ಹಸಿರು ಕೃಷಿ ಕ್ರಾಂತಿಯ ಧರ್ಮಗುರುಗಳು
ಉಡುಪಿ – ದಕ್ಷಿಣ ಕನ್ನಡ ಜಿಲ್ಲೆಯ ಕ್ರೈಸ್ತರ ದೇವಾಲಯಗಳ ಆವರಣಕ್ಕೆ ಪ್ರವೇಶ ಪಡೆದುಕೊಂಡರೆ ಕಾಣಸಿಗುವುದು ಭಕ್ತಾದಿಗಳಿಗೆ ಪ್ರಾರ್ಥನೆ ಸಲ್ಲಿಸಲು ದೊಡ್ಡದಾದ ಇಗರ್ಜಿ, ಧರ್ಮಗುರುವಿನ ನಿವಾಸ, ಸಭಾಭವನ, ಸಂತರ ಪ್ರತಿಮೆಗಳು, ಪ್ರಾರ್ಥನೆಯಲ್ಲಿ ಮಗ್ನರಾಗಿರುವ ಭಕ್ತರು, ಚಿಕ್ಕದಾದ ಗಾರ್ಡನ್ ಮತ್ತು ಕೆಲವೊಂದು ಕಡೆ ಶಾಲಾ ಕಾಲೇಜುಗಳು ಮಾತ್ರ. ಆದರೆ ಮಂಗಳೂರು ಧರ್ಮಪ್ರಾಂತ್ಯದ ಬಂಟ್ವಾಳ ವಲಯದ ಬೊರಿಮಾರ್ ದೇವಾಲಯದ ಆವರಣಕ್ಕೆ ಕಾಲಿಟ್ಟರೆ, ಭಕ್ತರ ನಂಬಿಕೆಯ ಇಗರ್ಜಿ ಯೊಂದಿಗೆ ಸುತ್ತಮುತ್ತಲೂ ಹಸಿರು ತುಂಬಿದ ಕೃಷಿ.
ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ಬಂಟ್ವಾಳ ವಲಯದ ಶತಮಾನೋತ್ತರ ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಬೊರಿಮಾರ್ ಚರ್ಚ್ ನಲ್ಲಿ ಕೃಷಿ ಕ್ರಾಂತಿಯೇ ಉಂಟಾಗಿದೆ. ದೇವಾಲಯದ ಆವರಣದ ಮೆಟ್ಟಿಲು ಹತ್ತಿದ ಕೂಡಲೇ ಕಾಣಸಿಗುವುದು ಸುತ್ತಲೆಲ್ಲಾ ಹಸಿರು ತುಂಬಿರುವಂತಹ ಕೃಷಿ ಕಾರ್ಯ. ಕೃಷಿಯ ನಿಜವಾದ ಖುಷಿ ಏನೆಂಬುದನ್ನು ಕೃಷಿ ಕ್ರಾಂತಿಯ ಮೂಲಕ ಜನರಿಗೆ ತೋರಿಸಿಕೊಟ್ಟವರು ದೇವಾಲಯದ ಪ್ರಧಾನ ಧರ್ಮಗುರು ವಂದನೀಯ ಫಾ. ಗ್ರೆಗರಿ ಪಿರೇರಾ.
ಶತಮಾನೋತ್ತರ ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಬಂಟ್ವಾಳ ತಾಲೂಕಿನ ಸೂರಿಕುಮೇರು ಸಮೀಪದ ಬೊರಿಮಾರ್ ಸಂತ ಜೋಸೆಫರ ದೇವಾಲಯದ ಜಮೀನಿನಲ್ಲಿ ಹಣ್ಣು, ಗೆಡ್ಡೆ, ಸೊಪ್ಪು ಸಹಿತ ತೋಟಗಾರಿ ಕೃಷಿಯನ್ನು ನಡೆಸುವ ಮೂಲಕ ಸುತ್ತಮುತ್ತಲಿನವರು ಹೆಮ್ಮೆ ಪಡುವಂತಾಗಿದೆ.
ಬೋರಿಮಾರ್ ದೇವಾಲಯಕ್ಕೆ ಸಂಬಂಧಿಸಿದಂತೆ 4 ಎಕರೆ ಜಮೀನಿದೆ. 2018ರ ಜೂ.3 ರಂದು ಈ ದೇವಾಲಯಕ್ಕೆ ಹೊಸ ಧರ್ಮಗುರುಗಳಾಗಿ ಅಧಿಕಾರ ಸ್ವೀಕರಿಸಿದ ಫಾ. ಗ್ರೆಗರಿ ಪಿರೇರಾ, ದೇವಾಲಯಕ್ಕೆ ಸಂಬಂಧಿಸಿದ ಜಮೀನಿನಲ್ಲಿ ತರಗೆಲೆಗಳು ಮತ್ತು ರಬ್ಬರ್ ಗಿಡಗಳ ಬೆಳೆದಿದ್ದನ್ನು ಕಂಡು, ಕೃಷಿ ಬೆಳೆಸುವ ಹೊಸ ಕನಸನ್ನು ಕಂಡುಕೊಂಡರು. ತನ್ನ ಕನಸಿನ ಕೃಷಿ ಕ್ರಾಂತಿಗಾಗಿ ಕೆಲವೊಂದು ಮರಗಳನ್ನು ಕಡಿಯಬೇಕಾದ ಪರಿಸ್ಥಿತಿ ಬಂದರೂ, ಧೃತಿಗೆಡದೆ ಕೃಷಿಯ ಮೇಲಿನ ಪ್ರೀತಿಯಿಂದ ತನ್ನ ಕೆಲಸವನ್ನು ಆರಂಭಿಸಿದರು. ಪಪ್ಪಾಯಿ, ನುಗ್ಗೆ, ಅರಿವೆ ಸೊಪ್ಪು, ಗೆಣಸು, ಕುಂಬಳ ಕಾಯಿ, ಗೇರು ಈಗ ಇಲ್ಲಿ ಪ್ರಜ್ವಲಿಸುತ್ತಿದೆ. ತಾನು ಆರಂಭಿಸಿದ ಕೃಷಿ ಉತ್ತಮವಾಗಿ ಫಸಲು ನೀಡುವುದನ್ನು ಗಮನಿಸಿ, ದೇವಾಲಯದ ಬಹುತೇಕ ಜಮೀನಿನಲ್ಲಿ ತನ್ನ ಕೃಷಿ ಪ್ರೀತಿಯನ್ನು ತೋರ್ಪಡಿಸಿದರು. ಜಮೀನಿನಲ್ಲಿ ಇದ್ದ ಎಲ್ಲಾ ರಬ್ಬರ್ ಗಿಡಗಳನ್ನು ತೆಗೆಸಿ, ಪಪ್ಪಾಯಿ ಕೃಷಿ ಆರಂಭಿಸಿದರು. ಜೊತೆಗೆ ಸುವರ್ಣಗೆಡ್ಡೆ, ನುಗ್ಗೆ, ಅರಿವೆ ಸೊಪ್ಪು, ಕುಂಬಳಕಾಯಿ ಬಳ್ಳಿ, ಗೆಣಸಿನ ಬಳ್ಳಿ ಹೀಗೆ ಒಂದರ ಮೇಲೊಂದರಂತೆ ದೇವಾಲಯದ ಜಮೀನಿನಲ್ಲಿ ಚಿಗುರೊಡೆಯುತ್ತ ಬಂತು. ಇದೀಗ ಚರ್ಚ್ ಜಮೀನಿನಲ್ಲಿ 100 ಕ್ಕೂ ಅಧಿಕ ಪಪ್ಪಾಯಿ ಗಿಡಗಳು, 120 ನುಗ್ಗೆ ಮರ, ಸುಮಾರು 1 ಸಾವಿರ ಸುವರ್ಣ ಗೆಡ್ಡೆಯ ಗಿಡಗಳು ಬೊರಿಮಾರ್ ದೇವಾಲಯದ ಜಮೀನಿನಲ್ಲಿ ಕೃಷಿ ಪ್ರಿಯರನ್ನು ಆಕರ್ಷಿಸುತ್ತಿವೆ. ಪ್ರಸ್ತುತ ವರ್ಷ ಮತ್ತೆ ಹೊಸದಾಗಿ 150ಕ್ಕೂ ಗೇರು ಗಿಡಗಳನ್ನು ನೆಡಲಾಗಿದ್ದು, ತನ್ನ ಕೃಷಿ ಪ್ರೀತಿಯನ್ನು ಮುಂದುವರಿಸುವ ಇರಾದೆಯನ್ನು ಧರ್ಮಗುರುಗಳು ವ್ಯಕ್ತಪಡಿಸಿದ್ದಾರೆ.
ಉಡುಪಿ ಮತ್ತು ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ಧರ್ಮಗುರುಗಳು ವಿಶೇಷವಾಗಿ ಬೋಧನೆಯಲ್ಲಿ ಮತ್ತು ಶಿಕ್ಷಣ ತಜ್ಞರಾಗಿದ್ದಾರೆ. ಆದರೆ ಬೋರಿಮಾರ್ ದೇವಾಲಯದ ಧರ್ಮಗುರು ಫಾ. ಗ್ರೆಗರಿ ಪಿರೇರಾ ತನ್ನ ಬೋಧನೆಯ ಜೊತೆಗೆ, ಕೃಷಿಯ ಮೇಲೆ ಪ್ರೀತಿಯನ್ನು ತೋರಿಸಿದ್ದಾರೆ. ಇವರ ಕೃಷಿ ಪ್ರೀತಿಗೆ ಇಲ್ಲಿಯ ಭಕ್ತಾದಿಗಳು ಸಂಪೂರ್ಣ ಬೆಂಬಲವನ್ನು ಸೂಚಿಸುತ್ತಾರೆ. ಮಾತ್ರವಲ್ಲದೆ ತಮಗೆ ಸಾಧ್ಯವಾದರೆ, ತಾವು ಇಲ್ಲಿ ಕೃಷಿ ಮಾಡಲು ಸಿದ್ಧರಾಗಲು ಪಣತೊಟ್ಟಿದ್ದಾರೆ. ದೇವಾಲಯದ ಜಮೀನಿನಲ್ಲಿ ಬಹುತೇಕ ಕಡೆ ಪಪ್ಪಾಯಿ ಗಿಡಗಳು ಕಾಣಸಿಗುತ್ತವೆ. ಇದನ್ನೆಲ್ಲ ಗಮನಿಸಿದ ಸ್ಥಳೀಯರು ಇವರನ್ನು “ಪಪ್ಪಾಯಿ ಫಾದರ್” ಎಂದೇ ಕರೆಯುತ್ತಿದ್ದಾರೆ.
ದೇವಾಲಯದ ಆವರಣದಲ್ಲಿ ಬೆಳೆದ ಸಾವಯವ ಕೃಷಿಗೆ ಸ್ಥಳೀಯರಿಂದ ವಿಶೇಷ ಬೇಡಿಕೆ ಇದೆ. ದೇವಾಲಯದ ಜಮೀನಿನಲ್ಲಿ ಉತ್ಪತ್ತಿಯಾಗುವ ಪಪ್ಪಾಯಿ, ಗೆಣಸು, ಸುವರ್ಣಗೆಡ್ಡೆ, ಅರಿವೆ ಸೊಪ್ಪು, ಕುಂಬಳಕಾಯಿಯನ್ನು ಮಾರುಕಟ್ಟೆಯಲ್ಲಿ ಸಿಗುವ ದರಕ್ಕಿಂತ ಕಡಿಮೆ ದರದಲ್ಲಿ ಸರ್ವ ಸಮುದಾಯದವರು ಪ್ರೀತಿಯಿಂದ ಸ್ವೀಕರಿಸುತ್ತಾರೆ. ಮಾತ್ರವಲ್ಲದೆ ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆ, ಧರ್ಮಗುರುಗಳ ತರಬೇತಿ ಕೇಂದ್ರ ಜೆಪ್ಪು ಸೆಮಿನರಿಗೆ, ಬಜ್ಜೋಡಿ ಕ್ರೈಸ್ತ ಶಿಕ್ಷಣ ಸಂಸ್ಥೆಗಳ ಮುಖ್ಯ ಕಚೇರಿಗೂ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಪ್ರತಿ ವಾರ ನಡೆಯುವ ಪೂಜೆಯ ಬಳಿಕ ಧಾರ್ಮಿಕ ಶಿಕ್ಷಣದಲ್ಲಿ ಪಾಲ್ಗೊಳ್ಳುವ ಪ್ರಾಥಮಿಕದಿಂದ ತೊಡಗಿ ಪಿಯುಸಿವರೆಗಿನ ವಿದ್ಯಾರ್ಥಿಗಳಿಗೆ ನೀಡಲಾಗುವ ಉಚಿತ ಉಪಹಾರಕ್ಕೂ ತೋಟದ ತರಕಾರಿಯನ್ನು ಬಳಸಲಾಗುತ್ತಿದೆ. ಧರ್ಮಗುರುವಿನ ಕೃಷಿ ಮೇಲಿನ ಪ್ರೀತಿಯಿಂದ, ದೇವಾಲಯಕ್ಕೂ ಆದಾಯ ಬರುತ್ತಿದೆ. ಫಾ. ಗ್ರೆಗರಿ ಪಿರೇರಾರವರ ಕೃಷಿ ಮೇಲಿನ ಪ್ರೀತಿಗೆ ಪಾಲನಾ ಮಂಡಳಿ ಸಂಪೂರ್ಣ ಬೆಂಬಲ ನೀಡುತ್ತಿದೆ.
ವಯಸ್ಸು 65ರ ಗಡಿ ದಾಟಿದರೂ, ಹದಿಹರೆಯದ ಯುವಕರಂತೆ ಕೃಷಿ ಮೇಲಿನ ಪ್ರೀತಿಯನ್ನು ತೋರ್ಪಡಿಸುತ್ತಿರುವ ಧರ್ಮಗುರುಗಳು, ಕೃಷಿಗೆ ಸಂಬಂಧಿಸಿದಂತೆ ಒಂದು ತಂಡವನ್ನು ಕಟ್ಟಿದ್ದಾರೆ. ಫ್ರ್ಯಾಂಕಿ ಡಿಸೋಜ, ಬಾಬಣ್ಣ, ಪ್ರಕಾಶ್, ಸೇಸಪ್ಪ, ಐರಿನ್, ಲಲಿತಾ, ಚಿನ್ನಮ್ಮ, ಪ್ರಮೋದ್, ವಿನೋದ್ ಹಾಗೂ ಮೋಹನ್, ಧರ್ಮಗುರುಗಳೊಂದಿಗೆ ‘ಕೈ ಕೆಸರಾದರೆ ಬಾಯಿ ಮೊಸರು’ ಎಂಬಂತೆ ಕೃಷಿ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ.
ಫಾ. ಗ್ರೆಗರಿ ಪಿರೇರಾ ರವರ ಪರಿಚಯ
ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ಮೇರಮಜಲು ಗ್ರಾಮದ ಕೃಷಿ ಕುಟುಂಬದಲ್ಲಿ 1953 ನವೆಂಬರ್ 17 ರಂದು ಜನಿಸಿದ ಇವರು, 1921 ರಲ್ಲಿ ಗುರುದೀಕ್ಷೆಯನ್ನು ಪಡೆದುಕೊಂಡರು. ಗುರುದೀಕ್ಷೆಯ ಬಳಿಕ 2 ವರ್ಷ ಮೊಡಂಕಾಪು ಚರ್ಚ್, 7 ವರ್ಷ ನಾರಂಪಾಡಿ, 7 ವರ್ಷ ವೇಣೂರು, 14 ವರ್ಷ ಉಡುಪಿಯ ಬೆಳ್ವೆ ಎಸ್ಟೇಟ್ ಚರ್ಚ್ ಹಾಗೂ 7 ವರ್ಷ ಅಲ್ಲಿಪಾದೆ ದೇವಾಲಯದಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ. ಶತಮಾನೋತ್ತರ ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಬೊರಿಮಾರು ದೇವಾಲಯಕ್ಕೆ ಇಪ್ಪತ್ತೈದನೇ ಧರ್ಮಗುರುಗಳಾಗಿ ಕಳೆದ ವರ್ಷ ಅಂದರೆ 2018 ಜೂನ್ ನಿಂದ ಕಾರ್ಯನಿರ್ವಹಿಸುತ್ತಿದ್ದಾರೆ.
ಅಂದಹಾಗೆ ಬೊರಿಮಾರು ದೇವಾಲಯಕ್ಕೆ ಆಗಮಿಸುವ ಮೊದಲೇ, ಈ ಧರ್ಮಗುರುವಿಗೆ ಕೃಷಿ ಮೇಲೆ ಅಗಾಧ ಪ್ರೀತಿ. ತಾನು ಸೇವೆ ಸಲ್ಲಿಸಿದ ದೇವಾಲಯಗಳಲ್ಲಿ ಸ್ವಲ್ಪ ಖಾಲಿ ಜಾಗ ಸಿಕ್ಕಿದರೂ ಸಾಕು.. ಅಲ್ಲಿ ತನ್ನ ಕನಸಿನ ಕೃಷಿಯನ್ನು ಆರಂಭಿಸುತ್ತಾರೆ. ನಾರಂಪಾಡಿ ದೇವಾಲಯದಲ್ಲಿ “ಕುಂಬಳಕಾಯಿ ಫಾದರ್”, ಬೆಳ್ವೆಯಲ್ಲಿ “ಅಡಿಕೆ ಫಾದರ್” ಆಗಿ ಹೆಸರು ಪಡೆದ ಫಾ. ಗ್ರೆಗರಿ ಪಿರೇರಾ, ಈಗ ಬೋರಿಮಾರ್ ನಲ್ಲಿ “ಪಪ್ಪಾಯಿ ಫಾದರ್” ಆಗಿದ್ದಾರೆ. ಅಲ್ಲಿಪಾದೆಯಲ್ಲಿ ಶಾಲೆ ಆರಂಭಿಸಿದ ಕೀರ್ತಿ ಕೂಡ ಇವರಿಗೆ ಸಲ್ಲುತ್ತದೆ.
ಫಾ. ಗ್ರೆಗರಿ ಪಿರೇರಾ ಬೋರಿಮಾರ್ ದೇವಾಲಯಕ್ಕೆ ಆಗಮಿಸಿದ ಬಳಿಕ ಇಲ್ಲಿ ಕೃಷಿ ಕ್ರಾಂತಿಯೇ ಉಂಟಾಗಿದೆ. ಕೃಷಿಯಿಂದ ದೂರ ನಿಲ್ಲುವ ಹಲವಾರು ಮಂದಿಗೆ ಇವರೇ ಆದರ್ಶ. ದೇವಾಲಯದ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ರೋಷನ್ ಬೋನಿಫಸ್ ಮಾರ್ಟಿಸ್ ತಮ್ಮ ಧರ್ಮ ಗುರುವಿನ ಬಗ್ಗೆ, ‘ಇಂತಹ ಧರ್ಮಗುರುಗಳನ್ನು ಶತಮಾನೋತ್ತರ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಪಡೆದ ನಾವು ನಿಜಕ್ಕೂ ಭಾಗ್ಯವಂತರು. ಅವರ ಎಲ್ಲ ಕೆಲಸಗಳಿಗೆ ನಮ್ಮ ಪಾಲನಾ ಮಂಡಳಿ ಸ್ಥಳೀಯರು ಮತ್ತು ಸಮಸ್ತ ಕ್ರೈಸ್ತ ಬಾಂಧವರು ಪ್ರೀತಿಯಿಂದ ಸಹಕಾರ ನೀಡುತ್ತಾರೆ” ಎಂಬ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ.
ಸ್ಟೀವನ್ ಕುಲಾಸೊ
ಉದ್ಯಾವರ