ಕೆಲ ಕಾಂಗ್ರೆಸ್ ನಾಯಕರು ಹಿಜಡಾಗಳು: ಈಶ್ವರಪ್ಪ
ಬೆಂಗಳೂರು: ‘ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಭೇಟಿ ಮಾಡಿದ ಕೆಲ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರುವ ಆಸೆಯಿದೆ ಎಂದಿದ್ದರು. ಆದರೆ, ಕ್ಷೇತ್ರದಲ್ಲಿ 50 ಸಾವಿರ ಮುಸ್ಲಿಂ ಮತಗಳಿದ್ದು, ಅದನ್ನು ಕಳೆದುಕೊಂಡರೆ ಸೋಲುತ್ತೇವೆ ಎನ್ನುವುದು ಅವರ ಅಳಲಾಗಿತ್ತು. ಈ ರೀತಿಯ ಹಿಜಡಾತನ ಕೆಲವರಲ್ಲಿದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಶ್ರೀರಾಮ ಸೇನೆ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘370ನೇ ವಿಧಿ ರದ್ದತಿಗಾಗಿ ಪ್ರಧಾನಿಗೆ ಅಭಿನಂದನೆ’ ಸಮಾರಂಭದಲ್ಲಿ ಮಾತನಾಡಿದರು. ‘370ನೇ ವಿಧಿ, ತ್ರಿವಳಿ ತಲಾಖ್ ರದ್ದತಿಗೆ ಇಡೀ ರಾಷ್ಟ್ರ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ಅಖಂಡ ಭಾರತ ನಿರ್ಮಾಣವಾಗಬೇಕೆಂಬ ಆಸೆಯಿದೆ. ಆದರೆ, ಇನ್ನೂ ಕೆಲವರು ಮುಸ್ಲಿಮರ ಮತಗಳನ್ನೇ ನಂಬಿಕೊಂಡಿದ್ದಾರೆ. ನನ್ನ ಕ್ಷೇತ್ರದಲ್ಲಿ 8 ಸಾವಿರದಿಂದ 9 ಸಾವಿರ ಕುರುಬರ ಮತವಿದೆ. ಅದೇ ಮುಸ್ಲಿಮರ ಮತ 50 ಸಾವಿರದಿಂದ 60 ಸಾವಿರವಿದೆ. ಆದರೆ, ಇದೂವರೆಗೂ ಒಬ್ಬ ಮುಸ್ಲಿಮನಿಗೂ ನಮಸ್ಕಾರ ಹೊಡೆದು ಮತ ಕೇಳಿಲ್ಲ. ಅದಾಗಿಯೂ 47 ಸಾವಿರ ಮತಗಳ ಅಂತರದಿಂದ ಗೆದ್ದಿರುವೆ. ರಾಷ್ಟ್ರ ಭಕ್ತಿ ಹೊಂದಿರುವ ಮುಸ್ಲಿಮರು ಬಿಜೆಪಿಗೆ ಮತ ಹಾಕುತ್ತಾರೆ. ಯಾರಿಗೆ ಪಾಕಿಸ್ತಾನದ ಪರ ಒಲವಿದೆಯೋ ಅವರು ಮತ ಹಾಕಲು ಹಿಂದೇಟು ಹಾಕುತ್ತಾರೆ’ ಎಂದರು.
‘ಹಿಂದೆ ನಾವು ಅಧಿಕಾರದಲ್ಲಿದ್ದಾಗ ಗೋಹತ್ಯೆ ನಿಷೇಧ ಕಾನೂನು ಜಾರಿ ಮಾಡಿದ್ದೇವು. ಆದರೆ, ಬಳಿಕ ಬಂದ ಕಾಂಗ್ರೆಸ್ ಸರ್ಕಾರ ಈ ಕಾನೂನು ರದ್ದು ಮಾಡಿತು. ಇದೀಗ ನಮ್ಮ ಸರ್ಕಾರ ಗೋವಿನ ಸಂತತಿ ಉಳಿವಿಗಾಗಿ ಕಾನೂನು ಜಾರಿ ಮಾಡಲಿದೆ’ ಎಂದರು.
ಹಿಂದೂಗಳು ನಪುಂಸಕರಲ್ಲ: ‘ಈ ದೇಶದ ಹಿಂದೂಗಳು ನಪುಂಸಕರಲ್ಲ. ರಾಮ ಮಂದಿರದ ವಿಚಾರವಾಗಿ ಹಲವು ವರ್ಷಗಳಿಂದ ಹೋರಾಟ ಮಾಡಲಾಗುತ್ತಿದೆ. ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಿ, ತಾತ್ಕಾಲಿಕವಾಗಿ ರಾಮ್ ಲೀಲಾ ಮಂದಿರ ಕಟ್ಟಲಾಗಿದೆ. ಇಲ್ಲಿ ರಾಮ ಮಂದಿರವನ್ನು ಕಟ್ಟೇ ಕಟ್ಟುತ್ತೇವೆ. ಇದು ಸ್ವಾಭಿಮಾನದ ಸಂಕೇತ’ ಎಂದರು.
‘ಚಾಮರಾಜಪೇಟೆಯಲ್ಲಿ 25 ಸಾವಿರ ಬಾಂಗ್ಲಾ ವಲಸಿಗರು’
‘ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ತಮ್ಮ ಕ್ಷೇತ್ರದಲ್ಲಿ 25 ಸಾವಿರ ಬಾಂಗ್ಲಾ ವಲಸಿಗರಿಗೆ ಅಕ್ರಮವಾಗಿ ನೆಲೆಸಲು ಅವಕಾಶ ನೀಡಿದ್ದಾರೆ. ಅವರಿಗೆ ಗುರುತಿನ ಚೀಟಿ ಮಾಡಿಸಿಕೊಟ್ಟಿದ್ದಾರೆ’ ಎಂದು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದರು.
‘ಅದೇ ರೀತಿ, 150 ಕಸಾಯಿ ಖಾನೆಗಳು ಕಾನೂನು ಬಾಹಿರವಾಗಿ ಅವರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿವೆ. ಇಂತಹ ರಾಷ್ಟ್ರವಿರೋಧಿ ಚಟುವಟಿಕೆಯನ್ನು ಸಹಿಸುವುದಿಲ್ಲ. ಶ್ರೀರಾಮ ಸೇನೆ ನೇತೃತ್ವದಲ್ಲಿ ಹೋರಾಟ ಮಾಡಲಾಗುತ್ತದೆ. ಜಮೀರ್ ಅಹಮ್ಮದ್ ಖಾನ್ ಚಡ್ಡಿಯಲ್ಲಿ ಉಚ್ಚೆ ಹೊಯ್ದುಕೊಳ್ಳುತ್ತಾನೆ’ ಎಂದು ಅವರು ಏಕವಚನದಲ್ಲಿ ಟೀಕಿಸಿದರು.
ರೌಡಿಶೀಟರ್ ಜತೆಗೆ ವೇದಿಕೆ ಹಂಚಿಕೊಂಡ ಸಚಿವ
ನಗರದ ರೌಡಿಶೀಟರ್ ಯಶಸ್ವಿನಿ ಗೌಡ ಜತೆಗೆ ಸಚಿವ ಕೆ.ಎಸ್. ಈಶ್ವರಪ್ಪ ವೇದಿಕೆ ಹಂಚಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ. ಯಶಸ್ವಿನಿ ಗೌಡ ಅವರು ಶ್ರೀರಾಮ ಸೇನೆಯ ಮಹಿಳಾ ಘಟಕದ ಅಧ್ಯಕ್ಷರೂ ಆಗಿದ್ದು, ಅವರನ್ನು ಸಮಾರಂಭದಲ್ಲಿ ಗೌರವಿಸಲಾಯಿತು. ಈ ಕ್ಷಣಕ್ಕೆ ಈಶ್ವರಪ್ಪ ಕೂಡಾ ಸಾಕ್ಷಿಯಾದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ‘ಶ್ರೀರಾಮ ಸೇನೆಯವರು ದೇಶಭಕ್ತರು ಎಂದು ಬಂದಿರುವೆ. ರೌಡಿಶೀಟರ್, ಪೌಡಿಶೀಟರ್ ಬಗ್ಗೆ ಗೊತ್ತಿಲ್ಲ. ನಿಮ್ಮಲ್ಲೇ ರೌಡಿಶೀಟರ್ ಇದ್ದರೆ ಯಾರಿಗೆ ಗೊತ್ತಾಗುತ್ತದೆ. ಸೌಜನ್ಯವಾಗಿ ಕರೆದಿದ್ದರಿಂದ ಆಮಂತ್ರಣ ನಿರಾಕರಿಸಲಿಲ್ಲ’ ಎಂದು ಸ್ಪಷ್ಟನೆ ನೀಡಿದರು.