ಕಾಪು ಜೇಸಿಐನ ಆಶ್ರಯದಲ್ಲಿ ಮುದ್ದುಕೃಷ್ಣ ಸ್ಪರ್ಧೆ
ಕಾಪು : ಕಾಪು ಜೇಸಿಐನ ಆಶ್ರಯದಲ್ಲಿ ಜಯಲಕ್ಷ್ಮೀ ಜ್ಯುವೆಲ್ಲರ್‍ಸ್‌ನ ಸಹಭಾಗಿತ್ವದೊಂದಿಗೆ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಸಭಾವನದಲ್ಲಿ ಶನಿವಾರ ಜರಗಿದ ಮುದ್ದುಕೃಷ್ಣ ವೇಷ ಸ್ಪರ್ಧೆಯನ್ನು ಜೇಸಿಐ ಪೂರ್ವ ವಲಯಾಧ್ಯಕ್ಷ ಸಂತೋಷ್ ಜಿ. ಅವರು ಉದ್ಘಾಟಿಸಿದರು.
ಬಳಿಕ ಅವರು ಮಾತನಾಡಿ, ಜೇಸಿಐ ವಲಯ ಹದಿನೈದರ ಪ್ರತಿಷ್ಟಿತ ಘಟಕವಾದ ಜೇಸಿಐ ಕಾಪು ಸತತ 23 ವರ್ಷಗಳಿಂದ ನಿರಂತರವಾಗಿ ಮುದ್ದುಕೃಷ್ಣ ವೇಷ ಸ್ಪರ್ಧೆಯನ್ನು ನಡೆಸಿಕೊಂಡು ಬರುವ ಮೂಲಕ ಮಕ್ಕಳಲ್ಲಿ ಧಾರ್ಮಿಕತೆಯ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದೆ. ಇಂತಹ ಮಾದರಿಯ ಸ್ಪರ್ಧೆಯಿಂದಾಗಿ ಮಕ್ಕಳಿಗೆ ಎಳೆವೆಯಲ್ಲಿಯೇ ಕೃಷ್ಣನ ಜೀವನಾದರ್ಶವನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಜೇಸಿಐನ ನಿಕಟ ಪೂರ್ವ ವಲಯಾಧ್ಯಕ್ಷ ರಾಕೇಶ್ ಕುಂಜೂರು, ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಮೋಹನ್ ಬಂಗೇರ, ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಶೇಖರ್ ಆಚಾರ್ಯ, ಉಪ್ಪೂರು ಶಾರದೋತ್ಸವ ಸಮಿತಿಯ ಅಧ್ಯಕ್ಷ ಪದ್ಮನಾಭ ಉಪ್ಪೂರು, ಉದ್ಯಮಿ ಕಿರಣ್ ಕೋರ್‍ಡ ಅತಿಥಿಗಳಾಗಿ ಭಾಗವಹಿಸಿದ್ದರು.
ಮೂರು ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ 100ಕ್ಕೂ ಅಧಿಕ ಮಂದಿ ಸ್ಪರ್ಧಾಳುಗಳು ಭಾಗವಹಿಸಿದ್ದರು. ಕಾರ್ಯಕ್ರಮ ನಿರ್ದೇಶಕ ಜಗದೀಶ್ ಬಂಗೇರ, ಕಾಪು ಜೇಸಿಐನ ನಿಕಟ ಪೂರ್ವ ಅಧ್ಯಕ್ಷ ರಮೇಶ್ ನಾಯ್ಕ್, ಜೇಸಿರೆಟ್ ಅಧ್ಯಕ್ಷೆ ಶ್ರುತಿ ಶೆಟ್ಟಿ, ಯುವ ಜೇಸಿ ಅಧ್ಯಕ್ಷ ಆದಿತ್ಯ ಗುರ್ಮೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.