ರಾಮಚಂದ್ರ ಶರ್ಮರ ಕವಿತೆ ಮತ್ತು ಸಜ್ಜನ ರಾಜಕಾರಣಿ ಗೋಪಾಲ ಭಂಡಾರಿ
ಗೋಪಾಲ ಭಂಡಾರಿ ಹೃದಯಾಘಾತದಿಂದ ಅಸುನೀಗಿದ್ದಾರೆ. ಅವರೊಂದಿಗೆ ಬೆರೆತ ದಿನಗಳು ನೆನಪಾದವು. ಅದು ಬಾಜಪ ಅಧಿಕಾರದಲ್ಲಿದ್ದ ಕಾಲ ನಾನು ಕೋಟ ಶ್ರೀನಿವಾಸ ಪೂಜಾರಿಯವರ ರೂಮಿನಲ್ಲಿದ್ದೆ.ಆಗ ಸುನಿಲ್ ಕುಮಾರ್ ಕಾರ್ಕಳದಲ್ಲಿ ಸೋತಿದ್ದರು. ಅವರ ಮುಂದೆ ಗೆದ್ದು ಬಂದಿದ್ದ ಗೋಪಾಲ ಭಂಡಾರಿ ಮೀಟಿಂಗಿಗೆ ಶಾಸಕರ ಭವನಕ್ಕೆ ಬಂದಾಗ ಆಗಾಗ ಎದುರಾಗುತ್ತಿದ್ದರು. ಶಾಸಕರ ಭವನದ ಲೈಬ್ರೇರಿಯಲ್ಲಿ ಸಿಗುತ್ತಿದ್ದರು. ನಾನಂತೂ ಹೆಚ್ಚು ಕಾಲ ಕಳೆಯುತ್ತಿದ್ದ ಜಾಗವದು. ಒಮ್ಮೆ ಶಂಕರ್ ಲಿಂಗೇ ಗೌಡರು ಮತ್ತು ಗೋಪಾಲ ಭಂಡಾರಿ ಕುಳಿತು ಅದೇನೋ ಹರಟುತಿದ್ದರು. ಶಾಸಕರ ಭವನದ ಲೈಬ್ರೇರಿಯ ಹೊರಗೊಂದು ಸೋಫಾದಲ್ಲಿ ಕುಳಿತು. ಮುಖದ ತುಂಬಾ ಪೌಡರು ಬಳಿದುಕೊಂಡು ಒಂದು ಬೊಟ್ಟು ಹಾಕಿಕೊಂಡು ಶಂಕರ್ ಲಿಂಗೇ ಗೌಡರು ಕುಳಿತಿದ್ದರು. ಆಗ ಶಂಕರ್ ಲಿಂಗೇ ಗೌಡರು ಯಡಿಯೂರಪ್ಪ ವಿರುದ್ದ ಸಿಡಿಮಿಡಿ ಗುಟ್ಟುತ್ತಿದ್ದ ಕಾಲ. ಅವರಿಬ್ಬರ ರಾಜಕೀಯದ ಚರ್ಚೆಯ ನಡುವೆ ಹಿರಿಯ ಪತ್ರಕರ್ತ ಜಯಶೀಲರಾಯರು ಬಂದರು, ಜೆ.ಹೆಚ್ ಪಟೇಲರ ಚಾರ್ಮಿನ ಬಗ್ಗೆ ಮಾತುಗಳು ಹಾದವು, ಸಂಜೆ ಜಯಶೀಲರಾಯರಿಗೆ ಸನ್ಮಾನ ಎನ್ನುವ ಮಾತು ಬಂತು. ಆಗ ಬಾಯಿ ಹಾಕಿದೆ ನಾನು ’ಎಲ್ಲಿ ಸಾರ್ ಜಯಶೀಲ ರಾಯರಿಗೆ ಸನ್ಮಾನ? ಎಂದು.. ಮತ್ತೆ ಮಾತು ಕತೆ ಹಾಗೆಯೇ ಮುಂದುವರಿಯುತ್ತ ಭಂಡಾರಿಯವರಿಗೆ ನಾನೂ ಕರಾವಳಿಯವ ಎಂದು ತಿಳಿತ್ತಲೇ ನಾವು ಆತ್ಮೀಯತೆಯಲ್ಲಿ ಮಾತಿಗಿಳಿದೆವು. ಅದಕ್ಕೂ ಮೊದಲು ಭಂಡಾರಿಯವರನ್ನ ಅದೇ ಲೈಬ್ರೇರಿಯ ಮೌನದಲ್ಲಿ ನೋಡುತ್ತಲೇ ಇದ್ದೆನಾದರೂ ಮಾತಾಡಿ ಪರಿಚಯ ಇರಲಿಲ್ಲ.
ರೈಲ್ವೆಯ ಹಾರ್ನಿನಂತೆ ಶಂಕರ ಲಿಂಗೇ ಗೌಡರ ಮೊಬೈಲ್ ಕೂಗಿತು. ಗೌಡರು ಎದ್ದು ಹೋದರು. ನಾವಿಬ್ಬರು ಮಾತಾಡುತ್ತಲೇ ಹೋದೆವು. ಈ ಮನುಷ್ಯ ಯಾವ ಪರಿ ಓದಿದ್ದಾರಲ್ಲಾ? ಅಂತನ್ನಿಸಿತ್ತು ಅವತ್ತು. ಗೋಪಾಲ ಭಂಡಾರಿ ತಾನೂ ಕವಿತೆಗಳನ್ನ ಬರೆಯುತ್ತಿರುವುದರ ಬಗ್ಗೆ ಹೇಳಿದರು. ರಾಮಚಂದ್ರ ಶರ್ಮರ ಕಾವ್ಯ, ಅಡಿಗರ ಕಾವ್ಯದ ಬಗ್ಗೆ ಮಾತಾಡಿದರು. ಶರ್ಮರ ಕಾವ್ಯದ ಕುರಿತು ಯಾರದರು ಮಾತಾಡಿಯಾರು ಎಂದರೆ ಅವರು ಸಾಹಿತ್ಯದ ಆಳ ಅಧ್ಯಯನದಲ್ಲಿದ್ದಾರೆ ಅಂತಲೇ ಅರ್ಥವಲ್ಲವೇ? ಈ ಗೋಪಾಲ ಭಂಡಾರಿ ಅಷ್ಟು ಓದುತ್ತಿದ್ದರು. ಆದರೆ ಅದು ಎಲ್ಲಿಯೂ ವ್ಯಕ್ತವಾದದ್ದಿಲ್ಲ. ಅದರ ನಂತರ ಭಂಡಾರಿ ಆಗಾಗ ಸಿಗುತ್ತಿದ್ದರು, ಸಿಕ್ಕಾಗಲೆಲ್ಲ ನಗು, ಮಾತು, “ಏನ್ ಸಾರ್ ಸರ್ಕಾರ ಬೀಳೋತ್ತಾ? ರೆಡ್ಡಿಗಳು ಕಾಂಗ್ರೇಸಿಗೆ ಬರ್ತಾರಾ? ಬಂದ್ರೆ ನಮ್ಮಲ್ಲಿ ನೀವೆ ಮಂತ್ರಿ ಎನ್ನುತ್ತಿದ್ದೆ. ಭಂಡಾರಿ ಸುಮ್ಮನೆ ನಕ್ಕು ಬಿಡುತ್ತಿದ್ದರು. ಅದು ರಾಜಕೀಯ ಡೊಂಬರಾಟದ ಕಾಲ. ಅಜಾತಶತ್ರುವಿನಂತಿದ್ದ, ಅತ್ಯಂತ ಮೃಧು ಮಾತಿನ ಗೋಪಾಲ ಭಂಡಾರಿಗೆ ರಾಜಕೀಯ ವೈರಿಗಳಿರಲಿಲ್ಲ. ಅವರನ್ನ ದ್ವೇಶಿಸಲು ರಾಜಕೀಯದ ಹೊರತು ಬೇರೆ ಕಾರಣವೂ ಸಿಗುವುದಿಲ್ಲ..
ಮತ್ತೆ ಆಗಾಗ ನಿಸರ್ಗ ಹೋಟೇಲಿನಲ್ಲಿ ಭಂಡಾರಿ ಸಿಗುತ್ತಿದ್ದರು. ಟೀ ಬಿಲ್ ಕೊಡುತ್ತಿದ್ದರು. ಹೆಚ್ಚು ಮಾತಿರುತ್ತಿರಲಿಲ್ಲ. ಸಣ್ಣದೊಂದು ನಗೆ. ಒಮ್ಮೆ ಕೋಟದ ಕಾರಂತ ಥೀಮ್ ಪಾರ್ಕಿನಲ್ಲಿ ಕವನ ಸಂಕಲ ಒಂದರ ಬಿಡುಗಡೆಗೆ ಬಂದಿದ್ದ ಭಂಡಾರಿ ಮಾತಿಗೆ ಸಿಕ್ಕರು. ಶಾಸಕರ ಭವನದ ನೆನಪು ಮಾಡಿ ಮಾತಾಡಿದೆ. ’ಓ ಗಿಳಿಯಾರ್ ಇಲ್ಲೆ ಅಲ್ವಾ ನಿಮ್ಮ ಊರು ಎಂದಿದ್ದರು. ನಾನವರಲ್ಲಿ ಹೇಳಿದ್ದೆ ’ಸರ್ ಕೋಟ ಇದೆಯಲ್ಲಾ? ಅದು ನನ್ನ ಊರು ಗಿಳಿಯಾರಲ್ಲೇ ಬರೋದು’ ಎಂದು! ಭಂಡಾರಿ ಹುಬ್ಬೇರಿಸಿದ್ದರು! ’ಹೌದು ಸಾರ್, ಕೋಟ ಒಂದು ಪೇಟೆ ಮಾತ್ರ, ಕೋಟ ಪೊಲೀಸ್ ಸ್ಟೇಶನ್ನು, ಅಮೃತ್ತೇಶ್ವರಿ ದೇವಸ್ಥಾನ, ಹಿರೇ ಮಹಲಿಂಗೇಶ್ವರ ದೇವಸ್ಥಾನ ಇದೆಲ್ಲಾನು ಗಿಳಿಯಾರು ಗ್ರಾಮಾನೆ’ ಎಂದಿದ್ದೆ. ಅದು ನೆನಪಿರಬೇಕು ಅವರಿಗೆ.
ಗೋಪಾಲ ಭಂಡಾರಿಯವರದ್ದು ನಲವತ್ತೈದು ವರ್ಷದ ಸುಧೀರ್ಘ ರಾಜಕೀಯ ಅನುಭವ, ಎಂದೂ ಹಣಕ್ಕೆ ಕೈ ಒಡ್ಡಿದವರಲ್ಲ, ಇಂದಿಗೂ ತೀರಿಸಲಾಗದ ಸಾಲವಿರಬೇಕು! ಯಾರನ್ನೂ ದ್ವೇಶಿಸಿದವರಲ್ಲ. ಸ್ವಾಮಿನಿಷ್ಠೆಯೆಂದರೆ ಗೋಪಾಲ ಭಂಡಾರಿ! ಅವರು ದೇವರ ಹೆಸರು ಹೇಳುತ್ತಿದ್ದರೋ ಇಲ್ಲವೋ ಆದರೆ ವೀರಪ್ಪ ಮೊಯ್ಲಿ ಹೆಸರು ಹೇಳದೇ ಇರಲಿಕ್ಕಿಲ್ಲ. ಆ ಪರಿ ವೀರಪ್ಪ ಮೊಯ್ಲಿಯ ಬಂಟ. ರಾಜಕೀಯ ಜೀವನದಲ್ಲಿ ಗೆಲುವಿಗಿಂತಲೂ ಸೋಲನ್ನೇ ಹೆಚ್ಚು ನೋಡಿದ ಭಂಡಾರಿ ಎಂದೂ ಕುಸಿದು ಕುಳಿತವರಲ್ಲ. ಹೋರಾಟದ ಮನೊಭಾವನೆ ಅವರಲ್ಲಿ ಬತ್ತಿ ಹೋಗಿರಲಿಲ್ಲ. ವೈರಿಯನ್ನೂ ಕಟುವಾಗಿ ಟೀಕಿ ಮಾಡಿದವರಲ್ಲ, ಪ್ರತೀ ಚುನಾವಣೆಗೂ ಅವರ ಆಸ್ತಿ ವಿವರ ಕಮ್ಮಿಯಾಗುತ್ತಲೇ ಹೋಗಿ ಸಾಲದ ಲೆಕ್ಕವೇ ಹೆಚ್ಚುತ್ತಾ ಹೋಗುತ್ತಿತ್ತು. ಭವಿಷ್ಯದಲ್ಲಿ ಗೋಪಾಲ ಭಂಡಾರಿಯಂತ ಒಬ್ಬ ಸ್ವಾಮಿನಿಷ್ಠ, ಸೌಜ್ಯನ್ಯ ಸ್ವಭಾವದ, ಕವಿಮನಸಿನ ರಾಜಕಾರಣಿಯನ್ನ ನೋಡುವುದು ಕಷ್ಟ. ಭಂಡಾರಿ ಐದಾರು ವರ್ಷದ ಹಿಂದೆಯೇ ಹೃದಯ ಚಿಕಿತ್ಸೆಗೆ ಒಳಗಾಗಿದ್ದಾರೆ ಎನ್ನುವುದನ್ನ ಕೇಳಿದೆ. ವಿಧಿ ಲೆಕ್ಕ ಚುಕ್ತಾ ಮಾಡಿದ. ಹೋಗಿ ಬನ್ನಿ ಭಂಡಾರಿ ಸರ್ ನಿಮ್ಮ ನೆನಪು ಚಿರವಾಗಿದೆ
ಗೋಪಾಲ ಭಂಡಾರಿಯವರ ಸಂಕ್ಷಿಪ್ತ ಪರಿಚಯ
(ಗೇಣಿದಾರ ಕುಟುಂಬದ ದಿ.ನಂದ್ಯಪ್ಪ ಭಂಡಾರಿ-ದಿ.ಗಿರಿಜಮ್ಮ ಭಂಡಾರಿ ದಂಪತಿಯ ಪುತ್ರ ಗೋಪಾಲ ಭಂಡಾರಿ ಅವರು ಹೆಬ್ರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾಭ್ಯಾಸ ಮುಗಿಸಿ ತನ್ನ 19ನೇ ವಯಸ್ಸಿನಲ್ಲಿ ಭೂಮಸೂದೆ ಕಾಯ್ದೆಯಡಿ ಗೇಣಿದಾರ ಕುಟುಂಬದ ಪರ ಹೋರಾಟಕ್ಕೆ ಧುಮುಕುವ ಮೂಲಕ ರಾಜಕೀಯ ಪ್ರವೇಶ ಮಾಡಿದರು. 1978ರಲ್ಲಿ ಭೂನ್ಯಾಯ ಮಂಡಳಿಯ ಕಿರಿಯ ಸದಸ್ಯರಾಗಿ ಆಯ್ಕೆಗೊಂಡು ಸತತ 12 ವರ್ಷಗಳ ಕಾಲ ಭೂರಹಿತರ ಪರವಾಗಿ ನಿಂತು ಸಮಾಜ ಸೇವೆ ಮಾಡಿದರು. ಮುಂದೆ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ಮಾಡಿದರು. ಬೈಲೂರು ಜಿಲ್ಲಾ ಪರಿಷತ್ ಸದಸ್ಯರಾಗಿ ಸತತ ಎರಡು ಬಾರಿ ಆಯ್ಕೆಯಾದರು. ಕಾರ್ಕಳ ತಾಲೂಕು ಬೋರ್ಡ್ ಅಧ್ಯಕ್ಷರಾಗಿ ಆಯ್ಕೆಯಾದರು. ಮುಂದೆ ಜಿಲ್ಲಾ ಪರಿಷತ್ ಯೋಜನಾ ಸಮಿತಿಯ ಅಧ್ಯಕ್ಷ, ಜಿಲ್ಲಾ ಪರಿಷತ್ತಿನ ಕೃಷಿ ಮತ್ತು ಕೈಗಾರಿಕಾ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಸಂಪೂರ್ಣ ಸಾಕ್ಷರತಾ ಆಂದೋಲನದ ಅಧ್ಯಕ್ಷರಾಗಿ ಕಾರ್ಕಳ ವಿಧಾನಸಭಾ ಕ್ಷೇತ್ರವನ್ನು ರಾಜ್ಯದಲ್ಲಿ ಪ್ರಥಮ ಸ್ಥಾನಿಯಾಗಿ ರೂಪಿಸಿದರು. ಡಾ.ಎಂ. ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾದ ಬಳಿಕ 1999ರಲ್ಲಿ ಕಾರ್ಕಳದಿಂದ ಸ್ಪರ್ಧಿಸುವ ಅವಕಾಶವನ್ನು ಗೋಪಾಲ ಭಂಡಾರಿಗೆ ಬಿಟ್ಟುಕೊಟ್ಟರು. ಹೀಗೆ ಭಂಡಾರಿ ಅವರು ಪ್ರಥಮ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. 2004ರಲ್ಲಿ ಬಿಜೆಪಿಯ ಎದುರು ಸೋಲು ಕಂಡರು. 2008ರಲ್ಲಿ ಮತ್ತು ಕಾರ್ಕಳದ ಶಾಸಕರಾಗಿ ಪುನರಾಯ್ಕೆಗೊಂಡ ಭಂಡಾರಿ 2013ರಲ್ಲಿ ಪರಾಭವಗೊಂಡರು. ಈಗ ಮತ್ತೆ 2018ರಲ್ಲಿ ಮತ್ತೆ ಸೋಲನುಭವಿಸಿದ್ದರು.)
-ವಸಂತ್ ಗಿಳಿಯಾರ್