ಮಹಾಲಕ್ಷೀ ಕೋ ಆಪರೇಟಿವ್ ಬ್ಯಾಂಕ್ ಸ್ಥಳಾಂತರಿತ ಸುರತ್ಕಲ್ ಶಾಖೆಯ ಉದ್ಘಾಟನೆ
ಕಳೆದ 42 ವರ್ಷಗಳಿಂದ ಸಹಕಾರಿರಂಗದಲ್ಲಿ ಗಣನೀಯ ಸೇವೆ ಸಲ್ಲಿಸುವ ಮೂಲಕ ಜನಸ್ನೇಹಿ ಸಹಕಾರಿ ಸಂಸ್ಥೆಯಾಗಿ, ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ವ್ಯವಹಾರ ನಡೆಸುತ್ತಾ ಕರಾವಳಿ ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಮಹಾಲಕ್ಷೀ ಕೋ ಆಪರೇಟಿವ್ ಬ್ಯಾಂಕಿನ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಳ್ಳಲಿರುವ ಸುರತ್ಕಲ್ ಶಾಖೆಯ ಉದ್ಘಾಟನಾ ಸಮಾರಂಭ ಸೆಪ್ಟೆಂಬರ್ 14 ರಂದು ಸುರತ್ಕಲ್ನ ಅಭೀಶ್ ಬಿಸಿನೆಸ್ ಸೆಂಟರ್ನಲ್ಲಿ ನಡೆಯಲಿದೆ.
ಕರ್ನಾಟಕ ಸರಕಾರದ ಮೀನುಗಾರಿಕಾ ಮತ್ತು ಬಂದರು ಸಚಿವರಾದ ಕೋಟ ಶ್ರೀನಿವಾಸ ಪೂಜಾರಿವರು ಉದ್ಘಾಟಿಸಲಿದ್ದು, ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ಮುಖ್ಯ ಪ್ರವರ್ತಕರಾದ ನಾಡೋಜ ಡಾ ಜಿ. ಶಂಕರ್ ದೀಪ ಪ್ರಜ್ವಲಿಸಲಿದ್ದಾರೆ. ಮಹಾಲಕ್ಷ್ಮೀ ಕೋ- ಆಪರೇಟಿವ್ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಯಶ್ಪಾಲ್ ಸುವರ್ಣ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲು, ಮಂಗಳೂರು ಉತ್ತರ ಶಾಸಕರಾದ ಡಾ| ಭರತ್ ಶೆಟ್ಟಿ, ಮೂಡಬಿದ್ರೆ ಶಾಸಕರಾದ ಶ್ರೀ ಉಮಾನಾಥ ಕೋಟ್ಯಾನ್, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ| ಎಂ. ಎನ್. ರಾಜೇಂದ್ರ ಕುಮಾರ್, ದ.ಕ. ಮೊಗವೀರ ಮಹಾಜನ ಸಂಘ ಉಚ್ಚಿಲ ಅಧ್ಯಕ್ಷರಾದ ಶ್ರೀ ಜಯ ಸಿ. ಕೋಟ್ಯಾನ್, ಬಂಟರ ಮಾತೃ ಸಂಘ ಮಂಗಳೂರು ಅಧ್ಯಕ್ಷರಾದ ಶ್ರೀ ಅಜಿತ್ ಕುಮಾರ್ ರೈ ಮಾಲಾಡಿ, ಸಹಕಾರಿ ಸಂಘಗಳ ಉಪನಿಬಂಧಕರಾದ ಶ್ರೀ ಬಿ. ಕೆ. ಸಲೀಂ, ಮೊಗವೀರ ಯುವ ವೇದಿಕೆ ಅಧ್ಯಕ್ಷರಾದ ಶ್ರೀ ಜಗದೀಶ ಬಂಗೇರ ಹಾಗೂ ಅಭೀಶ್ ಬಿಲ್ಡರ್ಸ್ ಆಡಳಿತ ನಿರ್ದೇಶಕರಾದ ಶ್ರೀ ಪುಷ್ಪರಾಜ್ ಜೈನ್ ಭಾಗವಹಿಸಲಿದ್ದಾರೆ.
ಕಳೆದ 9 ವರ್ಷದಿಂದ ನಿರಂತರವಾಗಿ ಸದಸ್ಯರಿಗೆ ಶೇ.೧೮ ಡಿವಿಡೆಂಡ್ ನೀಡುತ್ತಿರುವ ಕರಾವಳಿಯ ಏಕೈಕ ಪಟ್ಟಣ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಹಾಲಕ್ಷೀ ಕೋ ಆಪರೇಟಿವ್ ಬ್ಯಾಂಕ್ ಪ್ರಸ್ತುತ ಶ್ರೀ ಯಶ್ಪಾಲ್ ಸುವರ್ಣರವರ ಅಧ್ಯಕ್ಷತೆಯಲ್ಲಿ ಉತ್ತಮ ಪ್ರಗತಿಯನ್ನು ದಾಖಲಿಸುತ್ತಿದೆ.
ಮಹಾಲಕ್ಷೀ ಕೋ ಆಪರೇಟಿವ್ ಬ್ಯಾಂಕ್ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮಲ್ಪೆ, ಗಂಗೊಳ್ಳಿ, ಮಂಗಳೂರು, ಹೆಜಮಾಡಿ, ಪಡುಉಚ್ಚಿಲ, ಉಡುಪಿ ಹಾಗೂ ಕುಂದಾಪುರ ಹೀಗೆ ಒಟ್ಟು 8 ಶಾಖೆಗಳನ್ನು ಹೊಂದಿದ್ದು, ಈಗಾಗಲೇ ೪ ಶಾಖೆಗಳಾದ ಮಲ್ಪೆ, ಮಂಗಳೂರು, ಕುಂದಾಪುರ, ಸುರತ್ಕಲ್ ಮತ್ತು ಆಡಳಿತ ಕಛೇರಿ ಸ್ವಂತ ಕಟ್ಟಡದಲ್ಲಿ ವ್ಯವಹರಿಸುತ್ತಿದೆ.
ಪ್ರಸ್ತುತ ಬ್ಯಾಂಕಿನಲ್ಲಿ 21,012 ಸದಸ್ಯರಿದ್ದು, ಪಾಲು ಬಂಡವಾಳ ರೂ. 6.45 ಕೋಟಿ, ದುಡಿಯುವ ಬಂಡವಾಳ ರೂ. 149.08 ಕೋಟಿ, ಠೇವಣಿ ರೂ.127.೦೦ ಕೋಟಿ, ಮುಂಗಡ ರೂ.108.00 ಕೋಟಿಯಾಗಿದ್ದು, ಬ್ಯಾಂಕು ಲೆಕ್ಕ ಪರಿಶೋಧನೆಯಲಿ ಎ ಶ್ರೇಣಿಯಲ್ಲಿದ್ದು ಸಹಕಾರ ಇಲಾಖೆ ಹಾಗೂ ಭಾರತೀಯ ರಿಸರ್ವ್ ಬ್ಯಾಂಕಿನವರ ಮೆಚ್ಚುಗೆಗೆ ಪಾತ್ರವಾಗಿರುತ್ತದೆ.