ಕಾರ್ಕಳ: ಪ್ರೇಮಿಗಳ ಬೆದರಿಸಿದ ನಕಲಿ ಪೊಲೀಸ್ ಸೆರೆ
ಕಾರ್ಕಳ : ಮಂಗಳೂರು ಮೂಲದ ಪ್ರೇಮಿಗಳಿಬ್ಬರು ವಿಹಾರಕ್ಕಾಗಿ ಕಾರ್ಕಳ ಆನೆಕೆರೆ ಬಸದಿಗೆ ಬಂದು ಅಲ್ಲಿಯೇ ಕುಳಿತು ಮಾತನಾಡುತ್ತಿದ್ದವೇಳೆ ಅಲ್ಲಿಗೆ ಬಂದಿದ್ದ ವ್ಯಕ್ತಿಯೊಬ್ಬ ತಾನು ಕ್ರೈಂ ಪೊಲೀಸ್ ಎಂದು ಪರಿಚಯಿಸಿಕೊಂಡು ನೀವು ಅಸಭ್ಯವಾಗಿ ವರ್ತಿಸಿದ್ದು ನಿಮ್ಮ ವಿರುದ್ಧ ಕೇಸ್ ಹಾಕುತ್ತೇನೆಂದು ಏರುಧ್ವನಿಯಲ್ಲಿ ಗದರಿಸಿ,ಬಳಿಕ ಈ ಪ್ರಕರಣ ಮುಗಿಸಲು ಹಣಕ್ಕೆ ಬೇಡಿಕೆಯಿಟ್ಟು 1,200 ರೂ ನಗದು ಪಡೆದು ಪರಾರಿಯಾಗಿದ್ದ ವ್ಯಕ್ತಿಯನ್ನು ಕಾರ್ಕಳ ನಗರ ಠಾಣಾ ಪೊಲೀಸರು ಭಾನುವಾರ ಮುಂಜಾನೆ ಕಾರ್ಕಳದ ಜೋಡುರಸ್ತೆ ಎಂಬಲ್ಲಿ ಬಂಧಿಸಿದ್ದಾರೆ.
ಕುಂದಾಪುರ ತಾಲೂಕಿನ ತೆಕ್ಕಟ್ಟೆ ಗ್ರಾಮದ ಗಣೇಶ್ ಮೊಗವೀರ (33 ವ) ಎಂಬಾತ ಬಂಧಿತ ಆರೋಪಿ. ಈತನಿಗೆ ಪ್ರೇಮಿಗಳೇ ಪ್ರಮುಖ ಟಾರ್ಗೆಟ್ ಆಗಿದ್ದರು. ಅವರನ್ನು ಬೆದರಿಸಿ ಸುಲಭವಾಗಿ ಹಣ ಮಾಡಬಹುದೆನ್ನುವ ಲೆಕ್ಕಾಚಾರ ಹಾಗೂ ಪ್ರೇಮಿಗಳು ಇಂತಹ ಪ್ರಕರಣದಲ್ಲಿ ಸಿಕ್ಕಿಬಿದ್ದರೆ ಮರ್ಯಾದೆಗೆ ಅಂಜಿ ಕೇಳಿದಷ್ಟು ಹಣನೀಡಿ ದೂರು ನೀಡದೇ ಸುಮ್ಮನಿರುತ್ತಾರೆ ಎನ್ನವ ಭಂಡಧೈರ್ಯದಿಂದ ಗಣೇಶ್ ಮೊಗವೀರ ರಾಜಾರೋಷವಾಗಿ ಈ ದಂಧೆ ನಡೆಸುತ್ತಿದ್ದ. ಪಾರ್ಕ್ ಹಾಗೂ ಐತಿಹಾಸಿಕ ಸ್ಥಳಗಳೇ ಈತನ ಪ್ರಮುಖ ಟಾರ್ಗೆಟ್ ಆಗಿದ್ದು ರಜಾದಿನಗಳಲ್ಲಿ ಅಲ್ಲಿಗೆ ಪ್ರೇಮಿಗಳು ಬರುತ್ತಾರೆ ಎನ್ನುವ ಲೆಕ್ಕಾಚಾರದಲ್ಲಿ ಈತ ತನ್ನ ವಿಕ್ಟರ್ ಬೈಕಿನಲ್ಲೇ ಜಿಲ್ಲೆಯಾದ್ಯಂತ ಸುತ್ತಾಡುತ್ತಿದ್ದ.
ಕಳೆದ ನವೆಂಬರ್ ೧೩ರಂದು ನಂಬರ್ಪ್ಲೇಟ್ ಇಲ್ಲದ ಬೈಕಿನಲ್ಲಿ ಕಾರ್ಕಳ ಆನೆಕರೆ ಬಸದಿಗೆ ಬಂದಿದ್ದವೇಳೆ ಅಂದು ಮಂಗಳೂರಿನ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪ್ರೇಮಿಗಳಿಬ್ಬರು ರಜೆ ಹಾಕಿ ಸುತ್ತಾಡಲೆಂದು ಕಾರ್ಕಳ ಬಸದಿಗೆ ಬಂದಿದ್ದರು. ಈದೇವೇಳೆ ಹೊಂಚುಹಾಕಿದ್ದ ಗಣೇಶ್ ಮೊಗವೀರ ತಾನು ಪೊಲೀಸ್ ಎಂದು ಬೆದರಿಸಿ ಅವರಿಂದ ೧೭೦೦ರೂ ಹಣ ವಸೂಲಿ ಮಾಡಿ ಪರಾರಿಯಾಗಿದ್ದ. ಈ ಬಗ್ಗೆ ಯುವತಿ ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದಳು. ಆದರೆ ಈತನ ಬಗ್ಗೆ ಪೊಲೀಸರಿಗೆ ಈವರೆಗೂ ಸಣ್ಣ ಸುಳಿವುಕೂಡಾ ಸಿಕ್ಕಿರಲ್ಲಿಲ್ಲ.
ಆದರೆ ಭಾನುವಾರ ಮುಂಜಾನೆ ಕಾರ್ಕಳ ನಗರ ಪೊಲೀಸರು ಜೋಡುರಸ್ತೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದವೇಳೆ ಕಾರ್ಕಳದಿಂದ ಉಡುಪಿಗೆ ನಂಬರ್ಪ್ಲೇಟ್ ಇಲ್ಲದೇ ಚಲಾಯಿಸಿಕೊಂಡು ಹೋಗುತ್ತಿದ್ದ ವ್ಯಕ್ತಿಯನ್ನು ತಡೆದು ಪರಿಶೀಲನೆ ನಡೆಸಿದಾಗ, ವಸೂಲಿಗಾರ ನಕಲಿ ಪೊಲೀಸ್ ಅಸಲಿ ಪೊಲೀಸರ ಕೈಯಲ್ಲಿ ಲಾಕ್ ಆಗಿದ್ದ.
ಗಣೇಶ್ ಮೊಗವೀರ ಸುಲಭವಾಗಿ ಹಣಗಳಿಸುವ ಉದ್ದೇಶದಿಂದ ಇಂತಹ ಕೃತ್ಯ ಎಸಗುತ್ತಿದ್ದು, ಕಳೆದ 5 ತಿಂಗಳಿನಲ್ಲಿ ಈತ ಬೈಕಿನಲ್ಲಿ 32 ಸಾವಿರ ಕೀಮಿ ಓಡಾಡಿದ್ದು ಸಾಕಷ್ಟು ಪ್ರೇಮಿಗಳನ್ನು ಬೆದರಿಸಿ ಹಣ ಪಡೆದಿರುವುದಾಗಿ ಬಾಯಿಬಿಟ್ಟಿದ್ದಾನೆ. ಇದಲ್ಲದೇ ಈತ ಸರಗಳ್ಳತನ ಪ್ರಕರಣದಲ್ಲಿಯೂ ಆರೋಪಿಯಾಗಿದ್ದು, ಈತನ ವಿರುದ್ಧ ಕುಂದಾಪುರ ಹಾಗೂ ಬೆಂಗಳೂರು ನಗರದ ಹಲವೆಡೆ ಸರಗಳ್ಳತನ ಪ್ರಕರಣಗಳು ದಾಖಲಾಗಿವೆ.