ಜನಪ್ರಿಯ ಯೋಜನೆಗಳನ್ನ ಯಾವುದೇ ಕಾರಣಕ್ಕೂ ರದ್ದು ಮಾಡಲ್ಲ: ಬಿ.ಎಸ್.ವೈ
ಬೆಂಗಳೂರು: ಜನಪ್ರಿಯ ಯೋಜನೆಗಳನ್ನು ಯಾವುದೇ ಕಾರಣಕ್ಕೂ ರದ್ದು ಮಾಡುವುದಿಲ್ಲ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಎಚ್.ಡಿ.ಕುಮಾರಸ್ವಾಮಿ ಆಡಳಿತ ಅವಧಿಯಲ್ಲಿದ್ದ ಯೋಜನೆಗಳಿಗೆ ಬಿ.ಎಸ್.ಯಡಿಯೂರಪ್ಪ ಬ್ರೇಕ್ ಹಾಕಲಿದ್ದಾರೆ. ಈ ಮೂಲಕ ಅನೇಕ ಯೋಜನೆಗಳು ರದ್ದು ಆಗಲಿವೆ ಎಂಬ ಮಾತು ರಾಜಕೀಯ ವಲಯದಲ್ಲಿ ಹರಿದಾಡುತ್ತಿತ್ತು. ಇದನ್ನು ತಳ್ಳಿ ಹಾಕಿರುವ ಮುಖ್ಯಮಂತ್ರಿಗಳು ಜನಪರ ಯೋಜನೆಗಳನ್ನು ಮುಂದುವರಿಸುವುದಾಗಿ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿಗಳು, ಜನಪ್ರಿಯ ಯೋಜನೆಗಳನ್ನು ರದ್ದುಪಡಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ. ಅನ್ಯ ಭಾಗ್ಯಯೋಜನೆಯನ್ನು ಕೂಡ ರದ್ದು ಮಾಡುವುದಿಲ್ಲ. ಈ ಯೋಜನೆ ಮುಂದುವರಿಸಲು ಹಣ ಬಿಡುಗಡೆ ಮಾಡಲಾಗಿದೆ. ಅನುದಾನ ಬಿಡುಗಡೆ ಕಡತಕ್ಕೆ ಈಗಾಗಲೇ ಸಹಿ ಹಾಕಲಾಗಿದೆ ಎಂದು ತಿಳಿಸಿದ್ದಾರೆ.
ಇಂದಿರಾ ಕ್ಯಾಂಟೀನ್‍ನಲ್ಲೂ ಗುಣಮಟ್ಟದ ಆಹಾರ ಸಿಗಬೇಕು. ಅದರ ಸಂಪೂರ್ಣ ವೆಚ್ಚ ಸರ್ಕಾರವೇ ಭರಿಸಬೇಕು. ಇದು ಸಹ ಬಡವರಿಗೆ, ಹಸಿದವರಿಗೆ ರಿಯಾಯಿತಿ ದರದಲ್ಲಿ ಮಾಡಿದ ಕಾರ್ಯಕ್ರಮ. ಬೆಂಗಳೂರಿನ ಹೊರತು ಪಡಿಸಿ ಇತರ ಜಿಲ್ಲೆಗಳಲ್ಲಿ ಇನ್ನೂ ಹೆಚ್ಚುವರಿ ಇಂದಿರಾ ಕ್ಯಾಂಟೀನ್ ಆಗಬೇಕಿದೆ. ಇಂದಿರಾ ಕ್ಯಾಂಟೀನ್‍ಗೆ ಸರ್ಕಾರದಿಂದ ಹಣ ನೀಡಲು ಆಗಲ್ಲ. ನೀವೇ ಮಾಡಿಕೊಳ್ಳಿ ಎಂದು ಬಿಬಿಎಂಪಿಗೆ ಹೇಳಿದ್ದಾರೆ. ಇಂದಿರಾ ಕ್ಯಾಂಟೀನ್ ಯೋಜನೆಗೆ 200 ಕೋಟಿ ರೂ.ಗಳೂ ಖರ್ಚಾಗುವುದಿಲ್ಲ. ಹೀಗಾಗಿ ರಾಜ್ಯ ಸರ್ಕಾರದಿಂದ ಇದು ನಿರಂತರವಾಗಿ ನೆಡೆಯಬೇಕು ಎಂದು ಆಗ್ರಹಿಸಿದರು.
2.30 ಲಕ್ಷ ಕೋಟಿ ರೂ. ರಾಜ್ಯದ ಬಜೆಟ್ ಇದೆ. ಕಾಲೇಜು ವಿಧ್ಯಾರ್ಥಿಗಳಿಗೆ, ಆಸ್ಪತ್ರೆಗಳ ಕಡೆ ಇದು ತುಂಬಾ ಅನುಕೂಲ ಆಗಿದೆ. ಜೊತೆಗೆ ಕಾಲೇಜು, ಆಸ್ಪತ್ರೆಗಳ ಕಡೆ ಈ ಯೋಜನೆ ಮುಂದುವರೆಸಿ ಎಂದು ಬೇಡಿಕೆ ಹೆಚ್ಚಿದೆ. ಹೀಗಾಗಿ ಅನ್ನಭಾಗ್ಯ ಹಾಗೂ ಇಂದಿರಾ ಕ್ಯಾಂಟೀನ್ ಯೋಜನೆ ಬಿಟ್ಟರೆ ನಾನು ಸುಮ್ಮನಿರಲ್ಲ ಎಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಎಚ್ಚರಿಸಿದ್ದರು.
ಇದಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಅನ್ನಭಾಗ್ಯದ ಅಕ್ಕಿಯನ್ನು ಕಡಿತಗೊಳಿಸಿ ಆ ಹಣವನ್ನು ಕೃಷಿ ಸಮ್ಮಾನ್ ಯೋಜನೆಗೆ ಬಳಸಿಕೊಳ್ಳಲು ಸರ್ಕಾರ ಮುಂದಾಗಿದೆ ಎಂಬ ಮಾಹಿತಿ ಬಂದಿದೆ. ಒಂದು ವೇಳೆ ಸರ್ಕಾರ ಇಂತಹ ನಿರ್ಧಾರ ಕೈಗೊಂಡಲ್ಲಿ ಸದನದ ಹೊರಗೆ ಹಾಗೂ ಒಳಗೆ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ಬಡತನ ರೇಖೆಗಿಂತ ಕೆಳಗಿದ್ದ 4 ಕೋಟಿ ಬಡವರಿಗೆ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದೆ. ಆದರೆ ಬಿಜೆಪಿ ಸರ್ಕಾರ ಅನ್ನಭಾಗ್ಯದ ಯೋಜನೆ ಅಡಿ ನೀಡುವ ಅಕ್ಕಿಯನ್ನು 7 ಕೆ.ಜಿ.ಗಿಂತ ಕಡಿಮೆ ಮಾಡುವ ಕುರಿತು ಚರ್ಚೆ ನಡೆಸಿದೆ. ಅನ್ನಭಾಗ್ಯದಲ್ಲಿ ಉಳಿದ ಹಣವನ್ನು ಕಿಸಾನ್ ಸಮ್ಮಾನ್ ಯೋಜನೆಗೆ ಬಳಸಲು ಮುಂದಾಗಿದೆ. ಕೃಷಿ ಸಮ್ಮಾನ್ ಯೋಜನೆಯಡಿ ರೈತರಿಗೆ 4 ಸಾವಿರ ರೂ. ನೀಡಲಿ. ಅದಕ್ಕೆ ನಮ್ಮ ತಕರಾರಿಲ್ಲ. ಆದರೆ ಬಡವರ ಅಕ್ಕಿ ಕಡಿತ ಮಾಡಿ ಹಣ ಕೊಡುವುದು ಬಡವರ ವಿರೋಧಿ ಚಿಂತನೆ ಆಗಿದೆ ಎಂದು ಕಿಡಿಕಾರಿದ್ದರು.