‘ಫಿಟ್‌ ಇಂಡಿಯಾ ಆಂದೋಲನ’ಕ್ಕೆ ಮೋದಿ ಚಾಲನೆ

ನವದೆಹಲಿ: ಜನರು ಸ್ವಸ್ಥ ಮನಸ್ಸು ಮತ್ತು ಸ್ವಸ್ಥ ದೇಹ ಹೊಂದಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಇಲ್ಲಿನ ‘ಇಂದಿರಾ ಗಾಂಧಿ ಸ್ಟೇಡಿಯಂ ಕಾಂಪ್ಲೆಕ್ಸ್‌’ನಲ್ಲಿ ಗುರುವಾರ ಬೆಳಿಗ್ಗೆ ‘ಫಿಟ್ ಇಂಡಿಯಾ ಆಂದೋಲನ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಪ್ರತಿಯೊಬ್ಬರೂ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಕ್ರೀಡೆಗೆ ಫಿಟ್‌ನೆಸ್ ಜತೆ ನೇರ ಸಂಬಂಧವಿದೆ. ಆರೋಗ್ಯಕರ ಜೀವನ ನಡೆಸಲು ಫಿಟ್‌ನೆಸ್ ಅಗತ್ಯ. ಹೀಗಾಗಿ ‘ಫಿಟ್‌ ಇಂಡಿಯಾ ಆಂದೋಲನ’ಕ್ಕೆ ಚುರುಕುಮುಟ್ಟಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಪ್ರಧಾನಿ ಹೇಳಿದರು.

‘ಇಂದು ಮೇಜರ್ ಧ್ಯಾನ್ ಚಂದ್ ಎಂಬ ಮಹಾನ್ ಕ್ರೀಡಾಪಟು ಜನಿಸಿದ ದಿನ. ಅವರು ತಮ್ಮ ಫಿಟ್‌ನೆಸ್, ಶಕ್ತಿ ಮತ್ತು ಹಾಕಿ ಸ್ಟಿಕ್‌ನಿಂದ ಜಗತ್ತನ್ನೇ ಬೆರಗುಗೊಳಿಸಿದವರು’ ಎಂದು ಮೋದಿ ಶ್ಲಾಘಿಸಿದರು.

ಜನರನ್ನು ಕ್ರೀಡೆ ಮತ್ತು ದೈಹಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಪ್ರೇರೇಪಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿರುವ ‘ಫಿಟ್ ಇಂಡಿಯಾ ಆಂದೋಲನ’ ದೇಶದಾದ್ಯಂತ ನಡೆಯುತ್ತಿದೆ. ಈ ಆಂದೋಲನದಲ್ಲಿ ಭಾಗವಹಿಸುವಂತೆ ಪ್ರಧಾನಿಯವರು ಈ ಹಿಂದೆ ‘ಮನದ ಮಾತು’ ರೇಡಿಯೊ ಕಾರ್ಯಕ್ರಮದಲ್ಲಿ ದೇಶದ ಜನತೆಗೆ ಕರೆ ನೀಡಿದ್ದರು.

ಆಂದೋಲನದ ಯಶಸ್ಸಿಗಾಗಿ ಇದೇ 23ರಂದು ಕ್ರೀಡಾ ಸಚಿವ ಕಿರಣ್ ರಿಜಿಜು ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನೂ ರಚಿಸಲಾಗಿತ್ತು. ಸರ್ಕಾರಿ ಅಧಿಕಾರಿಗಳು, ಭಾರತ ಒಲಿಂಪಿಕ್ ಸಂಸ್ಥೆಯ (ಐಒಎ), ನ್ಯಾಷನಲ್ ಸ್ಪೋರ್ಟ್ಸ್ ಫೆಡರೇಷನ್‌ಗಳು, ಫಿಟ್‌ನೆಸ್‌ ಪೋಷಕರು ಮತ್ತು ಖಾಸಗಿ ಸಂಸ್ಥೆಗಳ ಪ್ರಮುಖರು ಸಮಿತಿಯಲ್ಲಿ ಇದ್ದಾರೆ.

Leave a Reply

Your email address will not be published. Required fields are marked *

error: Content is protected !!