ನಮಗೆ ನ್ಯಾಯ ದೊರಕಿಸಿಕೊಡಿ ಫಾ.ಮಹೇಶ್ ತಾಯಿಯ ಆಡಿಯೊ ವೈರಲ್ ?


ಶಿರ್ವ :ಯುವ ಧರ್ಮಗುರು ಮತ್ತು ಡಾನ್ ಬಾಸ್ಕೊ ಆಂಗ್ಲ ಮಾಧ್ಯಮ ಶಾಲೆಯ ಪ್ರಿನ್ಸಿಪಾಲ್ ಫಾ. ಮಹೇಶ್ ಡಿಸೋಜರ ಆತ್ಮಹತ್ಯೆಯ ಪ್ರಕರಣಕ್ಕೆ ಮಹತ್ವದ ತಿರುವು ದೊರಕಿದ್ದು, ಫಾ. ಮಹೇಶ್ ಅವರ ತಾಯಿಗೆ ಪ್ರತಿಭಟನಾಕಾರರೋರ್ವರು ಫೋನ್ ಸಂಭಾಷಣೆ ಮಾಡಿದ ಆಡಿಯೊ ವೈರಲ್ ಆಗುತ್ತಿದೆ. 

ಇಂದು ಬೆಳಗ್ಗಿನಿಂದಲೇ ಶಿರ್ವ ದೇವಾಲಯದ ವಠಾರದಲ್ಲಿ ಫಾ. ಮಹೇಶ್ ಡಿಸೋಜರವರ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರತಿಭಟನೆ ಮಾಡುತ್ತಿದ್ದು, ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು, ಪ್ರಧಾನ ಧರ್ಮಗುರುಗಳು ಮತ್ತು ಉಡುಪಿ ಜಿಲ್ಲಾ ಎಸ್ಪಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಫಾ. ಮಹೇಶ್ ಡಿಸೋಜರ ಆತ್ಮಹತ್ಯೆಯ ತನಿಖೆಯ ಬಗ್ಗೆ ಯಾವುದೇ ಸಂಶಯ ಇಲ್ಲ ಮತ್ತು ಕೇಸನ್ನು ಮುಂದುವರಿಸಲು ತಮಗೆ ಇಷ್ಟವಿಲ್ಲ ಎಂದು ಫಾ. ಮಹೇಶ್ ಡಿಸೋಜ ಅವರ ಮನೆಯವರು ಹೇಳಿದ್ದರೆ೦ದು ಪ್ರತಿಭಟನಾಕಾರರಿಗೆ ತಿಳಿಸಿದರು.

ಆದರೆ ಪ್ರತಿಭಟನಾಕಾರರಲ್ಲಿ ಓರ್ವರು ಫಾ. ಮಹೇಶ್ ಡಿಸೋಜರ ಅವರ ತಾಯಿಗೆ ಸಂಪರ್ಕ ಮಾಡಿದ್ದು ಎನ್ನಲಾದ  ಫೋನ್ ಸಂಭಾಷಣೆಯ ಆಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಈಗ ವೈರಲ್ ಆಗುತ್ತಿದೆ.
ಪ್ರತಿಭಟನಾಕಾರರು ಫಾ. ಮಹೇಶ್ ಡಿಸೋಜ ಅವರ ತಾಯಿಗೆ ಫೋನ್ ಸ೦ಪರ್ಕ ಮಾಡುತ್ತಾ, ನಾನು ಶಿರ್ವ ದಿಂದ  ಮಾತನಾಡುತ್ತಿದ್ದೇನೆ. ನಿಮ್ಮ ಮಗನ ಸಾವಿನ ಬಗ್ಗೆ ಪ್ರತಿಭಟನೆಯನ್ನು ಮಾಡುತ್ತಿದ್ದೇವೆ. ಮಾತ್ರವಲ್ಲದೆ ನೀವು ಈಗಾಗಲೇ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದಾರ? ಎಂದು ಕೇಳಿದ್ದು, ಅದಕ್ಕೆ ಫಾ. ಮಹೇಶ್ ಡಿಸೋಜರವರ ತಾಯಿ ಉತ್ತರಿಸುತ್ತಾ, ನಾವು ನಮ್ಮ ಮಗನನ್ನು ಉಡುಪಿ ಧರ್ಮ ಪ್ರಾಂತ್ಯಕ್ಕೆ ಸಮರ್ಪಿಸಿದ್ದೇವೆ. ನಾವು ಮುಂದಕ್ಕೆ ಹೋಗುವುದಿಲ್ಲ. ಬದಲಾಗಿ ನೀವೇ ಮುಂದಕ್ಕೆ ಹೋಗಿ. ಅವರು ನಮ್ಮ ಮಗ ಹೌದು. ನಮ್ಮ ಮಗನ ಮೇಲೆ ನಮಗೆ ಕನಿಕರವೂ ಇದೆ.

ಆ ವೇಳೆ ನಮ್ಮ ಮಗನಿಗೆ ಏನಾಯಿತೋ ಗೊತ್ತಿಲ್ಲ. ನಿಮ್ಮ ವ್ಯವಸ್ಥೆಯಲ್ಲಿ ನಮಗೆ ನ್ಯಾಯ ದೊರಕಿಸಿಕೊಡಿ  ಎಂದು ಧರ್ಮಾಧ್ಯಕ್ಷ ರಲ್ಲಿ ಹೇಳಿದ್ದೇವೆ ಎಂದು ಹೇಳಿದ್ದಾರೆ. ಮುಂದುವರಿಸಿ ಫಾ. ಮಹೇಶ್ ಜನರಿಗೋಸ್ಕರ ಅವರ ಸೇವೆ ಸಲ್ಲಿಸಿದ್ದು, ಧರ್ಮಗುರುಗಳಾಗಿ ದೇವಾಲಯದಲ್ಲಿ ಸೇವೆ ಸಲ್ಲಿಸುತ್ತಿರುವಾಗ ಹಿರಿಯ ಧರ್ಮಗುರುಗಳು ಅವರಿಗೆ ತಿಳುವಳಿಕೆ ನೀಡಬೇಕು ಎಂದಿದ್ದಾರೆ.

ಪ್ರತಿಭಟನಾಕಾರ ಮಾತನಾಡುತ್ತಾ, ನೀವು ಬಿಷಪ್ ರವರ ಬಳಿ ಏನು ಹೇಳಿದ್ದೀರಿ ಎಂದು ಕೇಳಿದ ಪ್ರಶ್ನೆಗೆ,  ಫಾ.ಮಹೇಶ್ ಡಿಸೋಜ ಅವರ ತಾಯಿ ಹೀಗೆ ಉತ್ತರಿಸುತ್ತಾರೆ. ” ನಾವು ಬಿಷಪ್ ರೊಂದಿಗೆ ಹೇಳಿದ್ದು ಇಷ್ಟೆ.. ನಾವು ನಮ್ಮ ಮಗನನ್ನು ನಿಮಗೆ ಸಮರ್ಪಿಸಿದ್ದೇವೆ. ಮುಂದಕ್ಕೆ ಹೋಗಲು ನಮ್ಮ ಬಳಿ ಏನೂ ಇಲ್ಲ. ನಮಗೆ ನ್ಯಾಯ ದೊರಕಿಸಿ ಕೊಡಿ.

ಪ್ರತಿಭಟನಾಕಾರ ತನ್ನ ಮಾತನ್ನು ಮುಂದುವರಿಸುತ್ತಾ, ಇಷ್ಟರವರೆಗೆ ಫಾ. ಆತ್ಮಹತ್ಯೆ ಪ್ರಕರಣದ ಬಗ್ಗೆ ಎಫ್ಐಆರ್ ದಾಖಲಾಗಿಲ್ಲ. ಕೇಸ್ ಕೂಡ ರಿಜಿಸ್ಟರ್ ಆಗಿಲ್ಲ. ನಾವು  ಸಿಬಿಐ, ಸಿಐಡಿ ತನಿಖೆ ನಡೆಸಬೇಕೆಂಬ ಹೋರಾಟ ಮಾಡಲು ನಿರ್ಧರಿಸುತ್ತಿದ್ದೇವೆ. ನೀವು ನಮಗೆ ಬೆಂಬಲಿಸುತ್ತೀರಾ? ಎಂದು ಕೇಳಿದ ಪ್ರಶ್ನೆಗೆ ಅವರ ತಾಯಿ, ನಾವು ನಿಮಗೆ ಬೆಂಬಲ ಕೊಡುತ್ತೇವೆ. ಆದರೆ ಯಾವುದಕ್ಕೂ ಸಹಿ ಮಾಡುವುದಿಲ್ಲ. ನಾವು ದೈಹಿಕವಾಗಿ ಬಹಳಷ್ಟು ನೊಂದಿದ್ದೇವೆ. ಧರ್ಮಕ್ಷೇತ್ರದಿಂದ ನಮಗೆ ನ್ಯಾಯ ಬೇಕು. ಅಷ್ಟು ಮಾತ್ರ ಹೇಳಬಲ್ಲೆ. ಬೇರೇನನ್ನು ಹೇಳಲು ಅಸಾಧ್ಯ. ನಮ್ಮ ಮನೆಯಲ್ಲಿ ಹಲವು ಸಮಸ್ಯೆಗಳಿದ್ದು, ಆ ಸಮಸ್ಯೆಗಳನ್ನು ಎದುರಿಸಲು ಕಷ್ಟಪಡುತ್ತಿರುವಾಗ ಪೊಲೀಸ್ ಠಾಣೆ, ನ್ಯಾಯಾಲಯ ಎಂದು ಅಲೆದಾಡಲು ನಮಗೆ ಸಾಧ್ಯವಿಲ್ಲ ಎಂದಿದ್ದಾರೆ. 

ಫಾ. ಮಹೇಶ್ ಡಿಸೋಜಾ ಅವರು ಆತ್ಮಹತ್ಯೆ ಮಾಡಿ 22 ದಿನಗಳಾದರೂ ಸರಿಯಾಗಿ ತನಿಖೆ ನಡೆಸದೇ ಇದ್ದುದಕ್ಕೆ ಪೊಲೀಸ್ ಇಲಾಖೆ ಮತ್ತು ಧರ್ಮಕ್ಷೇತ್ರದ ಪ್ರಮುಖರ ಬಗ್ಗೆ ಪ್ರತಿಭಟನಾಕಾರರು ಬೇಸರ ಮತ್ತು ತೀವ್ರ ಆಕ್ರೋಶ ವ್ಯಕ್ತಪಡಿಸಿ ರವಿವಾರ ಪ್ರತಿಭಟನೆ ನಡೆಸಿದ್ದಾರೆ.

1 thought on “ನಮಗೆ ನ್ಯಾಯ ದೊರಕಿಸಿಕೊಡಿ ಫಾ.ಮಹೇಶ್ ತಾಯಿಯ ಆಡಿಯೊ ವೈರಲ್ ?

  1. I wholeheartedly appreciate and admire the courage and the personal conviction of the mother of Fr Mahesh, as regards her befitting response to the one who approached her over the telephone.

Leave a Reply

Your email address will not be published. Required fields are marked *

error: Content is protected !!