ಕೆನರಾ ಬ್ಯಾಂಕ್ ನೊಂದಿಗೆ ಸಿಂಡಿಕೇಟ್ ಬ್ಯಾಂಕ್ ವಿಲೀನ
ನವದೆಹಲಿ: ಕರ್ನಾಟಕದ ಕೆನರಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್ಗಳನ್ನು ವಿಲೀನ ಮಾಡಲು ಸರ್ಕಾರ ಮುಂದಾಗಿದೆ.ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್, 2017 ರಲ್ಲಿ 17 ಸಾರ್ವಜನಿಕ ವಲಯದ ಬ್ಯಾಂಕ್ಗಳಿದ್ದವು. ಇದನ್ನು 13ಕ್ಕೆ ಇಳಿಸುವ ನಿಟ್ಟಿನಲ್ಲಿ ಈ ವಿಲೀನ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದರು.
ಪಂಜಾಬ್ ನ್ಯಾಷನಲ್ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಹಾಗೂ ಯುನೈಟೆಡ್ ಬ್ಯಾಂಕ್ ವಿಲೀನವಾದರೆ ಇಂಡಿಯನ್ ಬ್ಯಾಂಕ್ ಜೊತೆ ಅಲಹಾಬಾದ್ ಬ್ಯಾಂಕ್ ವಿಲೀನವಾಗಲಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಆಂಧ್ರ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್ ವಿಲೀನವಾಗಲಿದೆ.
ವಸೂಲಾಗದ ಸಾಲ(ಎನ್ಪಿಎ) ಪ್ರಮಾಣ 8.65 ಲಕ್ಷ ಕೋಟಿಯಿಂದ 7.90 ಲಕ್ಷ ಕೋಟಿ ರೂ.ಗೆ ಇಳಿಕೆಯಾಗಿದೆ. ಆರ್ಥಿಕತೆಯನ್ನು 5 ಟ್ರಿಲಿಯನ್ ಗುರಿ ತಲುಪಲು ಕೇಂದ್ರ ಸರಕಾರ ಎಲ್ಲ ರೀತಿಯ ಆರ್ಥಿಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ 10 ಬ್ಯಾಂಕ್ ಗಳ ವಿಲೀನ ಪ್ರಕ್ರಿಯೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
1906ರಲ್ಲಿ ಮಂಗಳೂರಿನಲ್ಲಿ ಅಮ್ಮೆಂಬಳ ಸುಬ್ಬರಾವ್ ಪೈ ಕೆನರಾ ಬ್ಯಾಂಕ್ ಆರಂಭಿಸಿದ್ದರೆ, ಸಿಂಡಿಕೇಟ್ ಬ್ಯಾಂಕ್ ಅನ್ನು ಉಪೇಂದ್ರ ಅನಂತ್ ಪೈ, ಟಿಎಂಎ ಪೈ, ವಾಮನ ಕುಡುವ 1924 ರಲ್ಲಿ ಮಣಿಪಾಲದಲ್ಲಿ ಆರಂಭಿಸಿದ್ದರು. ಕಾರ್ಪೋರೇಷನ್ ಬ್ಯಾಂಕ್ ಅನ್ನು 1906 ರಲ್ಲಿ ಖಾನ್ ಬಹದ್ದೂರ್ ಹಾಜಿ ಅಬ್ದುಲ್ಲಾ ಮಂಗಳೂರಿನಲ್ಲಿ ಸ್ಥಾಪಿಸಿದ್ದರು. ಈ ಹಿಂದೆ ಮಂಗಳೂರು ಮೂಲದ ವಿಜಯ್ ಬ್ಯಾಂಕ್ ಬ್ಯಾಂಕ್ ಆಫ್ ಬರೋಡಾದ ಜೊತೆ ವಿಲೀನಗೊಂಡಿತ್ತು.