ಸಿದ್ಧಾರ್ಥ್ ಸಾವಿನಲ್ಲಿ ಚಾಲಕನ ಹೇಳಿಕೆ ಮೇಲೆ ಅನುಮಾನ ?
ಮಂಗಳೂರು: ಕಾಫಿ ಕಿಂಗ್ ಸಿದ್ಧಾರ್ಥ್ ನಿಗೂಢ ಸಾವು ಇದೀಗ ಸ್ಫೋಟಕ ತಿರುವು ಪಡೆದುಕೊಂಡಿದೆ. ಸಿದ್ದಾರ್ಥ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದ್ದರೂ ಅದೊಂದು ಕೊಲೆ ಎನ್ನುವ ಸಂಶಯದ ವಾಸನೆ ಪೊಲೀಸರಿಗೂ ಸಿಕ್ಕಿದೆ.
ಪೊಲೀಸರು ನಾನಾ ಆಯಾಮಗಳಲ್ಲಿ ನಾಲ್ಕು ತಂಡಗಳನ್ನು ರಚಿಸಿಕೊಂಡು ತನಿಖೆ ಆರಂಭಿಸಿದ್ದು ಸಿದ್ಧಾರ್ಥ್ ಜೊತೆಗಿದ್ದ ಚಾಲಕನ ಹೇಳಿಕೆಗಳೇ ಪೊಲೀಸರಿಗೆ ಇದೀಗ ಅನುಮಾನ ಹುಟ್ಟುವಂತೆ ಮಾಡಿದೆ.
ಅದರಲ್ಲೂ ಆತ ಹೇಳಿದಂತೆ ಸೋಮವಾರ ಸಂಜೆ 7 ಗಂಟೆಗೆ ನೇತ್ರಾವತಿ ಸೇತುವೆಯ ಬಳಿ ನಾವು ತಲುಪಿದ್ದು, ನನ್ನನ್ನು ಮುಂದೆ ಹೋಗುವಂತೆ ಹೇಳಿ ಸಿದ್ಧಾರ್ಥ್ ಅವರು ನೇತ್ರಾವತಿ ಸೇತುವೆಯಲ್ಲೇ ಇಳಿದುಕೊಂಡಿದ್ದರು ಎಂದು ಹೇಳಿಕೆ ನೀಡಿದ್ದಾರೆ. ಆದರೆ ಬಂಟ್ವಾಳದ ಬ್ರಹ್ಮರಕೂಟ್ಲು ಟೋಲ್ ಗೇಟ್ನಲ್ಲಿ ಅಂದು ಸಂಜೆ 5.28ಕ್ಕೆ ಅವರಿದ್ದ ಕಾರು ಪಾಸ್ ಆಗಿರೋ ಸಿಸಿ ಕ್ಯಾಮರಾ ಫೊಟೇಜ್ ಸಿಕ್ಕಿದ್ದು ಅನುಮಾನಕ್ಕೆ ಕಾರಣವಾಗಿದೆ.
ಟೋಲ್ ಗೇಟ್ನಿಂದ ನೇತ್ರಾವತಿ ಸೇತುವೆಗೆ ಬರಲು 25 ಕಿಲೋಮೀಟರ್ ಅಂತರ ಇದ್ದು, ಕೇವಲ 35- 40 ನಿಮಿಷದಲ್ಲಿ ಬರಬಹುದು. ಆದರೆ ಅವರು ಒಂದೂವರೆ ಗಂಟೆ ಏನು ಮಾಡುತ್ತಿದ್ದರು ಅನ್ನುವ ಅನುಮಾನ ಈಗ ಎದ್ದಿದೆ