ಜನಪ್ರತಿನಿಧಿ, ಸಾರ್ವಜನಿಕರಿಗೆ ಅಧಿಕಾರಿಗಳು ಗೌರವ ನೀಡಬೇಕು : ಜಿಲ್ಲಾಧಿಕಾರಿ
ಉಡುಪಿ : ನಗರಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಮತ್ತು ಶಾಸಕರು ನಗರಸಭೆ ಸದಸ್ಯರೊಂದಿಗೆ ನಗರದಲ್ಲಿರುವ ಹಲವಾರು ಸಮಸ್ಯೆಗಳ ಬಗ್ಗೆ ಇಂದು ಚರ್ಚೆ ನಡೆಸಿದರು .ಪ್ರಮುಖವಾಗಿ ನಗರದಲ್ಲಿರುವ ಬೀದಿ ದೀಪಗಳ ಸಮಸ್ಯೆ, ಒಳಚರಂಡಿ ಅವ್ಯವಸ್ಥೆ, ಕುಡಿಯುವ ನೀರಿನ ಮೂಲವೇ ಕೆಟ್ಟು ಹೋಗಿರುವ ಬಗ್ಗೆ ನಗರಸಭೆ ಸದಸ್ಯರು ಜಿಲ್ಲಾಧಿಕಾರಿಯಲ್ಲಿ ದೂರಿಕೊಂಡರು .
ಕೊಡವೂರು ವಾರ್ಡ್ ಒಂದರಲ್ಲಿ 600 ಬಾವಿಗಳು ಒಳಚರಂಡಿ ಅವ್ಯವಸ್ಥೆಯ ಮತ್ತು ಕಲ್ಸಂಕ ತೋಡಿನಿಂದ ಬರುವ ಕೊಳಚೆ ನೀರಿನಿಂದಾಗಿ ಕೆಟ್ಟು ಹೋಗಿದ್ದಾಗಿ ಅಲ್ಲಿನ ನಗರಸಭಾ ಸದಸ್ಯ ವಿಜಯ್ ಅವರು ಆರೋಪಿಸಿದರು .ಹಾಗೂ ಈ ಭಾಗದಲ್ಲಿ ವಿಪರೀತ ಪ್ಲಾಸ್ಟಿಕ್ ತ್ಯಾಜ್ಯದಿಂದಾಗಿ ಹತ್ತೊಂಬತ್ತು ಜನರು ಕ್ಯಾನ್ಸರ್ ಪೀಡಿತರಾಗಿದ್ದಾರೆ .ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಸಂತೋಷ್ ಜತ್ತನ್ನ ಮಾತನಾಡಿನಿಟ್ಟೂರು ಭಾಗದ 7೦ಕ್ಕು ಹೆಚ್ಚು ಬಾವಿ ನೀರುಗಳು ಕೊಳಚೆ ನೀರು ಹರಿದು ಹಾಳಾಗಿದ್ದು, ನಗರಸಭೆಯು ಬೆಳಿಗ್ಗೆ ಒಂಬತ್ತು ಗಂಟೆಗೆ ನೀರಿನ ಸರಬರಾಜು ಸಂಪರ್ಕವನ್ನು ಕಡಿತಗೊಳಿಸುತ್ತದೆ. ಇಲ್ಲಿನ ಜನರು ಮಳೆಗಾಲವಾದರೂ ನೀರಿಗೆ ಪಡುವ ಬವಣೆ ಹೇಳತೀರದು .ಕಿನ್ನಿಮೂಲ್ಕಿ ಮುಖ್ಯ ರಸ್ತೆಯಲ್ಲಿ ಡ್ರೈನೇಜ್ ನೀರಿನಿಂದ ಶಾಲೆ ಹೋಗುವ ಮಕ್ಕಳಿಗೆ ,ವಾಕಿಂಗ್ ಹೋಗುವವರಿಗೆ ತೊಂದರೆಯಾಗುತ್ತಿದೆ ಎಂದು ಇಲ್ಲಿನ ಸದಸ್ಯೆ ಅಮೃತಾ ಕೃಷ್ಣಮೂರ್ತಿ ದೂರಿದರು.
ಗಿರೀಶ ಅಂಚನ್ ಮಾತನಾಡಿ ನಗರಸಭೆಯ ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಗೌರವ ನೀಡುತ್ತಿಲ್ಲ ಸಾಮಾನ್ಯ ಜನರಿಗೆ ಗೌರವ ನೀಡುತ್ತಾರಾ ಎಂಬ ಪ್ರಶ್ನೆ ಇತ್ತರು .ಕೃಷ್ಣರಾವ್ ಕೊಡಂಚ ಮಾತನಾಡಿ ಸಾಮಾನ್ಯ ಜನತೆಗೆ ಮನೆ ಕಟ್ಟಲು ಆಗುತ್ತಿರುವ ಸಮಸ್ಯೆ ಬಗ್ಗೆ ವಿವರಿಸಿದರು . ಸಿಬ್ಬಂದಿ ಕೊರತೆಗೆ ನಗರಸಭೆಯೊಂದಿಗೆ ಸೇವೆ ನೀಡಲು ಕಂಪ್ಯೂಟರ್ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳನ್ನು ಕಳುಹಿಸಿಕೊಡುವುದಾಗಿ ಹೇಳಿದರು.
ಸುಂದರ್ ಕಲ್ಮಾಡಿ ಮಾತನಾಡಿ ಆದಿಉಡುಪಿ, ಮಲ್ಪೆ ರಸ್ತೆಯನ್ನು ಆದಷ್ಟು ಬೇಗ ಚತುಷ್ಪಥಗೊಳಿಸಿ ಸಾರ್ವಜನಿಕರಿಗೆ ಸಹಕಾರವಾಗುವಂತೆ ರಸ್ತೆಯನ್ನು ನಿರ್ಮಿಸಬೇಕಾಗಿ ಮನವಿ ಮಾಡಿದರು. ಕೈ ಮುಗಿದು ಬೇಡಿಕೊಂಡು ಮರಳಿನ ಸಮಸ್ಯೆ ಸರಿಪಡಿಸಿ ಜಿಲ್ಲೆಗೆ ಮರಳು ಸಿಗುವ ಹಾಗೆ ಮಾಡಿ ಎಂದು ಸದಸ್ಯ ಬಾಲಕೃಷ್ಣ ಶೆಟ್ಟಿ ಜಿಲ್ಲಾಧಿಕಾರಿಯಲ್ಲಿ ಬೇಡಿಕೊಂಡರು .
ಕರಾವಳಿ ಭಾಗದ ಮಂಗಳೂರು ಉತ್ತರ ಕರ್ನಾಟಕದಲ್ಲಿ ಯಥೇಚ್ಛ ಮರಳು ಸಿಗುತ್ತದೆ.ಆದರೆ ಉಡುಪಿ ಜನರಿಗೆ ಮನೆ , ಕಟ್ಟಡ ಕಟ್ಟಲು ಮರಳು ಸಿಗುತ್ತಿಲ್ಲ ಇದಕ್ಕೆ ಧ್ವನಿಗೂಡಿಸಿದ ರಮೇಶ್ ಕಾಂಚನ್ ಫಿಶ್ಮಿಲ್ ಸ್ಥಗಿತಗೊಳಿಸಿದ ಕಾರಣ ಮಲ್ಪೆಯಲ್ಲಿ ಮೀನುಗಾರಿಕೆ ನಿಂತಿದೆ ಆದಷ್ಟು ಬೇಗ ಸಮಸ್ಯೆಗಳನ್ನು ಪರಿಹರಿಸಿ ಎಂದು ಕೇಳಿಕೊಂಡರು .
ಶಾಸಕ ರಘುಪತಿ ಭಟ್ ಮಾತನಾಡಿ ನಗರಸಭೆ ಅಧಿಕಾರಿಗಳು ಇಲ್ಲಿನ ಹಣ ಉಳಿಸಲು ಯೋಚಿಸಿ ಸಾರ್ವಜನಿಕರಿಗೆ ಬೇಕಾಗುವಂತಹ ಮೂಲಭೂತ ಸೌಕರ್ಯಗಳನ್ನು ನೀಡುವಲ್ಲಿ ವಿಫಲವಾಗಿದ್ದಾರೆ .ಕಳೆದ ಬೇಸಿಗೆಯಲ್ಲಿ ಕೇವಲ ನಾಲ್ಕು ವಾರ್ಡ್ಗಳಿಗೆ ನೀರನ್ನು ಸಬರಾಜು ಮಾಡಿ ಉಳಿದ ಮೂವತ್ತೊಂದು ವಾರ್ಡ್ಗಳಿಗೆ ನೀರಿನ ಬವಣೆ ಇರುವಂತೆ ಮಾಡಿದ್ದಾರೆ. ಕುಡಿಯುವ ನೀರಿಗೆ ಕರೆದ ಟೆಂಡರ್ ನಿಯಮಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಜನರಿಗೆ ಬೇಕಾಗುವಂಥ ಮೂಲಭೂತ ಸೌಕರ್ಯ ನಗರಸಭೆ ನೀಡುವುದು ಬಿಟ್ಟು ಅತೀಯಾದ ನಿಯಮಗಳನ್ನು ಹೇರಿ ಸಾರ್ವಜನಿಕರು ಕಟ್ಟಿದ ತೆರಿಗೆ ಹಣಕ್ಕೆ ಪ್ರತಿಯಾಗಿ ನೀಡುವಂಥ ಮೂಲಭೂತ ಸೇವೆಯನ್ನೇ ಸಮರ್ಪಕವಾಗಿ ನೀಡದೇ ಇರುವುದಕ್ಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.
ಸದಸ್ಯರೆಲ್ಲರ ಸಮಸ್ಯೆಗಳು ಆಲಿಸಿದ ಜಿಲ್ಲಾಧಿಕಾರಿ ಜಿ. ಜಗದೀಶ್ ಮಾತನಾಡಿ ನಗರ ನಗರಾಭಿವೃದ್ಧಿ ಇಲಾಖೆಯಲ್ಲಿ ನನಗೆ ತುಂಬಾ ಅನುಭವಿದೆ. ನಗರಸಭೆ ಅಧಿಕಾರಿಗಳು ಬೆಳಿಗ್ಗೆ ಆರು ಗಂಟೆಗೆ ತಮ್ಮ ಕರ್ತವ್ಯವನ್ನು ಪ್ರಾರಂಭಿಸಿ ನಗರವನ್ನು ಸ್ವಚ್ಛವಾಗಿ ಇಡುವಲ್ಲಿ ಕ್ರಮ ಕೈಗೊಳ್ಳಬೇಕು .ಸ್ವಚ್ಛತೆ ಬಗ್ಗೆ ಅತಿಯಾಗಿ ಮಾನವ ಬಳಕೆಯನ್ನು ಮಾಡದೇ ಯಂತ್ರದ ಮೂಲಕ ಮಾಡಬೇಕು ಇದಕ್ಕಾಗಿ ಬೇಕಾಗುವ ಯಂತ್ರಗಳನ್ನು ಖರೀದಿಸುವ ಬಗ್ಗೆಯೂ ಚಿಂತನೆ ಮಾಡಲಾಗುವುದು .ಚುನಾಯಿತ ಪ್ರತಿನಿಧಿಗಳ ಸಲಹೆ ಸೂಚನೆಗಳನ್ನು ಗಂಭೀರವಾಗಿ ತೆಗೆದುಕೊಂಡು ಕಾನೂನಾತ್ಮಕ ಸಮಸ್ಯೆ ಇಲ್ಲದಿದ್ದರೆ ಶೀಘ್ರವೇ ಮಾಡಿಕೊಡಬೇಕೆಂದು ಈ ಸಂದರ್ಭ ಹೇಳಿದರು .
ಜಿಲ್ಲೆಯಲ್ಲಿ ಕಳೆದ ಹಲವಾರು ಸಮಯಗಳಲ್ಲಿರುವ ಮರಳು ಸಮಸ್ಯೆಯನ್ನು ಶೀಘ್ರ ಪರಿಹಾರ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದ್ದೇವೆ. ತಕ್ಷಣ ಜನರಿಗೆ ಬೇಕಾದಷ್ಟು ಮರಳು ಸಿಗುವಂತೆ ಮಾಡಲಾಗುವುದು ಎಂದು ಈ ಸಂದರ್ಭ ಆಶ್ವಾಸನೆ ನೀಡಿದರು .