ಮತ್ತಾವು ಸೇತುವೆ ನಿರ್ಮಾಣಕ್ಕೆ 2 ಕೋಟಿ ಮೀಸಲು- ಸುನೀಲ್ ಕುಮಾರ್

     ಉಡುಪಿ : ನಕ್ಸಲ್ ಬಾಧಿತ ಮತ್ತಾವು ನ ಹೊಳೆಗೆ ಸೇತುವೆ ನಿರ್ಮಿಸಲು 2 ಕೋಟಿ ರೂ ಗಳನ್ನು ಮೀಸಲಿಡಲಾಗಿದ್ದು, ಶೀಘ್ರದಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಕಾರ್ಕಳ ಶಾಸಕ ಸುನೀಲ್ ಕುಮಾರ್ ತಿಳಿಸಿದರು.

      ಅವರು ಭಾನುವಾರ,ಕಬ್ಬಿನಾಲೆಯ ಶ್ರೀ ಲಕ್ಷ್ಮಿ ನಾರಾಯಣ ದೇವಸ್ಥಾನ ಆವರಣದಲ್ಲಿ, ನಕ್ಸಲ್ ನಿಗ್ರಹ ದಳ ಕ್ಯಾಂಪ್ ಹೆಬ್ರಿ, ಪೊಲೀಸ್ ಠಾಣೆ ಹೆಬ್ರಿ, ಉಡುಪಿ ಜಿಲ್ಲಾ ಆರೋಗ್ಯ ಇಲಾಖೆ, ಮುದ್ರಾಡಿ ಗ್ರಾಮ ಪಂಚಾಯತ್, ಲಯನ್ಸ್ ಕ್ಲಬ್ ಹೆಬ್ರಿ ಸಿಟಿ, ವ್ಯವಸಾಯ ಸೇವಾ ಸಹಕಾರ ಸಂಘ ಹೆಬ್ರಿ-ವರಂಗ ಹಾಗೂ ವಿವಿಧ ಇಲಖೆಗಳು ಮತ್ತು ಸಂಘ ಸಂಸ್ಥೆಗಳ ನೆರವಿನೊಂದಿಗೆ, ನಕ್ಸಲ್ ಬಾಧಿತ ಗ್ರಾಮಗಳ ಗ್ರಾಮಸ್ಥರಿಗೆ ಹಮ್ಮಿಕೊಂಡಿದ್ದ , ತಜ್ಞ ವೈದ್ಯರುಗಳಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.  

   ನಕ್ಸಲ್ ಬಾಧಿತ ಮತ್ತಾವು ನಲ್ಲಿ ಹಲವು ವರ್ಷಗಳ ಬೇಡಿಕೆಯಾದ ಸೇತುವೆ ನಿರ್ಮಾಣಕ್ಕೆ ಈಗಾಗಲೇ 2 ಕೋಟಿ ರೂ ಗಳನ್ನು ಮೀಸಲಿಟ್ಟಿದ್ದು, ಅರಣ್ಯ ಇಲಾಖೆಯೊಂದಿಗಿನ ಕಾನೂನು ತೊಡಕಿನಿಂದ ಕಾಮಗಾರಿ ಆರಂಭಿಸುವಲ್ಲಿ ವಿಳಂಬವಾಗಿದ್ದು, ಶೀಘ್ರದಲ್ಲಿ ಅರಣ್ಯ ಇಲಾಖೆಯ ಅನುಮತಿ ದೊರೆಯುವ ನಿರೀಕ್ಷೆಯಿದ್ದು, ಅನುಮತಿ ದೊರೆತ ಕೂಡಲೇ ಕಾಮಗಾರಿ ಆರಂಭವಾಗಲಿದೆ, ಅಲ್ಲದೇ ಮೇಲ್ಮಠ ರಸ್ತೆ ಕಾಮಗಾರಿಗೆ 50 ಲಕ್ಷ ಅನುದಾನ ಇಡಲಾಗಿದ್ದು, ಜುಲೈ ತಿಂಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಆರಂಭವಾಗಲಿದೆ, ಸರಕಾರದ ಎಲ್ಲಾ ಇಲಾಖೆಗಳು ಜನಸ್ನೇಹಿಯಾದರೆ ಮಾತ್ರ ಜನಪರ ಆಡಳಿತ ಸಾದ್ಯವಾಗಲಿದೆ,  ಶಿಕ್ಷಣ, ಆರೋಗ್ಯ , ಮೂಲಭೂತ ಸೌಕರ್ಯಗಳು ಪ್ರತಿಯೊಬ್ಬ ನಾಗರೀಕರಿಗೂ ದೊರೆಯಬೇಕು ಎಂದು ಸುನೀಲ್ ಕುಮಾರ್, ಪೊಲೀಸ್ ಇಲಾಖೆವತಿಯಿಂದ ನಡೆಯುತ್ತಿರುವ ಈ ಕಾರ್ಯಕ್ರಮ ಮಾದರಿ ಎಂದು ಹೇಳಿದರು.

    ನಕ್ಸಲ್ ನಿಗ್ರಹ ಪಡೆಯ ಡಿವೈಎಸ್ಪಿ ಗಣೇಶ್ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.

       ಕಾರ್ಯಕ್ರಮದಲ್ಲಿ ಮುದ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಶಿಕಲಾ ಪೂಜಾರಿ, ತಾಲೂಕು ಪಂಚಾಯತ್ ಸದಸ್ಯ ಲಕ್ಷ್ಮಿ ದಯಾನಂದ, ಹೆಬ್ರಿ ತಹಸೀಲ್ದಾರ್ ಮಹೇಶ್ಚಂದ್ರ, ಕಾರ್ಕಳ ತಾಲೂಕು ಆರೋಗ್ಯಾಧಿಕಾರಿ ಡಾ. ಕೃಷ್ಣಾನಂದ, ಹೆಬ್ರಿ ಠಾಣಾಧಿಕಾರಿ ಮಹಾಬಲ ಶೆಟ್ಟಿ, ಹೆಬ್ರಿ ವೈದ್ಯಾಧಿಕಾರಿ ಡಾ. ನರಸಿಂಹ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!