14 ದಿನಗಳ ಸೈನ್ಯದ ಕೆಲಸ ಪೂರ್ಣಗೊಳಿಸಿ ಮರಳಿದ ಧೋನಿ

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ತಮ್ಮ ಎರಡು ವಾರದ ಸೇನಾ ಕರ್ತವ್ಯವನ್ನು ಪೂರೈಸಿದ್ದು, ಶನಿವಾರ ಲೇಹ್ ವಿಮಾನ ನಿಲ್ದಾಣದಿಂದ ಹೊರಟು ದೆಹಲಿಗೆ ಆಗಮಿಸಿದ್ದಾರೆ.

ಧೋನಿ ವೆಸ್ಟ್ ಇಂಡೀಸ್ ಪ್ರವಾಸದಿಂದ ದೂರ ಉಳಿದಿದ್ದರು. ಜುಲೈ 30ರಂದು 106 ಟಿಎ ಪ್ಯಾರಾ ಬೆಟಾಲಿಯನ್‍ನಲ್ಲಿ ಸೇನೆಯ ಕರ್ತವ್ಯಕ್ಕೆ ಹಾಜರಾಗಿ 14 ದಿನಗಳ ಕಾಲ ಸೈನ್ಯದಲ್ಲಿ ಕರ್ತವ್ಯ ನಿರ್ವಹಿಸಿ ಮರಳಿದ್ದಾರೆ. ಆಗಸ್ಟ್ 15 ರಂದು ಅವರ ಅವಧಿ ಪೂರ್ಣಗೊಂಡಿತ್ತು ಹೀಗಾಗಿ ಇಂದು ದೆಹಲಿಗೆ ಮರಳಿದ್ದಾರೆ.

ಧೋನಿ ಕಾಶ್ಮೀರ ಪರ್ವತದಲ್ಲಿ ಗಸ್ತು, ಕಾವಲು ಹಾಗೂ ಹೊರ ಠಾಣೆಗಳ ಕಾವಲು ಕೆಲಸವನ್ನು ನಿರ್ವಹಿಸಿದ್ದಾರೆ. ಈ ಆರ್ಮಿ ಬಟಾಲಿಯನ್ ಯೂನಿಟ್ ಕಾಶ್ಮೀರದಲ್ಲಿದ್ದು, ಅದರಲ್ಲೂ ಉಗ್ರರ ವಿರುದ್ಧ ದಾಳಿ ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿಕ್ಟರ್ ಫೋರ್ಸ್‍ನ ಒಂದು ಭಾಗವಾಗಿ ಧೋನಿ ಕೆಲಸ ಮಾಡಿದ್ದಾರೆ.

ವಿಶೇಷವೆಂದರೆ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು ಧೋನಿ ಹೊಸ ಕೇಂದ್ರಾಡಳಿತ ಪ್ರದೇಶವಾದ ಲಡಾಖ್‍ನಲ್ಲಿದ್ದರು. ಆಗ ಧೋನಿಯವರನ್ನು ಸೇನಾ ಸಿಬ್ಬಂದಿ ಸ್ವಾಗತಿಸಿ, ಸೇನೆಯ ಜನರಲ್ ಆಸ್ಪತ್ರೆಗೆ ಕರೆದೊಯ್ದಿದ್ದರು. ಆಸ್ಪತ್ರೆಯಲ್ಲಿ ರೋಗಿಗಳೊಂದಿಗೆ ಧೋನಿ ಮಾತುಕತೆ ನಡೆಸಿದ್ದರು.

ಧೋನಿ ಭಾರತೀಯ ಸೇನೆಯ ಬ್ರಾಂಡ್ ಅಂಬಾಸಿಡರ್ ಆಗಿದ್ದು, ತಮ್ಮ ಘಟಕದ ಸೈನಿಕರಿಗೆ ಪ್ರೇರಣೆ ನೀಡುವುದರ ಜೊತೆಗೆ ಸೈನಿಕರೊಂದಿಗೆ ಫುಟ್ಬಾಲ್, ವಾಲಿಬಾಲ್ ಆಡಿ ರಂಜಿಸುತ್ತಿದ್ದರು. ಅಲ್ಲದೆ, ಸೈನಿಕರೊಂದಿಗೆ ಯುದ್ಧ ತರಬೇತಿಯ ಕುರಿತು ಸಹ ಅಭ್ಯಾಸ ಮಾಡುತ್ತಿದ್ದರು ಎಂದು ಸೇನೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಸ್ವಾತಂತ್ರ್ಯ ದಿನದಂದು ಧೋನಿ ಸಿಯಾಚಿನ್‍ಗೆ ಪ್ರಯಾಣಿಸಿ ಅಲ್ಲಿ ಅತೀ ಎತ್ತರದ ಯುದ್ಧ ತರಬೇತಿ ಕೇಂದ್ರಗಳನ್ನು ನೋಡಿ, ನಂತರ ಸಿಯಾಚಿನ್‍ನ ಯುದ್ಧ ಸ್ಮಾರಕದಲ್ಲಿ ಹುತಾತ್ಮರಿಗೆ ಗೌರವ ಸಲ್ಲಿಸಲು ನಿರ್ಧರಿಸಿದ್ದರು. ಧೋನಿ ತಮ್ಮ ಕೆಲಸದ ವೇಳೆ ಉರಿ ಹಾಗೂ ಅನಂತ್‍ನಾಗ್ ಪ್ರದೇಶಗಳಿಗೂ ಭೇಟಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಧೋನಿ ಅವರಿಗೆ 2011ರಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವ ಹುದ್ದೆ ನೀಡಲಾಗಿತ್ತು. ಈ ಕರ್ನಲ್ ಗೌರವ ಹುದ್ದೆ ಟೆರಿಟೋರಿಯಲ್ ಆರ್ಮಿಯ 106ನೇ ಇನ್‍ಫ್ಯಾಂಟ್ರಿ ಬೆಟಾಲಿಯನ್‍ಗೆ ಸೇರಿದ್ದಾಗಿತ್ತು. ಭಾರತೀಯ ಸೇನೆ ಹೊಂದಿರುವ ಎರಡು ಪ್ಯಾರಾಚೂಟ್ ರೆಜಿಮೆಂಟ್‍ಗಳ ಪೈಕಿ ಇನ್‍ಫ್ಯಾಂಟ್ರಿ ಬೆಟಾಲಿಯನ್ ಒಂದಾಗಿದೆ. ವಿಶೇಷವೆಂದರೆ ಈ ಹಿಂದೆ ಅಂದರೆ 2015ರಲ್ಲಿ ಕೂಡ ಧೋನಿ ಆಗ್ರಾದಲ್ಲಿ ಪ್ಯಾರಾಚೂಟ್ ರೆಜಿಮೆಂಟ್ ಸೇನಾ ತಂಡದವರೊಂದಿಗೆ ತರಬೇತಿ ಪಡೆದುಕೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!