ಸುಳ್ಳನ್ನು ಸತ್ಯವನ್ನಾಗಿ ಮಾತನಾಡುವ ಪಟ್ಲ: ದೇವಿಪ್ರಸಾದ್ ಶೆಟ್ಟಿ

ಮೂಲ್ಕಿ: ‘ಅಶಿಸ್ತಿನ ವರ್ತನೆಯಿಂದ ಕಲಾವಿದನಾಗಿ ಪರಂಪರೆ, ಗೌರವ, ಮೇಳದ ನಿಯಮವನ್ನು ಧಿಕ್ಕರಿಸಿದ್ದರಿಂದ ಪ್ರಸ್ತುತ ವರ್ಷದಲ್ಲಿ ಸತೀಶ್ ಶೆಟ್ಟಿ ಅವರಿಗೆ ಮೇಳದ ಯಕ್ಷಗಾನದಲ್ಲಿ ಭಾಗವತಿಕೆಗೆ ಅವಕಾಶ ನೀಡಿಲ್ಲ’ ಎಂದು ಕಟೀಲು ಯಕ್ಷಗಾನ ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಹೇಳಿದರು.

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಾನುವಾರ ಕಟೀಲು ಮೇಳದ ವಿವಾದದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಅವರು  ಮಾತನಾಡಿದರು.

‘ಸುಳ್ಳನ್ನು ಸತ್ಯವನ್ನಾಗಿ ಮಾತನಾಡುವ ಸತೀಶ್ ಶೆಟ್ಟಿ ಪಟ್ಲ ಮೇಳದಿಂದ ಹೊರನಡೆದಿರುವ ಬಗ್ಗೆ ಉಂಟಾಗಿರುವ ವಿಷಯದಲ್ಲಿ ಯಾವುದೇ ಸತ್ಯಾಂಶವಿಲ್ಲ. ಯಜಮಾನನಿಗೆ ಗೌರವ ನೀಡುವ ಸೌಜನ್ಯದ ವ್ಯಕ್ತಿತ್ವ ಸಹ ಇಟ್ಟುಕೊಳ್ಳದ ಅವರು, ಮೇಳದ ಬಂಡಾಯ ಕಲಾವಿದರು ಹಾಗೂ ಏಲಂ ಆಗುವ ಪರವಾಗಿ ಕೆಲಸ ಮಾಡುತ್ತಿದ್ದಾರೆ. ನಾನು ಮಾಡಿದ್ದು ಎಲ್ಲಿಯಾದರೂ ತಪ್ಪೆಂದು ಕಂಡರೆ ಸಾಬೀತು ಮಾಡಲಿ. ಸೂಚನೆ ನೀಡಿಯೇ ಅವರನ್ನು ದೂರವಿಟ್ಟಿದ್ದೇವೆ. ಇದಕ್ಕೆ ಕಟೀಲಿನ ದೇವಿಯ ಮುಂದೆ ಪ್ರಮಾಣ ಮಾಡಲು ಸಿದ್ಧನಿದ್ದೇನೆ’ ಎಂದರು.

ಕಲಾವಿದರನ್ನು ಗೊತ್ತುಪಡಿಸುವ ದಿನವಾದ, ಪತ್ತನಾಜೆ ಸೇವೆಯಾಟದ ಬಳಿಕ ಒಮ್ಮೆಯೂ ಅವರು ಬಂದಿಲ್ಲ. ಮೊನ್ನೆಯೂ ಅವರಿಗೆ ಮೊದಲೇ ಹೇಳಿದ್ದೆ, ಹಾಡು ಹೇಳಲು ಕುಳಿತುಕೊಳ್ಳಬಾರದು ಅಂತ. ಆದರೂ ಹೋಗಿ ಅಲ್ಲಿ ಪದ್ಯ ಹೇಳುತ್ತಿದ್ದ ಭಾಗವತರನ್ನು ಎಬ್ಬಿಸಿ ಕುಳಿತಿದ್ದಾರೆ. ಹೀಗಾಗಿ, ಅವರನ್ನು ಹಾಡದಂತೆ ಹೇಳಿದ್ದೆ. ಆದರೆ ಎಬ್ಬಿಸಿಯೂ ಇಲ್ಲ, ಗೂಂಡಾಗಳು ಬಂದು ಎಬ್ಬಿಸಿದರು ಅಂತೆಲ್ಲ ಸುಳ್ಳು ಸುದ್ದಿ ಹಬ್ಬಿಸಿದರು ಎಂದು ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ತಿಳಿಸಿದರು.

ದೇವಳದ ಮೊಕ್ತೇಸರ ಸನತ್‌ಕುಮಾರ್ ಶೆಟ್ಟಿ ಮಾತನಾಡಿ, ‘ದೇವಸ್ಥಾನದ ಮೇಳದ ಬಗ್ಗೆ ಅವಹೇಳನಕಾರಿ ಹೇಳಿಕೆ ಹಾಗೂ ಅವರ ನಡವಳಿಕೆಯಿಂದ ಬಹಳಷ್ಟು ವಿರೋಧ ವ್ಯಕ್ತವಾಗಿದ್ದರಿಂದ ಅಡಳಿತ ಮಂಡಳಿ ಕೂಡ ಸಂಚಾಲಕರಿಗೆ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದೆ. ಅವರು ಇಂದು ಮುಂಬೈಯಲ್ಲಿ ಕಾರ್ಯಕ್ರಮದಲ್ಲಿ ಪೂರ್ವ ನಿರ್ಧಾರದಂತೆ ಭಾಗವಹಿಸಿದ್ದಾರೆ, ಆದರೆ ಅನುಮತಿ ಪಡೆದಿಲ್ಲ. ಇದೆಲ್ಲದರಿಂದ ಅವರು ಮೇಳವನ್ನು ಬಿಡುವ ನಿರ್ಧಾರವನ್ನು ಮಾಡಿಕೊಂಡಿದ್ದರು’ ಎಂದರು.

ದೇವಳದ ಅರ್ಚಕರ ಪರವಾಗಿ ಹರಿನಾರಾಯಣದಾಸ ಅಸ್ರಣ್ಣ ಮಾತನಾಡಿ, ‘ ಅಸ್ರಣ್ಣ ಮತ್ತು ಕಲ್ಲಾಡಿ ಮನೆತನವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಗೂ ಪಟ್ಲ ಅವರ ಅಭಿಮಾನಿಗಳು ಅವಹೇಳನ ನಡೆಸುತ್ತಿರುವುದು ಸರಿಯಲ್ಲ. ಪ್ರಥಮ ಸೇವೆಯಾಟವನ್ನು ಅಸ್ರಣ್ಣ ಬಂಧುಗಳು ವೀಕ್ಷಿಸುವ ಸಂಪ್ರದಾಯವಿಲ್ಲ. ಆದರೂ ಅಸ್ರಣ್ಣರ ಕೈವಾಡ ಇದೆ ಎಂದು ಬಿಂಬಿಸಲಾಗುತ್ತಿದೆ. ಅನುಕಂಪ ಸೃಷ್ಟಿಸಲು ಸತೀಶ್ ಶೆಟ್ಟಿ ಅವರು ರಂಗಸ್ಥಳಕ್ಕೆ ಬಲವಂತವಾಗಿ ಕುಳಿತುಕೊಳ್ಳುವ ನಾಟಕ ಮಾಡಿದ್ದಾರೆ ಎಂಬ ಅನುಮಾನ ಮೂಡುತ್ತಿದೆ. ಮೇಳದ ಸಂಚಾಲಕರ ನಿರ್ಧಾರಕ್ಕೆ ಅವರು ಸ್ವತಂತ್ರರು’ ಎಂದು ಹೇಳಿದರು. ವಾಸುದೇವ ಅಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಪದ್ಮನಾಭ ಆಸ್ರಣ್ಣ, ಕಮಲಾದೇವಿ ಅಸ್ರಣ್ಣ, ವೆಂಕಟರಮಣ ಅಸ್ರಣ್ಣ ಇದ್ದರು

Leave a Reply

Your email address will not be published. Required fields are marked *

error: Content is protected !!