ಕಾರ್ಕಳ :ದಲಿತರ ಕುಂದುಕೊರತೆಗೆ ಸ್ಪಂದಿಸದ ಅಧಿಕಾರಿ ವಿರುದ್ಧ ಆಕ್ರೋಶ
ಕಾರ್ಕಳ : ಮೂರು ತಿಂಗಳಿಗೊಮ್ಮೆ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಜನಾಂಗದ ಕುಂದುಕೊರತೆ ನಡೆಸಬೇಕೆನ್ನುವ ಸರಕಾರದ ಆದೇಶದ ಮಾತ್ರ ಕಾಟಾಚಾರಕ್ಕಾಗಿ ಸಭೆ ನಡೆಸಬೇಡಿ, ದಲಿತರ ಸಮಸ್ಯೆಗಳಿಗೆ ಸ್ಪಂದಿಸದೇ ಬೇಜವಾಬ್ದಾರಿ ತೋರುವ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ವಿಜಯಕುಮಾರ್ ಅವರನ್ನು ತಕ್ಷಣವೇ ಇಲ್ಲಿಂದ ವರ್ಗಾವಣೆ ಮಾಡಬೇಕು ಎಂದು ದಲಿತ ಮುಖಂಡರು ದಲಿತ ಕುಂದುಕೊರತೆ ಸಭೆಯಲ್ಲಿ ತೀವೃ ಆಕ್ರೋಶ ವ್ಯಕ್ತಪಡಿಸಿದರು.
ಶನಿವಾರ ಕಾರ್ಕಳ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ಪುರಂದರ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ನಡೆದ ಎಸ್ಸಿಎಸ್ಟಿ ಕುಂದುಕೊರತೆ ಸಭೆಯಲ್ಲಿ ತಾಲೂಕು ಅಂಬೇಡ್ಕರ್ ಭವನ ನಿರ್ಮಾಣ, ಹಾಸ್ಟೆಲ್ ಸಮಸ್ಯೆ ಕುರಿತು ಇಲಾಖೆಯ ಅಧಿಕಾರಿ ಗಮನಹರಿಸುತ್ತಿಲ್ಲ, ಸಭೆಯಲ್ಲಿ ಈ ಹಿಂದೆ ಪ್ರಸ್ತಾಪವಾಗಿರುವ ವಿಷಯಗಳ ಪಾಲನಾ ವರದಿಯ ಅನುಷ್ಠಾನವಾಗುತ್ತಿಲ್ಲ ಎಂದು ದಲಿತ ಮುಖಂಡರಾದ ಶ್ರೀನಿವಾಸ ಕಾರ್ಲ, ಅಣ್ಣಪ್ಪ ನಕ್ರೆ, ಉಮೇಶ್ ಮಿಯ್ಯಾರು ಮುಂತಾದವರು ಇಲಾಖಾಧಿಕಾರಿ ವಿರುದ್ದ ಆರೋಪಿಸಿದರು. ಅಂಬೇಡ್ಕರ್ ಭವನ ನಿರ್ಮಾಣ ಮಾಡುವುದಾಗಿ ಕಳೆದ ೩ ವರ್ಷಗಳಿಂದ ಭರವಸೆ ಮಾತ್ರ ನೀಡುತ್ತಿದ್ದೀರಿ, ಪ್ರತೀ ಬಾರಿಯೂ ಇದರ ಬಗ್ಗೆ ಚರ್ಚೆಯಾಗುತ್ತಿದೆಯೇ ಹೊರತು ಕಟ್ಟಡ ಕಾಮಗಾರಿಯೇ ಆರಂಭವಾಗಿಲ್ಲ, ಸರಕಾರದ ಮಟ್ಟದ ಅಧಿಕಾರಿಗಳಾಗಿ ನಿಮ್ಮಿಂದ ಅಂಬೇಡ್ಕರ್ ಭವನ ನಿರ್ಮಾಣ ಸಾಧ್ಯವಾಗದಿದ್ದರೆ ಸಭೆಯಲ್ಲಿ ನಿರ್ಣಯಮಾಡಿ ನಾವೇ ಕಟ್ಟಡ ನಿರ್ಮಿಸುತ್ತೇವೆ ಎಂದು ಅಣ್ಣಪ್ಪ ನಕ್ರೆ ಅಧಿಕಾರಿಗಳಿಗೆ ಸವಾಲು ಹಾಕಿದರು.
ಹೆಬ್ರಿಯ ಹಾಸ್ಟೆಲ್ ಮೂವರು ಮಕ್ಕಳು ಆಹಾರ ಸರಿಯಾಗಿಲ್ಲವೆಂದು ಕಾರಣದಿಂದ ನಾಪತ್ತೆಯಾಗಿದ್ದು ಇದರಲ್ಲಿ ಸಮಾಜ ಕಲ್ಯಾಣಾಧಿಕಾರಿ ವಿಜಯ ಕುಮಾರ್ ನಿರ್ಲಕ್ಷ್ಯ ಕಾರಣವೆಂದು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಇದಲ್ಲದೇ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯ ಸಿಬ್ಬಂದಿಗಳಿಗೆ ಅಧಿಕಾರಿ ವಿಜಯಕುಮಾರ್ ವಿನಾಕಾರಣ ಕಿರುಕುಳ ನೀಡುತ್ತಿದ್ದು ಇದರ ವಿರುದ್ದ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವುದು, ನಿಮ್ಮಂತಹ ನಾಲಾಯಕ್ ಅಧಿಕಾರಿಗಳು ನಮಗೆ ಬೇಕಾಗಿಲ್ಲ ಎಂದು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.
ಪುರಸಭೆಯ ವ್ಯಾಪ್ತಿಯ ದಲಿತರಿಗೆ ಪುರಸಭೆಯಲ್ಲಿ ಪ್ರತ್ಯೇಕ ಕುಂದುಕೊರತೆ ಸಭೆ ನಡೆಸುವುದಾಗಿ ಹೇಳಿದ್ದರೂ ಈವರೆಗೂ ಒಂದೇಒಂದು ಸಭೆ ನಡೆಸಿಲ್ಲ ಕರ್ತವ್ಯಪ್ರಜ್ಞೆ ಇಲ್ಲದ ಇಂತಹ ಅಧಿಕಾರಿಗಳಿಂದ ದಲಿತರು ಇನ್ನೇನು ನಿರೀಕ್ಷಿಸಲು ಸಾಧ್ಯವೆಂದು ಅಣ್ಣಪ್ಪ ನಕ್ರೆ ಪ್ರಶ್ನಸಿದರು. ಇದಕ್ಕೆ ತಹಶೀಲ್ದಾರ್ ಪುರಂದರ ಪ್ರತಿಕ್ರಿಯಸಿ ಮುಂದಿನ ೧೫ ದಿನಗಳ ಒಳಗಾಗಿ ಸಭೆ ನಡೆಸುವುದಾಗಿ ಭರವಸೆ ನೀಡಿದರು.
ಪರಿಶಿಷ್ಟ ಪಂಗಡದ ಮುಖಂಡರುಗಳಿಗೆ ಕುಂದುಕೊರತೆ ಸಭೆಯ ಮಾಹಿತಿ ನೀಡಲಾಗುತ್ತಿಲ್ಲ ಈ ಹಿಂದೆ ೨೦ ಮುಖಂಡರ ಪಟ್ಟಿ ಸಿದ್ಧಪಡಿಸಿ ಅದನ್ನು ಇಲಾಖೆಯ ಕಚೇರಿಗೆ ನೀಡಲಾಗಿದ್ದರೂ ಇಂದಿನ ಸಭೆಗೆ ನಮ್ಮನ್ನು ಉದ್ದೇಶಪೂರ್ವಕವಾಗಿಯೇ ಆಹ್ವಾನಿಸಿಲ್ಲ ಎಂದು ಉಮೇಶ್ ನಾಯ್ಕ್ ಆರೋಪಿಸಿದರು.ಮುಂದಿನ ಸಭೆಯ ನೋಟೀಸನ್ನು ಮರಾಠಿ ಸಮುದಾಯದ ಮುಖಂಡರಿಗೂ ಕಡ್ಡಾಯವಾಗಿ ಕಳುಹಿಸುವಂತೆ ತಹಶೀಲ್ದಾರ್ ಅಧಿಕಾರಿಗಳಿಗೆ ಸೂಚಿಸಿದರು.