ಬ್ರೇಕಿಂಗ್ ನ್ಯೂಸ್ : ಸಿದ್ದು ಅಥವಾ ಡಿಕೆಶಿಗೆ ಸಿಎಂ ಸ್ಥಾನ? ಸಿಎಂ ಎಚ್ಡಿಕೆಗೆ ಬಿಗ್ ಶಾಕ್ !

ರಾಜ್ಯ ಸರಕಾರದ ರಾಜಕೀಯ ಪರಿಸ್ಥಿತಿ ಅಲ್ಲೋಲ ಕಲ್ಲೋಲವಾಗಿದ್ದು, ಯಾವ ಹಂತದಲ್ಲೂ ಸರಕಾರ ಬೀಳುವ ಮುನ್ಸೂಚನೆ ಶಾಸಕರಿಂದ ಬಂದಿದೆ. ಈಗಾಗಲೇ ಕಾಂಗ್ರೆಸ್ ಮತ್ತು ಜೆಡಿಎಸ್ನ ಹನ್ನೆರಡು ಶಾಸಕರು ತಮ್ಮ ರಾಜೀನಾಮೆಯನ್ನು, ಸ್ಪೀಕರ್  ಕಚೇರಿಯಲ್ಲಿ ಸ್ಪೀಕರ್ ಸಿಗದ ಕಾರಣ, ಅವರ ಕಾರ್ಯದರ್ಶಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಇನ್ನಷ್ಟು ಶಾಸಕರು ರಾಜೀನಾಮೆ ನೀಡುವ ಮುನ್ಸೂಚನೆ ರಾಜ್ಯ ಸರಕಾರಕ್ಕೆ ಬಂದಿದೆ.

ಆದರೆ ರಾಜ್ಯ ರಾಜಕೀಯದ ಸದ್ಯದ ಪರಿಸ್ಥಿತಿಯನ್ನು ಗಮನಿಸಿ ಕೊಂಡಿರುವ ಜೆಡಿಎಸ್ ವರಿಷ್ಠ ನಾಯಕ ಎಚ್ ಡಿ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ತಮ್ಮ ರಾಜಕೀಯ ವೈರತ್ವವನ್ನು ಬದಿಗಿರಿಸಿ, ರಾಜ್ಯ ಸರಕಾರವನ್ನು ಉಳಿಸುವ ನಿಟ್ಟಿನಲ್ಲಿ ಹೋರಾಟವನ್ನು ಜಾರಿ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಉನ್ನತ ಮೂಲಗಳಿಂದ ‘ಉಡುಪಿ ಟೈಮ್ಸ್’ ಗೆ ಮಾಹಿತಿ ಲಭ್ಯವಾಗಿದೆ.

 ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 79 ಸ್ಥಾನ ಲಭಿಸಿದರೆ, ಜೆಡಿಎಸ್ಗೆ 37ಸ್ಥಾನ ಲಭಿಸಿದ್ದು, ಬಿಜೆಪಿಯನ್ನು ಅಧಿಕಾರದಿಂದ ದೂರ ಇರಿಸುವ ನಿಟ್ಟಿನಲ್ಲಿ, ಕಾಂಗ್ರೆಸ್ ಜೆಡಿಎಸ್ ಗೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಟ್ಟಿತ್ತು ಮತ್ತು ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಸಮಾಧಾನ ಪಟ್ಟುಕೊಂಡಿತ್ತು. ಆದರೆ ಇದು ಕಾಂಗ್ರೆಸ್ ಶಾಸಕರಿಗೆ ನಿರಾಸೆ ಮೂಡಿಸಿತು.  

ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ಸತತವಾಗಿ ಕಾಂಗ್ರೆಸ್ ಶಾಸಕರಿಂದ ವಿರೋಧವನ್ನು ಎದುರಿಸುತ್ತಿರುವಂತಹ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪ್ರಸ್ತುತ ಅಮೆರಿಕದಲ್ಲಿದ್ದು, ವಿದೇಶದಿಂದ ಸ್ವದೇಶಕ್ಕೆ ಮರಳುವ ಹೊತ್ತಿಗೆ, ಮಾಜಿ ಮುಖ್ಯಮಂತ್ರಿಯಾಗಿ ಬದಲಾಗುವ ಸನ್ನಿವೇಶವೂ ಬಂದೊದಗಿದೆ ಎಂದು ಮಾಹಿತಿ ಲಭ್ಯವಾಗಿದೆ. 

 ಕಳೆದ ಕೆಲವು ಸಮಯಗಳಿಂದ ರಾಜೀನಾಮೆ ನೀಡುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಂತಹ, ಕಾಂಗ್ರೆಸ್ ಶಾಸಕರು ಇಂದು ನಡೆದ ರಾಜ್ಯ ರಾಜಕೀಯದ ನಾಟಕೀಯ ಬೆಳವಣಿಗೆಯಲ್ಲಿ, ಮಾಜಿ ಸಚಿವ ರಾಮಲಿಂಗಾ ರೆಡ್ಡಿಯವರ ನೇತೃತ್ವದಲ್ಲಿ ಕೆಲವೊಂದು ಜೆಡಿಎಸ್ ಶಾಸಕರು ಕೂಡ ರಾಜೀನಾಮೆ ಪತ್ರವನ್ನು ಸ್ಪೀಕರ್ ಕಾರ್ಯದರ್ಶಿಗೆ ಸಲ್ಲಿಸಿದ್ದಾರೆ. 

ಆದರೆ ರಾಜ್ಯ ರಾಜಕೀಯದಲ್ಲಿ ದುಶ್ಮನ್ ಗಳು ಒಂದಾಗಬಹುದು ಎಂಬಂತೆ, ದೇವೇಗೌಡ ಮತ್ತು ಸಿದ್ದರಾಮಯ್ಯ ಅಂತಿಮ ಹಂತದಲ್ಲಿ ರಾಜಕೀಯದ ರಣರಂಗಕ್ಕೆ ಧುಮುಕಿ ಕೊಂಡಿದ್ದು, ರಾಜ್ಯ ಸರಕಾರವನ್ನು ಉಳಿಸುವ ನಿಟ್ಟಿನಲ್ಲಿ ಹೋರಾಟವನ್ನು ಮಾಡುತ್ತಿದ್ದಾರೆ.

ಜೆಡಿಎಸ್ ವರಿಷ್ಠ ನಾಯಕ ಎಚ್ ಡಿ ದೇವೇಗೌಡ ಸರಕಾರವನ್ನು ಉಳಿಸುವ ನಿಟ್ಟಿನಲ್ಲಿ, ತನ್ನ ಪುತ್ರ ಮತ್ತು ಸದ್ಯದ ರಾಜ್ಯದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಂದ ರಾಜೀನಾಮೆಯನ್ನು ಪಡೆದುಕೊಂಡು, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಕಾಂಗ್ರೆಸ್ ರಾಜಕೀಯ ಚಾಣಾಕ್ಷ ಡಿಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡುವ ಸಾಧ್ಯತೆ ಇದ್ದು, ಉಪಮುಖ್ಯಮಂತ್ರಿ ಜೆಡಿಎಸ್ ಪಾಲಾಗಲಿದೆ ಎಂದು ‘ಉಡುಪಿ ಟೈಮ್ಸ್‌ ‘ಗೆ ಉನ್ನತ ಮೂಲಗಳಿಂದ ಮಾಹಿತಿ ಬಂದಿದೆ.

ಬಿಜೆಪಿ ಅಧಿಕಾರ ನಡೆಸದಂತೆ ತಡೆಯೊಡ್ಡುವ ನಿಟ್ಟಿನಲ್ಲಿ, ದೇವೇಗೌಡ ಮತ್ತು ಸಿದ್ದರಾಮಯ್ಯ ಒಂದಾಗಿದ್ದು, ಡಿಕೆ ಶಿವಕುಮಾರ್ ಅವರ ರಾಜಕೀಯ ಚಾಣಾಕ್ಷತನವನ್ನು ಬಳಸಿಕೊಂಡು ಅತೃಪ್ತರ ಮನವೊಲಿಸುವ ಪ್ರಯತ್ನ ಆರಂಭಗೊಂಡಿದೆ. ರಾಜ್ಯ ರಾಜಕೀಯದಲ್ಲಿ ಏನೂ ಸಾಧ್ಯವಿದೆ ಎಂಬುದಕ್ಕೆ ಇಂದಿನ ರಾಜೀನಾಮೆ ಪ್ರಹಸನವೇ ಉದಾಹರಣೆ. ‘ನಾನು ಬೆಂಗಳೂರಿಗೆ ಬಂದದ್ದು ಹೂ ಮಾರಲು ಅಲ್ಲ, ರಾಜಕೀಯ ಮಾಡಲು’ ಎಂದು ಕೆಲವು ಸಮಯಗಳ ಹಿಂದೆ ಡಿಕೆ ಶಿವಕುಮಾರ್ ಹೇಳಿದ ಮಾತು ಈಗ ಚಾಲ್ತಿಗೆ ಬರುತ್ತಿದೆ.

ರಾಜ್ಯ ಸರಕಾರದ ಪ್ರಸ್ತುತ ಸನ್ನಿವೇಶಕ್ಕೆ ಮೊನ್ನೆ ನಡೆದ ಲೋಕಸಭಾ ಚುನಾವಣೆಯು ಒಂದು ರೀತಿಯಲ್ಲಿ  ಕಾರಣವಾಗಿದ್ದು, ಕಾಂಗ್ರೆಸ್ ಹೀನಾಯ ಸೋಲಿಗೆ ಜೆಡಿಎಸ್ ಮತ್ತು ಜೆಡಿಎಸ್ ಸೋಲಿಗೆ ಕಾಂಗ್ರೆಸ್ ಎಂಬಂತೆ ಪಕ್ಷದ ಹಿರಿಯ ಕಿರಿಯ ನಾಯಕರ ಒಳಗೆ ಕಚ್ಚಾಟ ಆರಂಭವಾಗಿತ್ತು . ಈಗ ಮೈತ್ರಿ  ಸರಕಾರ ಅಳಿವು ಉಳಿವಿನ ಹೋರಾಟ ನಡೆಸುತ್ತಿದೆ.   

ವಿದೇಶದಲ್ಲಿ ಸಮ್ಮೇಳನದ ನೆಪದಲ್ಲಿ, ಅಲ್ಲಿ ಉಳಿದುಕೊಂಡು ರಾಜ್ಯ ರಾಜಕೀಯವನ್ನು ಗಮನಿಸುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಯಾವುದೇ ಹಂತದಲ್ಲೂ ರಾಜೀನಾಮೆ ನೀಡುವ ಸಾಧ್ಯತೆ ಇದ್ದು, ಕಾಂಗ್ರೆಸ್ ಪಕ್ಷಕ್ಕೆ ಮುಖ್ಯಮಂತ್ರಿ , ಜೆಡಿಎಸ್ ಪಕ್ಷಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ಸಿಗುವ ಸಾಧ್ಯತೆ ಇದೆ ಎಂದು ‘ಉಡುಪಿ ಟೈಮ್ಸ್’ ಗೆ ಈಗಾಗಲೇ ಮಾಹಿತಿ ಲಭ್ಯವಾಗಿದೆ.

ಇಂದು ರಾಜೀನಾಮೆ ನೀಡಿದ ಬಹುತೇಕ ಶಾಸಕರು, ಸಿದ್ದರಾಮಯ್ಯನವರ ಆಪ್ತರೆಂದೇ ಗುರುತಿಸಿಕೊಂಡಿದ್ದು, ಇವರ ರಾಜೀನಾಮೆ ಹಿಂದೆ ಸಿದ್ದರಾಮಯ್ಯನವರ ರಾಜಕೀಯ ಆಟವೂ ನಡೆಯುತ್ತಿದೆ. ಒಂದು ಕಾಲದಲ್ಲಿ ಸಿದ್ದರಾಮಯ್ಯನವರ ಆಪ್ತರಾಗಿದ್ದ ಕಾಂಗ್ರೆಸ್ ಚಾಣಕ್ಯ ಡಿಕೆ ಶಿವಕುಮಾರ್, ಹಲವು ನಾಯಕರ ಜೊತೆ ಮಾತುಕತೆ ನಡೆಸಿದ್ದು, ಅದರಲ್ಲೂ ಮಾಜಿ ಸಚಿವ ರಾಮಲಿಂಗ ರೆಡ್ಡಿ ಅವರೊಂದಿಗೆ ಮಾತುಕತೆ ನಡೆಸಿದ್ದು, ಸರಕಾರವನ್ನು ಉಳಿಸುವ ನಿಟ್ಟಿನಲ್ಲಿ ಹೋರಾಟವನ್ನು ಮಾಡುತ್ತಿದ್ದಾರೆ.

ಮೈತ್ರಿ ಸರಕಾರದ ಸದ್ಯದ ಭವಿಷ್ಯ ಸ್ಪೀಕರ್ ರಮೇಶ್ ಕುಮಾರ್ ಅವರ ಕೈಯಲ್ಲಿದೆ. ರಾಜೀನಾಮೆಯ ಬೆದರಿಕೆಯೊಂದಿಗೆ, ಕಾಂಗ್ರೆಸ್ ನೇತೃತ್ವದ ಮೈತ್ರಿ ಸರಕಾರ ಆಡಳಿತಕ್ಕೆ ಬರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!