ಉದ್ಯಾವರ: ಡಿ.4 ಲಕುಮಿ ತಂಡದ “ಗುಟ್ಟು ಗೊತ್ತಾಂಡ್” ನಾಟಕ ಪ್ರದರ್ಶನ

ಉಡುಪಿ : ಉದ್ಯಾವರದ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ವ್ಯಾಪ್ತಿಗೆ ಒಳಪಟ್ಟ  ಭಾರತೀಯ ಕಥೋಲಿಕ್ ಯುವ ಸಂಚಲನ (ಐಸಿವೈಎಂ) ಉದ್ಯಾವರ ಪ್ರಸ್ತುತ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದ್ದು, ಸಂಭ್ರಮದ  ವರ್ಷದಲ್ಲಿ 50 ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಈ ಪ್ರಯುಕ್ತ ವಾರ್ಷಿಕ ವಿವಿಧ ಚಟುವಟಿಕೆಗಳ ಸಹಾಯಾರ್ಥವಾಗಿ, ಮಂಗಳೂರಿನ ಖ್ಯಾತ ಕಲಾವಿದರನ್ನೊಳಗೊಂಡ  ಲಕುಮಿ ತಂಡದ ‘ಗುಟ್ಟು ಗೊತ್ತಾಂಡ್’ ತುಳು ಹಾಸ್ಯಮಯ ನಾಟಕ ಬುಧವಾರ 4 ರಂದು, ಸಂಜೆ 6.30 ಕ್ಕೆ ಉದ್ಯಾವರ ಸಂತ ಫ್ರಾನ್ಸಿಸ್ ಜೇವಿಯರ್ ದೇವಾಲಯದ ವಠಾರದಲ್ಲಿ ಜರುಗಲಿದೆ ಎಂದು ಸುವರ್ಣ ಮಹೋತ್ಸವದ ಕಾರ್ಯಕ್ರಮಗಳ ಸಂಚಾಲಕರಾಗಿರುವ ಸ್ಟೀವನ್ ಕುಲಾಸೊ ಉದ್ಯಾವರ ತಿಳಿಸಿದ್ದಾರ


1971 ರಲ್ಲಿ ಉದ್ಯಾವರ ಸಂತ ಫ್ರಾನ್ಸಿಸ್ ಜೇವಿಯರ್ ದೇವಾಲಯದಲ್ಲಿ ಯುವಕರನ್ನು ಒಗ್ಗೂಡಿಸಿ ಸಿವೈಎ ಎಂಬ ಸಂಸ್ಥೆಯನ್ನು ಆರಂಭಿಸಲಾಗಿತ್ತು. ಬಳಿಕ ಈ ಸಂಸ್ಥೆ ಐಸಿವೈಎಂ ಎಂದು ಮರು ನಾಮಕರಣವಾಗಿದ್ದು, ನೂರಾರು ಯುವಕ ಯುವತಿಯರು ಈ ಸಂಸ್ಥೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದು, ದೇವಾಲಯದ ವ್ಯಾಪ್ತಿಗೆ ಮತ್ತು ಸಮಾಜಕ್ಕೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಹಲವಾರು ಯುವಕ ಯುವತಿಯರು ದೇವಾಲಯದ ವ್ಯಾಪ್ತಿಗೆ ಮಾತ್ರವಲ್ಲದೆ, ಧರ್ಮಕ್ಷೇತ್ರದ ಮಟ್ಟದಲ್ಲೂ ಪ್ರಜ್ವಲಿಸಿದ ಕೀರ್ತಿ ಇದೆ. ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ, ಕ್ರೀಡೆ ಮತ್ತಿತರ  ಕಾರ್ಯಕ್ರಮಗಳನ್ನು ಕೇವಲ ದೇವಾಲಯದ ವ್ಯಾಪ್ತಿಗೆ ಮಾತ್ರ  ನಡೆಸದೆ, ಬದಲಾಗಿ ಗ್ರಾಮ ಮತ್ತು ಧರ್ಮಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಸಿದ ತೃಪ್ತಿ ಈ ಸಂಸ್ಥೆಗಿದೆ. ದೇವಾಲಯದ ಅಭಿವೃದ್ಧಿಯಲ್ಲಿ ಯುವಕರ ಪಾತ್ರವೂ ಕೂಡ ಉತ್ತಮವಾಗಿದೆ.


2020 – 21 ವರೆಗೆ ಸುವರ್ಣ ಮಹೋತ್ಸವದ ವರ್ಷಾಚರಣೆಯ ಸಂಭ್ರಮ ನಡೆಸಲು ನಿರ್ಧರಿಸಲಾಗಿದ್ದು, ಧರ್ಮಕ್ಷೇತ್ರದ ಕುಲಪತಿ ಮತ್ತು ದೇವಾಲಯದ ಪ್ರಧಾನ ಧರ್ಮ ಗುರುಗಳಾಗಿರುವ ವಂದನೀಯ ಫಾ. ಸ್ಟ್ಯಾನಿ ಬಿ. ಲೋಬೊ ರವರ ನೇತೃತ್ವದಲ್ಲಿ, ಐಸಿವೈಎಂ ಸುವರ್ಣ ಮಹೋತ್ಸವದ ಸಮಿತಿ ರಚನೆ ಮಾಡಲಾಗಿದ್ದು, ಮಾಜಿ ಅಧ್ಯಕ್ಷ ಮೈಕಲ್ ಡಿಸೋಜಾ ಅಧ್ಯಕ್ಷರಾಗಿಯೂ, ಡೋರಾ ರೋಜಾ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ನಾರ್ಬಟ್ ಕ್ರಾಸ್ಟಾ ಗೌರವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕರು ಮತ್ತು ವಿವಿಧ ಹುದ್ದೆ ಗಳೊಂದಿಗೆ ಸುವರ್ಣ ಮಹೋತ್ಸವದ ಪ್ರಧಾನ ಸಮಿತಿಯಲ್ಲಿ 35 ಸದಸ್ಯರು ಮತ್ತು ವಿವಿಧ ಸಮಿತಿಗಳನ್ನು ರಚಿಸಿ ಹಲವಾರು ಮಂದಿಗೆ ಸೇವೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಪ್ರಸ್ತುತ ಐಸಿವೈಎಂ ಅಧ್ಯಕ್ಷರಾಗಿ ರೋಯಲ್ ಕಸ್ತೆಲಿನೋ ಮತ್ತು ಪ್ರಿಯಾಂಕಾ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

2020 ರ ಜನವರಿ 19 ರಂದು ಐಸಿವೈಎಂ ಉದ್ಯಾವರದ ಸುವರ್ಣ ಮಹೋತ್ಸವದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ. ಜೆರಾಲ್ಡ್ ಐಸಾಕ್ ಲೋಬೋ ಮತ್ತು ಮಾಜಿ ರಾಜ್ಯಪಾಲೆ ಮಾರ್ಗರೆಟ್ ಆಳ್ವಾ ಸಹಿತ ಸಾಮಾಜಿಕ – ಧಾರ್ಮಿಕ – ರಾಜಕೀಯ ಮುಖಂಡರುಗಳ ಉಪಸ್ಥಿತಿಯಲ್ಲಿ ಉದ್ಘಾಟನಾ ಸಮಾರಂಭ ಜರುಗಲಿದೆ ಎಂದು ಸ್ಟೀವನ್ ಕುಲಾಸೊ ಉದ್ಯಾವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!