ಕಳೆದ 7 ವರ್ಷಗಳಲ್ಲೇ ಭಾರತದ ಜಿಡಿಪಿ ಬೆಳವಣಿಗೆ ದರ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿತ!

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕಿನಿಂದ ಕೇಂದ್ರ ಸರ್ಕಾರ ಭಾರಿ ಮೊತ್ತದ ಹಣ ಪಡೆದ ವಿಚಾರವಾಗಿ ವಿಪಕ್ಷಗಳು ಆರ್ಥಿಕ ಕುಸಿತದ ಕುರಿತು ವಾಗ್ದಾಳಿ ನಡೆಸುತ್ತಿರುವ ಬೆನ್ನಲ್ಲೇ ಇದೀಗ ಭಾರತದ ಜಿಡಿಪಿ ಬೆಳವಣಿಗೆ ದರ ಕಳೆದ 7 ವರ್ಷಗಳಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದಿದೆ.

ಶುಕ್ರವಾರ ಬಿಡುಗಡೆಯಾದ ಕೇಂದ್ರ ಅಂಕಿಅಂಶ ಕಚೇರಿಯ (ಸಿಎಸ್‌ಒ) ಜಿಡಿಪಿ ಬೆಳವಣಿಗೆ ದರ ಕುರಿತ  ಇತ್ತೀಚಿನ ಅಂಕಿಅಂಶಗಳ ಪ್ರಕಾರ ಏಪ್ರಿಲ್-ಜೂನ್ 2019 ರ ಭಾರತದ ಜಿಡಿಪಿ ಬೆಳವಣಿಗೆಯ ದರವು ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಕೆ ಮಾಡಿದರೆ ಜಿಡಿಪಿ ಅಭಿವೃದ್ದಿ ದರ ಬೆಳವಣಿಗೆಯಲ್ಲಿ ಶೇ.5ಕ್ಕೆ ಇಳಿಕೆಯಾಗಿದೆ ಎಂದು ತಿಳಿದುಬಂದಿದೆ. 

ಪ್ರಮುಖವಾಗಿ ದೇಶೀಯ ಉತ್ಪಾದನಾ ವಲಯದ ಮೇಲೆ ತೀವ್ರ ನಕಾರಾತ್ಮಕ ಪರಿಣಾಮ ಉಂಟಾಗಿದ್ದು, ದೇಶೀಯ ಉತ್ಪಾದನಾ ವಲಯ ಸಾಕಷ್ಟು ಪ್ರಮಾಣದಲ್ಲಿ ಕುಸಿದಿದೆ. ಈ ನಿಧಾನಗತಿಯ ಬೆಳವಣಿಗೆಗೆ ಪ್ರಮುಖ ಕಾರಣ ಉತ್ಪಾದನಾ ವಲಯದಲ್ಲಿನ ತೀವ್ರ ಕುಸಿತ ಮತ್ತು ಕೃಷಿ ಉತ್ಪಾದನೆಯ ಕುಸಿತ ಎಂದು ತಿಳಿದುಬಂದಿದೆ. ಕೃಷಿ ಮತ್ತು ಉತ್ಪಾದನಾ ಕ್ಷೇತ್ರಗಳಲ್ಲಿನ ಕಳಪೆ ಸಾಧನೆಯಿಂದಾಗಿ ಬೆಳವಣಿಗೆಯ ದರವು ಜನವರಿ-ಮಾರ್ಚ್ 2018-19ರಲ್ಲಿ ಐದು ವರ್ಷಗಳ ಕನಿಷ್ಠ 5.8 ಕ್ಕೆ ಇಳಿದಿದೆ. ಇದು 20 ತ್ರೈಮಾಸಿಕಗಳಲ್ಲಿ ಅತ್ಯಂತ ಕಡಿಮೆ ಬೆಳವಣಿಗೆಯ ದರವಾಗಿದೆ ಮತ್ತು ಸುಮಾರು ಎರಡು ವರ್ಷಗಳ ನಂತರ ಭಾರತದ ಜಿಡಿಪಿ ಅಭಿವೃದ್ಧಿ ದರ ಚೀನಾಕ್ಕಿಂತ ಹಿಂದುಳಿದಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಹಿಂದೆ ಯುಪಿಎ ಎರಡನೇ ಅವಧಿಯಲ್ಲಿ ಅಥವಾ ಜನವರಿ-ಮಾರ್ಚ್ 2013-14ರ ಕೊನೆಯ ತ್ರೈಮಾಸಿಕದಲ್ಲಿ ಈ ಪ್ರಮಾಣವು ಶೇಕಡಾ 5.3 ರಷ್ಟಿತ್ತು. 2018-19ರ ಆರ್ಥಿಕ ವರ್ಷದಲ್ಲಿ ಒಟ್ಟು ದೇಶೀಯ ಉತ್ಪನ್ನದ ಬೆಳವಣಿಗೆ ಶೇಕಡಾ 6.8 ರಷ್ಟಿದ್ದು, ಹಿಂದಿನ ಹಣಕಾಸು ವರ್ಷದಲ್ಲಿ ಇದು 7.2 ಶೇಕಡಾಕ್ಕಿಂತ ಕಡಿಮೆಯಾಗಿದೆ. ಜಿಡಿಪಿ ಬೆಳವಣಿಗೆ 2014-15 ರಿಂದ ನಿಧಾನವಾಗಿದ್ದು, ಹಿಂದಿನ 2013-14ರಲ್ಲಿ ಕನಿಷ್ಠ ಶೇ 6.4 ರಷ್ಟಿತ್ತು ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!