‘ಪಣಿಯಾಡಿ ಕಾದಂಬರಿ’ ಪ್ರಶಸ್ತಿ ಪ್ರದಾನ
ಉಡುಪಿ: ತುಳುಕೂಟ ಉಡುಪಿ ಸಂಸ್ಥೆಯಿಂದ ಕೊಡಮಾಡುವ 25ನೇ ವರ್ಷದ ‘ಪಣಿಯಾಡಿ ಕಾದಂಬರಿ’ ಪ್ರಶಸ್ತಿ ಹಾಗೂ 7ನೇ ವರ್ಷದ ‘ಮಲ್ಪೆ ರಾಮದಾಸ ಸಾಮಗ’ ಪ್ರಶಸ್ತಿ ಪ್ರದಾನ ಸಮಾರಂಭ ಇದೇ 15ರಂದು ಮಧ್ಯಾಹ್ನ 3.30ಕ್ಕೆ ಕಿದಿಯೂರು ಹೋಟೆಲ್‌ನ ಪವನ್ ರೂಫ್‌ಟಾಪ್‌ನಲ್ಲಿ ನಡೆಯಲಿದೆ ಎಂದು ತುಳುಕೂಟದ ಅಧ್ಯಕ್ಷ ವಿ.ಜಿ.ಶೆಟ್ಟಿ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿಗೆ ಅಕ್ಷತ ರಾಜ್ ಪೆರ್ಲಅವರ ‘ಬೊಳ್ಳಿ’ ಹಾಗೂ ರಾಜಶ್ರೀ ಟಿ.ರೈ ಪೆರ್ಲ ಅವರ ‘ಚೌಕಿ’ ಕಾದಂಬರಿಗಳನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ತಲಾ ₹10,000, ಫಲಕ ಒಳಗೊಂಡಿದೆ. ಮಲ್ಪೆ ರಾಮದಾಸ ಸಾಮಗ ಪ್ರಶಸ್ತಿಯನ್ನು ಹಿರಿಯ ಯಕ್ಷಗಾನ ಭಾಗವತರಾದ ದಿನೇಶ್ ಅಮ್ಮಣ್ಣಾಯ ಅವರಿಗೆ ನೀಡಲಾಗುತ್ತಿದೆಎಂದರು.
ಅಂದಿನ ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಉಪ ಕುಲಪತಿ ಪ್ರೊ.ಬಿ.ಎ.ವಿವೇಕ ರೈ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ, ಉದ್ಯಮಿಗಳಾದ ಭುವನೇಂದ್ರ ಕಿದಿಯೂರು, ಪುರುಷೋತ್ತಮ ಶೆಟ್ಟಿ, ಯು.ವಿಶ್ವನಾಥ್ ಶೆಣೈ ಉಪಸ್ಥಿತರಿರಲಿದ್ದಾರೆ ಎಂದರು.
ಮಧ್ಯಾಹ್ನ 2.30ಕ್ಕೆ ದಿನೇಶ್ ಅಮ್ಮಣ್ಣಾಯ ಬಳಗದಿಂದ ಕಾಡಮಲ್ಲಿಗೆ, ಕೋಟಿ ಚೆನ್ನಯ್ಯ, ಗೆಜ್ಜೆಪೂಜೆ ಪ್ರಸಂಗದ ಯಕ್ಷಗಾನ ನಾಟ್ಯ ವೈಭವ ಕಾರ್ಯಕ್ರಮ ನಡೆಯಲಿದೆ ಎಂದು ವಿ.ಜಿ.ಶೆಟ್ಟಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗಂಗಾಧರ ಕಿದಿಯೂರು, ತಾರಾ ಯು.ಆಚಾರ್ಯ, ಪ್ರಕಾಶ ಸುವರ್ಣ ಕಟಪಾಡಿ, ಡಿ.ದಯಾನಂದ ಇದ್ದರು.