ನನ್ನ ಹಾಡು ನನ್ನದು ಸೀಸನ್-3 ಸುಗಮ ಸಂಗೀತ ಗೀತಗಾಯನ ಸ್ಪರ್ಧೆಗೆ ಚಾಲನೆ
ಉಡುಪಿ: ನನ್ನ ಹಾಡು ನನ್ನದು ಸೀಸನ್-3 ಸುಗಮ ಸಂಗೀತ ಗೀತಗಾಯನ ಸ್ಪರ್ಧೆಯು ಉಡುಪಿಯ ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಭವಾನಿ ಮಂಟಪದಲ್ಲಿ ನಡೆಯಿತು. ಕಟಪಾಡಿ ದಿಶಾ ಕಮ್ಯೂನಿಕೇಷನ್ಸ್ ಟ್ರಸ್ಟ್, ಕಲಾನಿಧಿ ಸಾಂಸ್ಕೃತಿಕ ಕಲಾಪ್ರಕಾರಗಳ ಸಂಸ್ಥೆ, ರಾಗವಾಹಿನಿ ಉಡುಪಿ, ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಆಶ್ರಯದಲ್ಲಿ ನಡೆದ ಸುಗಮ ಸಂಗೀತ ಕಾರ್ಯಕ್ರಮ.
ಸಂಗೀತ ಸ್ಫರ್ಧೆಯ ಪ್ರಥಮ ಸುತ್ತು ಮತ್ತು ಸೆಮಿಫೈನಲ್ ಸ್ಫರ್ಧೆಯನ್ನು ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬಿ.ವಿಜಯ ಬಲ್ಲಾಳ್ ಉದ್ಘಾಟಿಸಿ ಮಾತನಾಡಿ, ಸುಗಮ ಸಂಗೀತದ ರಸಸ್ವಾದನೆಯಿಂದ ಮನುಷ್ಯ ತನ್ನ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಲು ಸಾಧ್ಯವಿದೆ.
ಪ್ರಸ್ತುತ ಸಿನಿಮಾ ಸಂಗೀತದ ಅಬ್ಬರದ ನಡುವೆ ಇಂಥಹ ಮುದನೀಡುವ ಸುಗಮ ಸಂಗೀತ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ಕಡಿಮೆಯಾಗುತ್ತಿದೆ ಎಂದರು.
ಹಿರಿಯ ಸಂಗೀತ ನಿರ್ದೇಶಕ ನಾದವೈಭವಂ ಉಡುಪಿ ವಾಸುದೇವ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನನ್ನ ಹಾಡು ನನ್ನದು ಸಂಗೀತ ವೇದಿಕೆಯು ಕಳೆದ ಮೂರು ವರ್ಷಗಳಿಂದ ನೂರಾರು ಹಿರಿಯ,ಕಿರಿಯ ಸಂಗೀತ ಕಲಾವಿದರನ್ನು ಬೆಳಕಿ ತರುವ ಪ್ರಯತ್ನ ಯಶಸ್ವಿಯಾಗಿದೆ ಎಂದರು.
ಹಿರಿಯ ಸಂಗೀತ ವಿದ್ವಾಂಸೆ ಮಾಧವಿ ಭಟ್ ಪೆರ್ಣಂಕಿಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಿರಿಯ ತಾಂತ್ರಿಕ ಮೇಲ್ವಿಚಾರಕಿ ಪೂರ್ಣಿಮ, ಆಕಾಶವಾಣಿ ಕಲಾವಿದೆ ಭಾರತಿ ಟಿ.ಕೆ., ಮಲಬಾರ್ ಗೋಲ್ಡ್ ಎಂಡ್ ಡೈಮಂಡ್ ಸಂಸ್ಥೆಯ ಅಧಿಕಾರಿ ರಾಘವೇಂದ್ರ ನಾಯಕ್ ಉಪಸ್ಥಿತರಿದ್ದರು.