ಉಡುಪಿಯಲ್ಲಿ ಸಪ್ಟೆಂಬರ್ 15 ರಂದು ‘ಓಣಂ’ ಸಂಭ್ರಮ

ಉಡುಪಿ : ಕೇರಳ ಕಲ್ಚರಲ್‌ ಅಂಡ್ ಸೋಷಿಯಲ್‌ ಸೆಂಟರ್‌ನ 27ನೇ ವಾರ್ಷಿಕೋತ್ಸವದ ಅಂಗವಾಗಿ ಲಯನ್ಸ್‌ ಕ್ಲಬ್ ಸಹಭಾಗಿತ್ವದಲ್ಲಿ ಇದೇ 15ರಂದು ಬೆಳಿಗ್ಗೆ11ಕ್ಕೆ ಬನ್ನಂಜೆ ನಾರಾಯಣ ಗುರು ಕಲ್ಯಾಣ ಮಂಟಪದಲ್ಲಿ ಓಣಂ ಹಬ್ಬದ ಆಚರಣೆ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಪಿ.ಎ.ಮೋಹನ್‌ದಾಸ್ ತಿಳಿಸಿದರು.‌
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಓಣಂ ಕೇರಳಿಗರ ಶ್ರೇಷ್ಠ ಹಬ್ಬವಾಗಿದ್ದು, ಜಾತಿ, ಮತ ಭೇಧವಿಲ್ಲದೆ ಸಂಭ್ರಮದಿಂದ ಆಚರಿಸಲಾಗುತ್ತದೆ. ಉಡುಪಿಯಲ್ಲಿ ನೆಲೆಸಿರುವ ಕೇರಳಕಲ್ಚರಲ್‌ ಸೊಸೈಟಿ ಸದಸ್ಯರೆಲ್ಲರೂ ಒಟ್ಟಾಗಿ ಓಣಂ ಆಚರಿಸಲಿದ್ದೇವೆ ಎಂದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಶಾಸಕ ರಘುಪತಿ ಭಟ್‌, ಲಯನ್ಸ್‌ಕ್ಲಬ್ 317 ಸಿ ಡಿಸ್ಟ್ರಿಕ್ಟ್‌ ಗವರ್ನರ್‌ ವಿ.ಜಿ.ಶೆಟ್ಟಿ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಡಾ.ಎಂ.ಎಸ್‌.ವಲಿಯತ್ತಾನ್‌, ನಟ ಅರವಿಂದ್ ಬೋಳಾರ್, ಎಸ್‌ಪಿ ನಿಶಾಜೇಮ್ಸ್‌ ಭಾಗವಹಿಸಲಿದ್ದಾರೆ ಎಂದರು.
ಓಣಂ ಪೂಕಳಂ ಸ್ಪರ್ಧೆ ನಡೆಯಲಿದ್ದು, ಎಸ್ಸೆಸ್ಸೆಲ್ಸಿ ಹಾಗೂ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ನಗದು ಪುರಸ್ಕಾರ ನೀಡಲಾಗುವುದು. ಮೂಳೆತಜ್ಞರಾದ ಡಾ.ಬೆಂಜಮಿನ್‌ ಜೋಸೆಫ್‌ ಹಾಗೂ ಸಮಾಜಸೇವಕ ವಿಶುಶೆಟ್ಟಿ ಅಂಬಲಪಾಡಿ ಹಾಗೂ ನಿತ್ಯಾನಂದ ಒಳಕಾಡು ಅವರನ್ನು ಗೌರವಿಸಲಾಗುವುದು ಎಂದರು.
ಕೇರಳೀಯ ಶೈಲಿಯ ‘ಓಣಂ ಸದ್ಯ’ ಭೋಜನಕೂಟ ಏರ್ಪಡಿಸಲಾಗಿದೆ. ಕೇರಳ ಮೂಲಕ ಉಡುಪಿ ಮಣಿಪಾಲದಲ್ಲಿ ನೆಲೆಸಿರುವ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಕೆ.ವಿ.ಕುಮಾರ್, ಕೋಶಾಧಿಕಾರಿ ಪ್ರಸನ್ನರಾಜ್‌, ಸುಗುಣ ಕುಮಾರ್‌, ಜೋಸೆಫ್‌ ಮ್ಯಾಥ್ಯೂ ಅವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!