ಶಾಕಿಂಗ್ ನ್ಯೂಸ್: ಮುಂಬೈ, ಕರಾವಳಿ ನಗರಗಳು ಸಂಪೂರ್ಣ ಮುಳುಗಡೆಯಾಗಲಿದೆ!

ನವದೆಹಲಿ: ಜಾಗತಿಕ ತಾಪಮಾನ ಏರಿಕೆಯಾಗುತ್ತಿದ್ದು, ಇದರ ಪರಿಣಾಮ ಸಾಗರದ ನೀರಿನ ಮಟ್ಟ ಏರಿಕೆಯಾಗಿ ದೇಶದ ವಾಣಿಜ್ಯ ನಗರಿ ಮುಂಬೈ ಸೇರಿದಂತೆ ಜಗತ್ತಿನ ಅನೇಕ ಕರಾವಳಿ ನಗರಗಳು ಸಂಪೂರ್ಣ ಮುಳುಗಡೆಯಾಗಿ ಕೋಟ್ಯಾಂತರ ಜನರು ಮನೆ-ಮಠ ಕಳೆದುಕೊಂಡು ಬೀದಿ ಪಾಲಾಗಲಿದ್ದಾರೆ.

ಗಂಭೀರದ ವಿಚಾರವೆಂದರೆ ಸಾಗರಗಳು ತನ್ನ ದಡದ ಪ್ರದೇಶಗಳನ್ನ ನುಂಗಿಹಾಕುವ ಪ್ರಕ್ರಿಯೆ ನಿರೀಕ್ಷೆಗೂ ಮೀರಿ ಅತಿ ವೇಗದಲ್ಲಿ ನಡೆಯುತ್ತಿದೆ. ಸಾಗರದ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ನಿರೀಕ್ಷೆ ಮೀರಿದ ವೇಗದಲ್ಲಿ ಭೂಪ್ರದೇಶಗಳು ನೀರಿನಿಂದ ಅವೃತವಾಗಲಿವೆ ಎಂದೂ ಸಂಶೋಧನೆಯೊಂದು ತಿಳಿಸಿದೆ.

ಇನ್ನು 30 ವರ್ಷದಲ್ಲಿ, ಅಂದರೆ 2050 ರವೇಳೆಗೆ ಭಾರತದ ವಾಣಿಜ್ಯ ನಗರಿ ಮುಂಬೈ ಸೇರಿದಂತೆ ಜಗತ್ತಿನ ಹಲವು ನಗರಗಳು ನೀರಿನಲ್ಲಿ ಮುಳುಗಡೆಯಾಗಿ ವಿಶ್ವದ ಭೂಪಟದಿಂದ ಕಣ್ಮರೆಯಾಗಲಿವೆ.

ಇನ್ನೂ ಆತಂಕದ ವಿಚಾರವೆಂದರೆ 15 ಕೋಟಿಗೂ ಹೆಚ್ಚು ಜನರು ಮನೆ-ಮಠ ಕಳೆದುಕೊಂಡು ಸಂತ್ರಸ್ತರಾಗಿ, ಬೇರೆ ಕಡೆ ವಲಸೆ ಹೋಗುವುದರಿಂದ ವಿವಿಧ ಸಾಮಾಜಿಕ ಮತ್ತು ರಾಷ್ಟ್ರೀಯ ಸಮಸ್ಯೆಗಳು ತಲೆದೋರಬಹುದು. ವಿವಿಧ ದೇಶಗಳಲ್ಲಿ ಕಲಹ, ಭಯೋತ್ಪಾದನೆಗಳು ಹೆಚ್ಚಾಗಬಹುದು ಎಂದೂ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕದ ನ್ಯೂ ಜೆರ್ಸಿ ನಗರದ ‘ಕ್ಲೈಮೇಟ್ ಸೆಂಟ್ರಲ್’ ಎಂಬ ವಿಜ್ಞಾನ ಸಂಸ್ಥೆ ನಡೆಸಿದ ಹೊಸ ಸಂಶೋಧನೆಯಿಂದ ಈ ಆತಂಕಕಾರಿ ಮಾಹಿತಿ ಬಹಿರಂಗವಾಗಿದೆ ಎಂದೂ ಹೇಳಲಾಗಿದೆ.

ಭಾರತದ ವಾಣಿಜ್ಯ ರಾಜಧಾನಿ ಎನ್ನಲಾದ ಹಾಗೂ ವಿಶ್ವದ ಬೃಹತ್ ನಗರಗಳಲ್ಲೊಂದೆನಿಸಿದ ಮುಂಬೈನ ಬಹುತೇಕ ಭೂಪ್ರದೇಶವು ನೀರಿನಲ್ಲಿ ಮುಳುಗಡೆಯಾಗಲಿದೆ ಎಂದು ಈ ಸಂಶೋಧಕರು ಎಚ್ಚರಿಸಿದ್ದಾರೆ.

“ಕ್ಲೈಮೇಟ್ ಸೆಂಟ್ರಲ್” ತನ್ನ ವರದಿಯನ್ನು “ನೇಚರ್ ಕಮ್ಯೂನಿಕೇಶನ್ಸ್” ಪತ್ರಿಕೆಯಲ್ಲಿ ಬಿಡುಗಡೆ ಮಾಡಿದ್ದು, ಸಂಶೋಧಕರು ಈ ಹಿಂದಿನ ವಿಧಾನದ ಬದಲು ಉಪಗ್ರಹ ಮಾಹಿತಿ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ನೆರವಿನಿಂದ ಸಮುದ್ರ ನೀರಿನ ಮಟ್ಟವನ್ನು ಅಳೆದು ಭೂಮುಳುಗಡೆಯ ಪ್ರಮಾಣವನ್ನು ಹೆಚ್ಚು ಕರಾರುವಾಕ್ಕಾಗಿ ಅಂದಾಜು ಮಾಡಿದ್ದಾರೆ ಎನ್ನಲಾಗಿದೆ.

ಮುಂಬೈ ಮಾತ್ರವಲ್ಲ, ವಿಯೆಟ್ನಾಮ್​ನ ಹೋ ಚಿ ಮಿನ್ ನಗರ, ಥಾಯ್ಲೆಂಡ್​ನ ಬ್ಯಾಂಕಾಕ್, ಚೀನಾದ ಶಾಂಘೈ, ಈಜಿಪ್ಟ್​ನ ಅಲೆಕ್ಸಾಂಡ್ರಿಯಾ, ಇರಾಕ್​ನ ಬಾಸ್ರಾ ಮೊದಲಾದ ನಗರಗಳು ಮುಳುಗಡೆಯಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *

error: Content is protected !!