ನೋಟು ಬ್ಯಾನ್ ಬಳಿಕ ಬಂಗಾರದ ಮೇಲೆ ಮೋದಿ ಸರ್ಕಾರದ ಸರ್ಜಿಕಲ್ ಸ್ಟ್ರೈಕ್?

ನವದೆಹಲಿ: ನೋಟು ನಿಷೇಧದ ಬಳಿಕ ಮೋದಿ ಸರ್ಕಾರ ಕಪ್ಪು ಹಣ ನಿಯಂತ್ರಿಸಲು ಬಂಗಾರದ ಮೇಲೆ ಭಾರೀ ಪ್ರಮಾಣದ ತೆರಿಗೆ ಹೇರಲು ಚಿಂತನೆ ನಡೆಸಿದೆ. ಮಾಧ್ಯಮವೊಂದು ವರದಿ ಮಾಡಿದ್ದು ಕಪ್ಪು ಹಣವನ್ನು ಸಕ್ರಮಗೊಳಿಸಲು ಹೇಗೆ ಯೋಜನೆ ತರಲಾಗಿತ್ತೋ ಅದೇ ರೀತಿಯಾಗಿ ದಾಖಲೆ ಇಲ್ಲದ ಚಿನ್ನವನ್ನು ನಿಗದಿ ಪಡಿಸಿದ ತೆರಿಗೆ ಪಾವತಿಸಿ ಸಕ್ರಮಗೊಳಿಸಲು ಮುಂದಾಗಿದೆ.

ಆರ್ಥಿಕ ವ್ಯವಹಾರಗಳ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ಈ ಗೋಲ್ಡ್ ಅಮ್ನೆಸ್ಟಿ ಸ್ಕೀಂ ರೂಪಿಸಿದ್ದು ಆರಂಭದಲ್ಲಿ ಸರ್ಕಾರ ಚಿನ್ನ ಸಂಗ್ರಹಕ್ಕೆ ಒಂದು ಮಿತಿಯನ್ನು ನಿಗದಿ ಪಡಿಸುತ್ತದೆ. ಈ ಪ್ರಮಾಣಕ್ಕಿಂತ ಕಡಿಮೆ ಚಿನ್ನವನ್ನು ಹೊಂದಿದ್ದರೆ ಅದರ ವಿವರವನ್ನು ತೋರಿಸುವ ಅಗತ್ಯವಿಲ್ಲ. ಆದರೆ ಆ ಮಿತಿಗಿಂತ ಜಾಸ್ತಿ ಪ್ರಮಾಣದಲ್ಲಿ ಚಿನ್ನ ಸಂಗ್ರಹ ಇದ್ದರೆ ಮೂಲವನ್ನು ತಿಳಿಸಬೇಕಾಗುತ್ತದೆ. ಆಭರಣ ಖರೀದಿಸಿದ ರಸೀದಿಯನ್ನು ನೀಡಬೇಕಾಗುತ್ತದೆ. ಒಂದು ವೇಳೆ ದಾಖಲೆಯಿಲ್ಲದ ಚಿನ್ನವಿದ್ದರೆ ಅದರ ವಿವರವನ್ನು ಸರ್ಕಾರಕ್ಕೆ ತೋರಿಸಬೇಕಾಗುತ್ತದೆ. ನಂತರ ಸರ್ಕಾರವೇ ನಿಗದಿಪಡಿಸಿದ ದಂಡವನ್ನು ತೆತ್ತು ಈ ಚಿನ್ನವನ್ನು ಸಕ್ರಮ ಮಾಡಿಕೊಳ್ಳಬೇಕಾಗುತ್ತದೆ

ಅಕ್ಟೋಬರ್ ಎರಡನೇ ವಾರದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಈ ಯೋಜನೆಯ ಬಗ್ಗೆ ನಿರ್ಧಾರ ಪ್ರಕಟವಾಗಬೇಕಿತ್ತು. ಆದರೆ ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ನಿಗದಿಯಾಗಿದ್ದರಿಂದ ಕ್ಯಾಬಿನೆಟ್ ಸಭೆಯಲ್ಲಿ ಈ ವಿಚಾರದ ಬಗ್ಗೆ ಚರ್ಚಿಸುವ ನಿರ್ಧಾರದಿಂದ ಸರ್ಕಾರ ಹಿಂದಕ್ಕೆ ಬಂದಿತ್ತು ಎಂದು ಮೂಲಗಳು ತಿಳಿಸಿವೆ.

ಚಿನ್ನದ ಮೇಲೆ ತೆರಿಗೆ ಯಾಕೆ?
ನೋಟು ನಿಷೇಧದ ಬಳಿಕ ಹಣಕಾಸು ವ್ಯವಹಾರಗಳಿಗೆ ಕಠಿಣ ನೀತಿಯನ್ನು ತರಲಾಗಿದ್ದು ಬ್ಯಾಂಕಿನಿಂದ ನಗದು ಡ್ರಾ ಮಾಡಲು ಮಿತಿ ಹೇರಲಾಗಿದೆ. ಅಷ್ಟೇ ಅಲ್ಲದೇ ಆನ್‍ಲೈನ್ ವ್ಯವಹಾರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಂದು ವ್ಯವಹಾರಗಳು ದಾಖಲಾಗುತ್ತದೆ. ಇದರಿಂದ ಪಾರಾಗಲು ಕಪ್ಪು ಕುಳಗಳು ಭಾರೀ ಪ್ರಮಾಣದಲ್ಲಿ ಚಿನ್ನ ಖರೀದಿಸುತ್ತಿದ್ದಾರೆ. ಚಿನ್ನದ ಬೆಲೆ ವರ್ಷ ವರ್ಷ ಜಾಸ್ತಿ ಆಗುತ್ತಿರುವ ಕಾರಣ ಮತ್ತು ಇದನ್ನು ಸುಲಭವಾಗಿ ತೆಗೆದುಕೊಂಡು ಹೋಗಬಹುದಾದ ಆಸ್ತಿ ಆಗಿದ್ದರಿಂದ ಇದರ ಮೇಲೆಯೇ ಹೆಚ್ಚಿನ ಹಣವನ್ನು ಹೂಡಿಕೆ ಮಾಡಿ ಚಿನ್ನದ ಆಭರಣ/ ಬಾರ್ ಗಳನ್ನು ಖರೀದಿಸುತ್ತಿದ್ದಾರೆ. ಚಿನ್ನ ನೀಡುವುದರ ಮೂಲಕವೂ ಭ್ರಷ್ಟಾಚಾರ ನಡೆಯುತ್ತದೆ. ಯಾರ ಬಳಿ ಎಷ್ಟು ಚಿನ್ನ ಇದೆ ಎನ್ನುವ ಮಾಹಿತಿಯೂ ಸರ್ಕಾರದ ಬಳಿ ಇಲ್ಲದ ಕಾರಣ ಕಪ್ಪು ಕುಳಗಳು ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಸಂಗ್ರಹಿಸುತ್ತಿದ್ದಾರೆ. ಅದರಲ್ಲೂ ರಾಜಕಾರಣಿಗಳು ಮತ್ತು ಸರ್ಕಾರಿ ಉದ್ಯೋಗಿಗಳ ಮನೆ ಮೇಲೆ ದಾಳಿ ನಡೆದಾಗ ಕೆಜಿಗಟ್ಟಲೇ ಚಿನ್ನ ಇರುವುದು ಪತ್ತೆಯಾಗುತ್ತದೆ. ಹೀಗಾಗಿ ಅಕ್ರಮವಾಗಿ ಬಂದಿರುವ ಚಿನ್ನದ ಮೇಲೆ ನಿಗಾ ಇಡಲು ಸರ್ಕಾರ ಈಗ ತೆರಿಗೆ ಹೇರಲು ಮುಂದಾಗುತ್ತಿದೆ.

ಗೊಂದಲವೂ ಇದೆ:
ಹಿರಿಯರಿಂದ ಬಳುವಳಿಯಾಗಿ ಬಂದಿದ್ದ ಚಿನ್ನ ಸರ್ಕಾರ ನಿಗದಿ ಪಡಿಸಿದ ಪ್ರಮಾಣಕ್ಕಿಂತ ಹೆಚ್ಚಿದ್ದರೆ ಅದು ಸಕ್ರಮವೋ? ಅಕ್ರಮವೋ ಎನ್ನುವ ಪ್ರಶ್ನೆಯೂ ಈಗ ಎದ್ದಿದೆ. ಸದ್ಯ ಸರ್ಕಾರ ಚಿನ್ನದ ಮೇಲೆ ತೆರಿಗೆ ವಿಧಿಸಲು ಮುಂದಾಗುತ್ತಿದೆ ಎನ್ನುವ ವಿಚಾರ ಮಾತ್ರ ಪ್ರಕಟವಾಗಿದ್ದು, ಈ ಗೋಲ್ಡ್ ಅಮ್ನೆಸ್ಟಿ ಸ್ಕೀಂ ಯಾವ ರೀತಿ ಇರುತ್ತದೆ ಎನ್ನುವ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಸರ್ಕಾರ ಎಲ್ಲ ಮಾಹಿತಿಗಳನ್ನು ನೀಡುವ ಮೂಲಕ ಎದ್ದಿರುವ ಎಲ್ಲ ಗೊಂದಲಗಳಿಗೆ ತೆರೆ ಎಳೆಯುವ ಸಾಧ್ಯತೆಯಿದೆ.

Leave a Reply

Your email address will not be published. Required fields are marked *

error: Content is protected !!