ಕಾಣದಂತೆ ಮಾಯವಾದರು ನಮ್ಮ ಜಿಲ್ಲಾ ಉಸ್ತುವಾರಿ ….

ಉಡುಪಿ ಟೈಮ್ಸ್ ವಿಶೇಷ ವರದಿ:

ನಮ್ಮ ಡಿಸ್ಟ್ರಿಕ್ಟ್ ಮಿನಿಸ್ಟ್ರು ಎಲ್ಲಿ ಕಾಣದಂತೆ ಮಾಯವಾಗಿದ್ದಾರೆ? ನಮ್ಮ ಮಾರಣ ಹೋಮಕ್ಕೆ ಕಾದು ನೋಡುತ್ತಿದ್ದಾರಾ? ಜಿಲ್ಲೆಯಾದ್ಯಂತ ಸರಣಿ ಸಾವುಗಳು ಸಂಭವಿಸಿದ ನಂತರವೇ ಇಲ್ಲಿಗೆ ಕಾಲಿಡ್ತಾರಾ? ಇಷ್ಟಕ್ಕೂ ಹೀಗಾಗಲು ನಾವೇನಾದ್ರೂ ಭಯಾನಕ ಅಪರಾಧ ಮಾಡಿದ್ದೇವಾ?

ಅಸೆಂಬ್ಲಿ ಎಲೆಕ್ಷನ್ನಲ್ಲಿ ಕಮಲಕ್ಕೇ ಮುದ್ರೆಯೊತ್ತಿ ಐದರಲ್ಲಿ ಐದೂ ಸ್ಥಾನಗಳಲ್ಲಿ ಬಿಜೆಪಿ ಜಯಭೇರಿಗೆ ಕಾರಣರಾದದ್ದು ನಮ್ಮ ತಪ್ಪಾ? ಮುನ್ಸಿಪಾಲ್ಟಿ ಚುನಾವಣೇಲೂ ಮೂವತ್ತೈದರಲ್ಲಿ ಬಿಜೆಪಿಯ ಮೂವತ್ತೊಂದು ಕೌನ್ಸಿಲರುಗಳನ್ನು ಗೆಲ್ಲಿಸಿದ್ದು ನಾವು ಮಾಡಿದ ಅಪರಾಧವಾ? ಜಿಲ್ಲಾ ಪಂಚಾಯ್ತಿಯಲ್ಲೂ ಕಮಲವನ್ನೇ ಎತ್ತಿ ಹಿಡಿದದ್ದು ತಪ್ಪಾಯ್ತಾ? ಪಾರ್ಲಿಮೆಂಟಿಗೂ ಶೋಭಕ್ಕರ ಕೊರಳಿಗೆ ಜಯಮಾಲೆ ಹಾಕಿದ್ದು ನಮ್ಮ ಅವಿವೇಕತನವಾ? ನಮ್ಮಿಂದ ಮೋದಿಜಿಗೆ, ಯಡಿಯೂರಪ್ಪಾಜಿ ಯಾವ ತಪ್ಪಾಗಿದೆ? ಅದ್ಯಾವ ಹಾನಿ ಉಂಟು ಮಾಡಿದ್ದೇವೆ? ಇದು ಉಡುಪಿಯ ಪ್ರತಿಯೊಬ್ಬ ನಾಗರಿಕರ ಪ್ರಶ್ನೆ!


ಇಷ್ಟಕ್ಕೂ ಕಾರಣೀಭೂತರಾದವರು ಯಾರು ಅಂದುಕೊಂಡಿದ್ದೀರಾ? ಅದ್ಯಾರೂ ಅಲ್ಲ; ನಮ್ಮ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ. ಆವತ್ತು ನೆರೆ ಉಕ್ಕಿ ಬಂತು. ಕಾಪುವಿನಿಂದ ಕುಂದಾಪುರ ಪರ್ಯಂತ ಕಿನಾರೆಯ ನಿವಾಸಿಗಳು ಮನೆ-ಮಠ ಕಳೆದುಕೊಂಡರು. ಕೋಟ್ಯಂತರ ಆಸ್ತಿ-ಪಾಸ್ತಿ ನಾಶವಾಯ್ತು. ಉಹುಂ; ಡಿಸ್ಟ್ರಿಕ್ಟ್ ಮಿನಿಸ್ಟ್ರರು ಈಚೆ ಬರಲೇ ಇಲ್ಲ. ಜನ ಕಾದು ಕಾದು ಸುಸ್ತಾಗಿ ಹೋದರು. ಇಲ್ಲಿನವರನ್ನು ‘ಕೇಳೂರಿಲ್ಲ-ಹೇಳೊರಿಲ್ಲ’ ಎಂಬ ದು:ಸ್ಥಿತಿ ಬಂತು. ಆದರೂ ನಮ್ಮ ಜಿಲ್ಲಾ ಉಸ್ತುವಾರಿ ಹೊತ್ತ ಹೊಮ್ ಮಿನಿಸ್ಟ್ರುಗೆ ಇದೆಲ್ಲಾ ಡೋಂಟ್ ಕೇರ್.


ಸಂತ್ರಸ್ತರಿಗೆ ಪರಿಹಾರ ಕೊಡುವ ಕಥೆ ಹಾಗಿರಲಿ; ಬಾಯಲ್ಲಿ ಜಸ್ಟ್ ಕರ್ಟೆಸಿಗೋಸ್ಕರ ಸಮಾಧಾನದ ಮಾತುಗಳನ್ನಡಲು ಕೂಡಾ ಮಿನಿಸ್ಟರ್ರು ಇತ್ತ ಕಾಲಿಡಲೇ ಇಲ್ಲ. ಒಂದಿಷ್ಟು ಪ್ರಜ್ಞಾವಂತರು ‘ಜಿಲ್ಲಾ ಉಸ್ತುವಾರಿ ಸಚಿವರು ನಾಪತ್ತೆಯಾಗಿದ್ದಾರೆ’ ಎಂಬ ಕಂಪ್ಲೇಂಟನ್ನು ನೀಡಲು ಮುಂದಾದಾಗ ಒಮ್ಮೆ ಹೆಜ್ಜೆಯಿಟ್ಟು ಪರಾರಿಯಾಗಿಯೇಬಿಟ್ಟರು.


ಇಂತಹ ಸನ್ನಿವೇಶಗಳಿಂದಾಗಿ ಕರಾವಳಿಯ ಜನ ಕಂಗೆಟ್ಟು ಹೋಗಿದ್ದಾರೆ. ಕೃಷಿಕರಂತೂ ದಿಕ್ಕಾಪಾಲಾಗಿದ್ದಾರೆ. ಮೀನುಗಾರರ ಬದುಕಂತೂ ನರಕಸದೃಶವಾಗಿದೆ. ಕೊರೋನಾ ವೈರಸ್ ಅಂತೂ ಉಡುಪಿ ಆಸುಪಾಸಿನವರನ್ನು ಭಯಭೀತರಾಗಿಸಿದೆ. ಊರಿಗೆ ಊರೇ ನಶಿಸಿ ಹೋಗಿ ಬಿಡುತ್ತಾ ಎಂಬಂತೆ ದೊಡ್ಡ ಕಂಟಕ ಎದುರಾದಂತೆ ಜನ ಭಯಗ್ರಸ್ಥರಾಗಿದ್ದಾರೆ. ಸ್ಥಿತಿ ಹೀಗೇಯೇ ಮುಂದುವರಿದಲ್ಲಿ ಕರಾವಳಿ ನಾಡಿಗೆ ಬೆನ್ನೆಲುಬು ಎಂಬಂತಿರುವ ಮೀನುಗಾರರ ಮಾರಣಹೋಮವೇ ನಡೆದು ಹೋಗಲಿದೆ. ಇಂತಹ ಅಪಾಯಕಾರಿ ಸನ್ನಿವೇಶಗಳ ಬಗ್ಗೆ ಜನ ಮಾತನಾಡುವುದನ್ನು ಆಲಿಸುವಾಗ ಎಲ್ಲರಲ್ಲೂ ಕರಾಳ ಕಾರ್ಮೋಢದ ಛಾಯೆ ಮಾಡದಿರದು. ಇಲ್ಲಿಯ ಜನಜೀವನದಂತೂ ಕ್ಷಣದದಿಂದ ಕ್ಷಣಕ್ಕೆ ದುಸ್ತರವಾಗತೊಡಗಿವೆ.ಸ್ಥಿತಿ ಹೀಗಿದ್ದಾಗ ಬಡ ಮುಗ್ಧ ಜನರಲ್ಲಿ ಧೈರ್ಯ ತುಂಬುವವರಾದರೂ ಯಾರು? ನಿಮ್ಮೊಂದಿಗೆ ನಾವಿದ್ದೇವೆ ಎಂದು ಅಭಯ ಹಸ್ತ ಚಾಚುವವರಾದರೂ ಯಾರು?


ನಮ್ಮ ಜಿಲ್ಲಾಧಿಕಾರಿಯವರಾದ ಜಿ. ಜಗದೀಶರವರು ಹಾಗೂ ಎಸ್ಸಿಯವರಾದ ಎನ್. ವಿಷ್ಣುವರ್ಧನ್‌ರವರು ಹಾಗೇನಾದ್ರೂ ನಿಷ್ಕ್ರಿಯರಾಗಿರುತ್ತಿದ್ದರೆ ಊರಿಗೆ ಊರೇ ಮಾರಣ ಹೋಮವಾಗಿಬಿಡುತ್ತಿತ್ತು. ಆದರೆ ಇವರಿಬ್ಬರ ಸಮಯೋಚಿತ ನಿರ್ಧಾರಗಳಿಂದಾಗಿ, ಮಿಂಚಿನ ಕಾರ್ಯಾಪ್ರವೃತಿಯಿಂದಾಗಿ ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದ್ದರೂ ನಮ್ಮ ಜಿಲ್ಲಾ ಉಸ್ತುವಾರಿ ಹೊಣೆ ಹೊತ್ತವರು ಎತ್ತ ಕತ್ತು ಹಾಕಿ ಮಲಗಿದ್ದಾರೆ?

ಸಿಲಿಕಾನ್ ಸಿಟಿ ಬೆಂಗಳೂರಿನ ಐಷಾರಾಮಿ ಬಂಗಲೆಯಲ್ಲಿ ಏರ್‌ಕಂಡೀಷನ್ ರೂಮಲ್ಲಿ ಹಾಯಾಗಿ ಪವಡಿಸುತ್ತಿದ್ದಾರಾ? ಟೀವಿ ಮುಂದೆ ಸ್ಟೇಟ್‌ಮೆಂಟ್ ಕೊಡ್ತಾ ನಿಶ್ಚಿಂತರಾಗಿ ವಿರಮಿಸುತ್ತಿದ್ದಾರಾ? ನಮ್ಮನ್ನು ರಕ್ಷಿಸುವ ಹೊಣೆ ಹೊತ್ತು ಮೈಮರೆತು ವಿಹರಿಸುತ್ತಿದ್ದಾರಾ? ಉಡುಪಿಯ ಬಗ್ಗೆ ಯಾಕಿಷ್ಟು ನಿರ್ಲಕ್ಷ್ಯ? ಕಾಟಾಚಾರಕ್ಕಾಗಿ ಗಣರಾಜ್ಯೋತ್ಸವದಂದು ಬಂದು ಫ್ಲ್ಯಾಗ್ ಹಾರಿಸಿ ಓಡ್ಹೋದ್ರೆ ನಮ್ ಗತಿಯೇನು? ನಿಮಗ್ಯಾಕೆ ಬೇಕಿತ್ತು ಕೊರೋನಾ ನಿಯಂತ್ರಣ ಉಸ್ತುವಾರಿ ಪಟ್ಟ? ‘ಕೋವಿಡ್’ ಪಾಸಿಟಿವ್ ಕುರಿತಾಗಿ ನಡೆಯುತ್ತಿರುವ ಡಿಸ್ಟ್ರಿಕ್ಟ್ ಲೆವೆಲ್ ಮೀಟಿಂಗಲ್ಲಿ ನೀವು ಕಾಣಿಸುತ್ತಿಲ್ಲವ್ಯಾಕೆ? ಬೇರೆಲ್ಲಾ ಡಿಸ್ಟ್ರಿಕ್ಟುಗಳಲ್ಲಿ ಮಿನಿಸ್ಟ್ರು ಇರ್‍ತಾರಾದ್ರೆ ನಮ್ಮಲ್ಯಾಕೆ ನಾಪತ್ತೆ? ಹೀಗೇ ಸಾಗುತ್ತಿವೆ ಉಡುಪಿ ಜಿಲ್ಲಾವಾಸಿಗಳ ಪ್ರಶ್ನೆಗಳ ಸರಮಾಲೆ.


ಹೌದು; ಒಪ್ಪುವಂಥದ್ದೇ ಪ್ರಶ್ನೆಗಳಿವು. ಆದರೆ ಉತ್ತರಿಸಬೇಕಾದ ನಮ್ಮೂರ ಸಚಿವ ಬಸವರಾಜ ಬೊಮ್ಮಾಯಿ ಸಾಹೇಬ್ರು ‘ಮೌನಂ ಶರಣಂ ಗಚ್ಛಾಮಿ’ ಎಂಬಂತೆ ಮೌನ ವೃತಾಚರಣೆ ನಿರತರಾಗಿದ್ದಾರೆ; ಬೆಂಗಳೂರಿನ ಐಷಾರಾಮಿ ಬಂಗಲೆಯಲ್ಲಿ ! ಹಾಗಂತ ಜನರೇನೂ ಕೈಗೆ ಕೊಳ ಹಾಕ್ಕೊಂಡು ಸುಮ್ಮನೆ ಕುಂತಿಲ್ಲ. ಹೋಮ್ ಮಿನಿಸ್ಟರ್ ಹಾಗೂ ಉಡುಪಿ ಡಿಸ್ಟ್ರಿಕ್ಟ್ ಮಿನಿಸ್ಟರ್ ಬಸವರಾಜ ಬೊಮ್ಮಾಯಿ ವಿರುದ್ಧ ದೊಡ್ಡ ಕಹಳೆ ಮೊಳಗುವ ಎಲ್ಲಾ ಸಾಧ್ಯತೆಗಳು ಕಂಡುಬಂದಿವೆ. ಖುದ್ದು ಸಂಘ ಪರಿವಾರವೇ ಅಸಾಮಾಧಾನಗೊಂಡಿದೆ. ಒಂದೋ ನಮ್ಮೂರಿನವರೇ ಆದ ಕೋಟ ಶ್ರೀನಿವಾಸ ಪೂಜಾರಿಯವರನ್ನು ಉಡುಪಿ ಜಿಲ್ಲಾ ಉಸ್ತುವಾರಿಯಾಗಿಸಿ ಎಂಬ ಬೇಡಿಕೆ ಮುಂದಿಟ್ಟಿದೆ. ಇಲ್ಲವೇ ಸ್ಥಳೀಯರಾದ, ಊರಿಗೆ ಚಿರಪರಿಚಿತರಾದ, ನಮ್ಮೂರಿಗೆ ಜೀವ ರಕ್ಷಕನಂತಿರುವ ಎಮ್ಮೆಲ್ಲೆ ರಘಪತಿ ಭಟ್ಟರಿಗೆ ಜಿಲ್ಲಾ ಉಸ್ತುವಾರಿಯ ಪಟ್ಟಕೇರಿಸಿ. ಅದನ್ನ ಬಿಟ್ಟು ದೂರದ ಬೆಂಗಳೂರಲ್ಲ ಮಕಾಡೆ ಮಲಗಿರುವ ಅದ್ಯಾವನೋ ಬೊಮ್ಮಾಯಿಯನ್ನೇ ಮುಂದುವರಿಸಿದರೆ ನಾವಂತೂ ಬಿಲ್‌ಕುಲ್ ಸುಮ್ಮಗಿರಲ್ಲ. ಇಂದಲ್ಲ, ನಾಳೆ ಕಲಿಸಿಯೇ ಬಿಡ್ತೇವೆ ಎಂಬ ಘರ್ಜನೆ ಮಾರ್ದನಿಸತೊಡಗಿದೆ.


ಈ ಸಿಂಹ ಘರ್ಜನೆಯಿಂದ ಉಡುಪಿಯ ಜಿಲ್ಲಾ ಉಸ್ತುವಾರಿಯನ್ನು ಬದಲಿಸಲು ಯಡಿಯೂರಪ್ಪ ಮುಂದಾಗ್ತಾರಾ? ಕೋಟ ಶ್ರೀನಿವಾಸ ಪೂಜಾರಿ ದಕ್ಷಿಣ ಕನ್ನಡ ಬಿಟ್ಟು ಉಡುಪಿಗೆ ಮರಳುತ್ತಾರಾ? ಉಡುಪಿ ಶಾಸಕರಾದ ರಘುಪತಿ ಭಟ್ಟರು ಜಿಲ್ಲಾ ಉಸ್ತುವಾರಿಯ ಕಿರೀಟಧಾರಿಯಾಗ್ತಾರಾ? ಕಾರ್ಕಳ ಶಾಸಕ ಸುನಿಲ್ ಕುಮಾರ್‌ಗೆ ಈ ಪಟ್ಟ ಒಲಿಯುತ್ತಾ? ಎಂಬ ಪ್ರಶ್ನೆಗೆ ಉತ್ತರಿಸುವ ಕಾಲ ದೂರವಿಲ್ಲ.
ಎಸ್ಸೆನ್ ಕುಂಜಾಲ್
ನಿಮ್ಮ ಅನಿಸಿಕೆ, ಅಭಿಪ್ರಾಯಗಳಿದ್ದಲ್ಲಿ ಇ-ಮೇಲ್ [email protected]  ಅಥವಾ ದೂರವಾಣಿ 9845070166 ಗೆ ಕರೆ ಮಾಡಬಹುದು.

ನಿರೀಕ್ಷಿಸಿ-‘ಕೊರೋನಾ ಪೈಸಾ ಕರೋನಾ’
ಕೋವಿಡ್-19
ಕ್ಕೆ ಸಿ.ಎಂ. ರಿಲೀಫ್ ಸ್ಕಿಮ್ ಅಲ್ಲಿ ಕೋಟ್ಯಂತರ ರೂಪಾಯಿ. ಅನುದಾನದ ಬಿಡುಗಡೆಯಾಗುತ್ತಿದೆ. ಒಂದೆಡೆ ಜನರೆಲ್ಲಾ ಮರಣ ಮೃದಂಗ ಬಾರಿಸಿದ್ದಾಂಗೆ ಖಿನ್ನರಾಗುತ್ತಿದ್ದರೆ, ಇನ್ನೊಂದೆಡೆ ‘ಹಣ ಕಂಡರೆ ಹೆಣ ಬಾಯಿ ಬಿಡುತ್ತೆ’ ಎಂಬoತೆ ಕೊರೋನಾದ ಹೆಸರಿನಲ್ಲಿ ಬರುತ್ತಿರುವ ದುಡ್ಡು ಕೊಳ್ಳೆ ಹೊಡೆಯಲು, ತಮ್ಮ ತಿಜೋರಿ ಭರ್ತಿಗೊಳಿಸಲು ದೊಡ್ಡ ಷಡ್ಯಂತ್ರವೇ ನಡೆಯುತ್ತಿದೆ. ಇದರ ರಿಯಾಲಿಟಿ ವಿದ್ ಪ್ರೂಫ್ ನಿಮ್ಮ ಮುಂದಿಡಲಿದ್ದೇನೆ – ಇದೇ ಅಂಕಣದಲ್ಲಿ!

Leave a Reply

Your email address will not be published. Required fields are marked *

error: Content is protected !!