷ್ಠಾಧಿಕಾರಿಯವರ (ಎಸ್ಪಿ) ಕಚೇರಿಯು ಸ್ಥಳಾಂತರಿಸುವ ಪ್ರಸ್ತಾವವಿದ್ದಲ್ಲಿ ಇದಕ್ಕೆ ಬಂಟ್ವಾಳವೇ ಸೂಕ್ತ ಸ್ಥಳ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.
ಅವರು ಬಿ.ಸಿ.ರೋಡ್ ನಲ್ಲಿರುವ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಸ್ಪಿ ಕಚೇರಿಯು ಪೂತ್ತೂರಿಗೆ ಸ್ಥಳಾಂತರಿಸುವ ಕುರಿತು ಚರ್ಚೆಯಾಗುತ್ತಿವೆ. ಬೆಳ್ತಂಗಡಿ, ಪುತ್ತೂರು, ಸುಳ್ಯ ತಾಲೂಕುಗಳಿಗೆ ಬಂಟ್ವಾಳವೇ ಕೇಂದ್ರ ಸ್ಥಾನವಾಗಿದ್ದು,ಜನರಿಗೂ ಬಹಳಷ್ಟು ಅನುಕೂಲವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ರಾಜ್ಯದ ವಿವಿಧೆಡೆಯಲ್ಲಿ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಎಸ್ಪಿ ಕಚೇರಿಯು ಕಾರ್ಯಾಚರಿಸುತ್ತಿವೆ, ಜಿಲ್ಲಾ ಎಸ್ಪಿ ಕಚೇರಿ ಕೂಡ ಮಂಗಳೂರಿನ ಕಮಿಷನರೇಟ್ ಆವರಣದಲ್ಲಿಯೇ ಕಾರ್ಯಾಚರಿಸುತ್ತಿದೆ. ಆಡಳಿತಾತ್ಮಕ ಉದ್ದೇಶದಿಂದ ಅಲ್ಲಿಯೇ ಉಳಿದರೆ ಉತ್ತಮ,ಆದರೆ ಇದನ್ನು ಪುತ್ತೂರಿಗೆ ವರ್ಗಾಯಿಸುವ ನಿಟ್ಡಿನಲ್ಲಿ ರಾಜಕೀಯ ಒತ್ತಡಗಳು ಇಲಾಖೆಯ ಮೇಲಿದೆ. ಒಂದು ವೇಳೆ ಎಸ್ಪಿ ಕಚೇರಿಯನ್ನು ಸ್ಥಳಾಂತರಗೊಳಿಸುವುದಿದ್ದಲ್ಲಿ ಸಾರ್ವಜನಿಕರ ಹಿತ ದೃಷ್ಠಿಯಿಂದ ಬಂಟ್ವಾಳದಲ್ಲಿಯೇ ಆಗಲಿ ಎಂದು ಒತ್ತಾಯಿಸಿದರಲ್ಲದೆ ಈ ದೆಸೆಯಲ್ಲಿ ಇಲ್ಲಿನ ಜನಪ್ರತಿನಿಧಿಗಳು ಪ್ರಯತ್ನಿಸಬೇಕು ಎಂದರು.ಸವಾರರಿಗೆ ಹೊರೆ: ಕೇಂದ್ರ ಸರಕಾರವು ಇದೀಗ ಜಾರಿಗೆ ತಂದಿರುವ ಮೋಟಾರು ವಾಹನ ಕಾಯಿದೆಯಡಿಯಲ್ಲಿ ವಾಹನಗಳಿಗೆ ವಿಧಿಸಲಾಗುತಿರುವ ದಂಡದಿಂದ ಜನ ಸಾಮಾನ್ಯರಿಗೆ ಹೊರೆಯಾಗುತ್ತಿವೆ ಎಂದ ರಮಾನಾಥ ರೈ, ಇದನ್ನು ಸರಳೀಕರಿಸಿಗೊಳಿಸಿ ದಂಡ ಪ್ರಮಾಣವನ್ನು ಇಳಿಕೆ ಮಾಡುವ ದೆಸೆಯಲ್ಲಿ ಸರಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.
ವಾಹನ ಬಿಡಿಭಾಗಗಳನ್ನು ಆಯಾ ಕಂಪನಿಯಲ್ಲಿ ಖರೀದಿರುವ ಸುತ್ತೊಲೆ ಹೊರಡಿಸಿರುವ ಹಿನ್ನೆಲೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದರಿಂದ ಸ್ಥಳೀಯ ಗ್ಯಾರೇಜ್ ನಲ್ಲಿ ತಯಾರಿಸಿರುವ ವಾಹನಗಳ ಬಿಡಿಭಾಗಗಳಿಗೆ ಬೇಡಿಕೆ ಇಲ್ಲದಂತಾಗುತ್ತದೆ. ಪರಿಣಾಮ ಸಣ್ಣ ಪ್ರಮಾಣದ ಗ್ಯಾರೇಜ್ ಗಳು ಮುಚ್ಚುವಂತಹ ಪರಿಸ್ಥಿತಿ ಎದುರಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಹಿಂದಿ ಹೇರಿಕೆ ವಿರೋಧ:
“ಒಂದೇ ದೇಶ, ಒಂದೇ ಭಾಷೆ” ಘೋಷಣೆಯಡಿ ಕೇಂದ್ರ ಸರಕಾರವು ಹಿಂದಿ ಭಾಷೆಯ ಹೇರಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಇದರಿಂದ ಪ್ರಾಥಮಿಕ ಶಾಲಾ ಮಟ್ಟದಲ್ಲಿ ಹಿಂದಿ ಕಲಿಯವುದು ಅನಿವಾರ್ಯವಾಗುವುದರಿಂದ ಆಯಾ ಸ್ಥಳೀಯ ಭಾಷೆ ಗಳು ನಶಿಸಿ ಹೋಗುವ ಸಾಧ್ಯತೆ ಇದೆ ಎಂದ ಅವರು, ರಾಜ್ಯ ಹಾಗೂ ಜಿಲ್ಲೆಯಲ್ಲಿ ನೂರಾರು ಭಾಷೆಗಳು ಈಗಾಗಲೇ ನಶಿಸಿ ಹೋಗಿವೆ. ಇದೇ ರೀತಿ ಮುಂದುರಿದರೆ ರಾಜ್ಯದ ಕನ್ನಡ ಭಾಷೆ ಉಳಿಯಲು ಸಾಧ್ಯವೇ ಎಂದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಮಾಣಿ, ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಭೂ ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್ ಹಾಜರಿದ್ದರು.