ರಾಜೀವಗಾಂಧಿ ಹತ್ಯೆಯ ಜೀವಾವಧಿ ಶಿಕ್ಷೆಯಲ್ಲಿರುವ ನಳಿನಿಗೆ 30 ದಿನಗಳ ಪೆರೋಲ್‌ನಲ್ಲಿ ಬಿಡುಗಡೆ

ನವದೆಹಲಿ: ಮಾಜಿ ಪ್ರಧಾನಿ ರಾಜೀವಗಾಂಧಿ ಅವರ ಹತ್ಯೆ ಪ್ರಕರಣದಲ್ಲಿ ವೆಲ್ಲೂರು ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ನಳಿನಿ ಶ್ರೀಹರನ್‌ಗೆ ಮದ್ರಾಸ್‌ ಹೈಕೋರ್ಟ್‌ 30 ದಿನಗಳ ಪೆರೋಲ್‌ ಮಂಜೂರು ಮಾಡಿದೆ.
ಜುಲೈ 5 ರಂದು ಪರೋಲ್‌ ಅರ್ಜಿಯನ್ನು ಪುರಸ್ಕರಿಸಿದ ಕೋರ್ಟ್‌ 1 ತಿಂಗಳ ಷರತ್ತು ಬದ್ಧ ಪರೋಲ್‌ಗೆ ಅನುಮತಿ ನೀಡಿದೆ. ಪೆರೋಲ್ಗಾಗಿ ನಳಿನಿಯೇ ವಾದ ಮಂಡಿಸಿದಳು. ಆರು ತಿಂಗಳ ಅವಧಿ ಬಿಡುಗಡೆ ಕೋರಿ ನಳಿನಿ ಮನವಿ ಮಾಡಿದ್ದಳು. ‘ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ತಮ್ಮನ್ನು ತಪ್ಪಾಗಿ ಶಿಕ್ಷೆಗೆ ಗುರಿಯಾಗಿಸಲಾಗಿದೆ. ತಾಯಿಯಾಗಿ ನನ್ನ ಜವಾಬ್ದಾರಿಯನ್ನು ಪೂರೈಸಬೇಕಿದೆ. ನನ್ನ ಮಗಳ ಮದುವೆ ಸಲುವಾಗಿ ನನ್ನ ಕುಟುಂಬವನ್ನು ಭೇಟಿಯಾಗಬೇಕಿದೆ, ಅಲ್ಲದೆ ದುಡ್ಡಿನ ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ಅದಕ್ಕೆ 6 ತಿಂಗಳ ಪೆರೋಲ್‌ ನೀಡಿ’ ಎಂದು ಭಾವನಾತ್ಮಕವಾಗಿ ವಾದ ಮಂಡಿಸಿದಳು.
ನಳಿನಿಗೆ ನೀಡುವ ಭದ್ರತಾ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಬೇಕು ಎಂದು ಕೋರ್ಟ್‌ ನಿರ್ದೇಶಿಸಿದೆ. 28 ವರ್ಷಗಳಿಂದ ಜೈಲುವಾಸ ಅನುಭವಿಸುತ್ತಿರುವ ನಳಿನಿ ಕಳೆದ ವರ್ಷ ಆಕೆ ತಂದೆ ಅಂತ್ಯಸಂಸ್ಕಾರಕ್ಕೆಂದು ಒಂದು ದಿನದ ಮಟ್ಟಿಗೆ ಪೆರೋಲ್ ಪಡೆದಿದ್ದಳು. ನಳಿನಿ ಜೊತೆಯಲ್ಲಿ ಆಕೆಯ ಗಂಡ ಮುರುಗನ್ ಕೂಡ ಅದೇ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಜೈಲಿನಲ್ಲಿಯೇ ಜನಿಸಿದ್ದ ನಳಿನ ಮಗಳು ಹರಿತ್ರಾ ಸದ್ಯ ಬ್ರಿಟನ್‌ನಲ್ಲಿದ್ದಾರೆ.
ಅತ್ಯಂತ ಹೆಚ್ಚು ದಿನಗಳ ಕಾಲ ಸೆರೆವಾಸ ಅನುಭವಿಸುತ್ತಿರುವ ದೇಶದಲ್ಲಿನ ಏಕೈಕ ಮಹಿಳೆ ನಳಿನಿ. ಮಗಳ ಮದುವೆ ಮಾತುಕತೆ ನಡೆದ ಸಂದರ್ಭದಲ್ಲಿ ತನ್ನನ್ನು ಚೆನ್ನೈ ಜೈಲಿಗೆ ಸ್ಥಳಾಂತರಿಸುವಂತೆ ಕೋರಿ ನಳಿನಿ ಉಪವಾಸ ಸತ್ಯಾಗ್ರಹ ನಡೆಸಿದ್ದಳು. ಆದರೆ, ಆಕೆಯ ಮನವಿಯನ್ನು ಅಧಿಕಾರಿಗಳು ನಿರಾಕರಿಸಿದ್ದರು.

Leave a Reply

Your email address will not be published. Required fields are marked *

error: Content is protected !!