ಫಾ.ಮಹೇಶ್ ಆತ್ಮಹತ್ಯೆ: ತನಿಖೆ ಸಿಬಿಐಗೆ ವಹಿಸಲು ಆಗ್ರಹ
ಶಿರ್ವ: ಫಾ. ಮಹೇಶ್ ಡಿಸೋಜಾ ಆತ್ಮಹತ್ಯೆ ಪ್ರಕರಣವನ್ನು ಪೊಲೀಸ್ ಇಲಾಖೆಯ ತನಿಖೆಯಿಂದ ನಮಗೆ ಯಾವುದೇ ನಂಬಿಕೆ ಇಲ್ಲ. ಆದ್ದರಿಂದ ಈ ನಿಗೂಢ ಪ್ರಕರಣವನ್ನು ಸಿಐಡಿ ಅಥವಾ ಸಿಬಿಐಯಿಂದ ತನಿಖೆ ಮಾಡಬೇಕೆಂದು ಪ್ರತಿಭಟನಕಾರರು ಉಡುಪಿ ಜಿಲ್ಲಾ ಎಸ್ಪಿ ನಿಶಾ ಜೇಮ್ಸ್ ಗೆ ಆಗ್ರಹಿಸಿದರು.
ಶಿರ್ವ ದೇವಾಲಯದ ವಠಾರದಲ್ಲಿ ನಡೆಯುತ್ತಿರುವ ಪ್ರತಿಭಟನಾ ಸ್ಥಳಕ್ಕೆ 12.40 ಕ್ಕೆ ಆಗಮಿಸಿದ ಎಸ್ಪಿ ನಿಶಾ ಜೇಮ್ಸ್, ಆಕ್ರೋಶಿತ ಫಾ.ಮಹೇಶ್ ಭಕ್ತರಿಗೆ ಈ ತನಕ ಯಾರು ಕೂಡ ಆತ್ಮಹತ್ಯೆ ಪ್ರಕರಣದಲ್ಲಿ ಸಂಶಯವಿದೆಂದು ದೂರು ದಾಖಲಿಸಿಲ್ಲ. ಫಾ.ಮಹೇಶ್ ಕುಟುಂಬದವರೂ ಕೂಡ ಈ ಪ್ರಕರಣದಲ್ಲಿ ಯಾರ ಮೇಲೂ ಸಂಶಯವಿದೆಂದು ಅವರು ದೂರು ದಾಖಲಿಸಿಲ್ಲ. ಆದ್ದರಿಂದ ಪೊಲೀಸ್ ಇಲಾಖೆ ತನ್ನ ತನಿಖೆಯನ್ನು ಮುಂದುವರಿಸುತ್ತಿದೆ. ಕೆಲವೊಂದು ವಿಚಾರವನ್ನು ತನಿಖೆ ದೃಷ್ಟಿಯಿಂದ ನೀಡಲು ಸಾಧ್ಯವಿಲ್ಲವೆಂದು ಎಸ್ಪಿ ನಿಶಾ ಹೇಳಿದರು.
ಫಾ. ಮಹೇಶ್ ಅವರು ಉಪಯೋಗಿಸುತ್ತಿದ್ದ 2 ಮೊಬೈಲ್ ವಶ ಪಡಿಸಿಕೊಂಡು ಅದನ್ನು ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಲಾಯಕ್ಕೆ ಕಳುಹಿಸಲಾಗಿದೆ. ಅದರ ವರದಿ ಇನ್ನೂ ನಮ್ಮ ಕೈ ಸೇರಿಲ್ಲ. ಶವ ಮಹಜರು ಮಾಡಿದಾಗ ಮೇಲ್ನೊಟಕ್ಕೆ ಆತ್ಮಹತ್ಯೆ ಎಂದು ಪ್ರಾಥಮಿಕ ವರದಿಯಿ೦ದ ತಿಳಿದು ಬಂದಿದೆ. ಧರ್ಮಗುರುಗಳು ಆತ್ಮಹತ್ಯೆ ಮಾಡಿದ ಸಂಜೆ ಶಾಲೆಯ ಸಿಸಿಟಿ ಸ್ಥಬ್ತವಾಗಿತ್ತು. ಆದರೆ ಧರ್ಮ ಗುರುಗಳ ನಿವಾಸದ ಸಿಸಿಟಿವಿ ಚಾಲನೆಯಲ್ಲಿತ್ತು. ಅದರಲ್ಲಿ ಫಾ. ಮಹೇಶ್ ರೋಪ್ ತೆಗೆದುಕೊಂಡು ಹೋಗಿರುವುದು ದಾಖಲಾಗಿದೆಂದು ಈ ಸಂದರ್ಭ ಪ್ರತಿಭಟನಾಕಾರರಿಗೆ ತಿಳಿಸಿದರು.
ಫಾ.ಮಹೇಶ್ ಅವರ ಸಾವಿನ ಬಗ್ಗೆ ಯಾರಿಗಾದರೂ ಸಂಶಯವಿದ್ದರೆ ಯಾರು ಕೂಡ ತಮ್ಮ ಮಾಹಿತಿ ಪೊಲೀಸ್ಗೆ ನೀಡಬಹುದು. ತಾವೇ ಸ್ವತ: ಶಿರ್ವ ಠಾಣೆಯಲ್ಲಿ ದೂರು ದಾಖಲಿಸಬಹುದೆಂದು ಆಕ್ರೋಶಿತರಿಗೆ ತಿಳಿಸಿದರು.
ಈ ನಡುವೆ ಸ್ಥಳಕ್ಕಾಗಮಿಸಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರೂ, ಧರ್ಮಗುರುಗಳ ಸಾವಿಗೆ ನ್ಯಾಯ ಸಿಗುವವರೆಗೆ ನಾವು ಪ್ರತಿಭಟನೆ ನಿಲ್ಲಿಸುವುದಿಲ್ಲವೆಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ.