ಜೀವನಕ್ಕೆ ಆಧಾರವಾಯಿತು ಜಾಸ್ಮಿನ್ ಕೃಷಿ- ಮಲ್ಲಿಗೆ ಬೆಳೆಗಾರ್ತಿ ಪ್ರೇಮ ಪೂಜಾರಿ ಟೈಮ್ಸ್ ವಾರದ ವ್ಯಕ್ತಿ
ಕುಂಭಾಸಿ: ಘಮ ಘಮ ಮಲ್ಲಿಗೆ ಪರಿಮಳಕ್ಕೆ ಸೋಲದವರು ಇಲ್ಲ. ಇಂತಹ ಮಲ್ಲಿಗೆ ಕೃಷಿಯಿಂದ ಸಂಸಾರದ ನೊಗವನ್ನು ಎಳೆಯುತ್ತಿರುವ ಮಹಿಳೆ ಪ್ರೇಮ ಪೂಜಾರ್ತಿ ಈ ವಾರದ “ಉಡುಪಿ ಟೈಮ್ಸ್ ವಾರದ ವ್ಯಕ್ತಿ” . ತನ್ನ ಪುಟ್ಟ ಸಂಸಾರದ ದೋಣಿಯ ನಾವಿಕ ಪ್ರೇಮ ಎಂಬ ಹೆಣ್ಣು ಮಗಳು.
ಬೇರೆ ಮಹಿಳೆಯರಂತೆ ತನ್ನ ಪುಟ್ಟ ಕೈತೋಟದಲ್ಲಿ ಮನೆಗೆ ಬೇಕಾಗುವ ತರಕಾರಿ ತನಗೆ ಬೇಕಾಗುವಷ್ಟು ಹೂವು ಬೆಳಿಸಿದಿದ್ದರೆ ಅವರು ವಾರದ ವ್ಯಕ್ತಿ ಆಗುತ್ತಿರಲಿಲ್ಲ.ಕೃಷಿಯನ್ನ ನಂಬಿ ಬದಕನ್ನು ಕಟ್ಟಿಕೊಂಡ ಪ್ರೇಮರವರ ಪಾಲಿಗೆ ಇದ್ದದು ತಾನು ವಾಸಿಸುವ ಮನೆಯ ಸುತ್ತವಿರುವ 10 ಸೆಂಟ್ಸ್ ಜಾಗ ಆದರೆ ಸ್ವಾವಲಂಬಿ ಬದುಕಿನ ಕನಸು ಕಟ್ಟಿಕೊಂಡಿದ್ದ ಪ್ರೇಮ ಪ್ರೇಮಿಸಿದ್ದು ಮಲ್ಲಿಗೆ ಕ್ರಷಿಯನ್ನ. ಇವರು ಮಲ್ಲಿಗೆಯ ಡಾಕ್ಟರ್ ಅಂದರು ತಪ್ಪಾಗಲಿಕ್ಕಿಲ್ಲಕಾರಣ ಮಲ್ಲಿಗೆಯ ಬೆಳೆಯ ಬಗ್ಗೆ ಯಾವುದೇ ಸಂಶಯವಿದ್ದರೂ ಪ್ರೇಮರವರ ಬಳಿ ಪರಿಹಾರವಿದೆ.
ಮಹಡಿಯ ಮೇಲೆ ಅರಳಿದ ಮಲ್ಲಿಗೆ
ಕುಂಭಾಸಿ ಪಣ್‌ಹತ್ವಾರ್‌ಬೆಟ್ಟು ಎಂಬಲ್ಲಿ ನೆಲೆಸಿರುವ ಪ್ರೇಮಾ ದಂಪತಿ ಕೃಷಿಕ ಕುಟುಂಬದವರು. . ಪ್ರೇಮಾ ಅವರ ಪತಿ ಗಣೇಶ್ ಪೂಜಾರಿ ಮೀನುಗಾರ. ಇಬ್ಬರು ಮಕ್ಕಳು. ಪ್ರೇಮಾ 7ನೇ ತರಗತಿ ತನಕ ಓದಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಂಭಾಸಿಯ ಮಹಾದೇವಿ ಸಂಘದ ಸದಸ್ಯೆಯಾಗಿದ್ದಾರೆ. ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕೆನ್ನುವುದು ಅವರ ಅಭಿಲಾಷೆ. ಆ ಸಮಯದಲ್ಲಿ ಹೊಳೆದದ್ದು ಮಲ್ಲಿಗೆ ಕೃಷಿ. ಕನಸೇನೋ ಕಟ್ಟಿಯಾಗಿದೆ ಆದರೆ ಮಲ್ಲಿಗೆ ಕೃಷಿ ಮಾಡಲು ಸೂಕ್ತ ಸ್ಥಳಾವಕಾಶದ ಕೊರತೆ. ಇರುವ ಜಾಗದಲ್ಲಿ ಮನೆ ನಿರ್ಮಿಸಿದ್ದರು. ಅಲ್ಪಸ್ವಲ್ಪ ಉಳಿದ ಜಾಗ ಮನೆ ಪಕ್ಕದ ಗದ್ದೆಗೆ ಸೇರಿದೆ. ಆದರೆ ಸಾಧಿಸಲೇ ಬೇಕೆನ್ನುವ ಛಲ ಅಚಲವಾಗಿತ್ತು ಮಲ್ಲಿಗೆ ಗಿಡಗಳ ಬೆಳವಣಿಗೆಗೆ ಮುಂದಾದರು.
ಕುಂದಾಪುರ ಭಾಗದಲ್ಲಿಯೇ ವಿಶೇಷವಾಗಿ ಬೆಳೆಯುವ ಮಲ್ಲಿಗೆ ಗಿಡದ ಕಸಿ ಮಾಡಿ ನೂರಾರು ಗಿಡ ಸೃಷ್ಟಿಸಿದರು. ಆಗ ಅವರ ತಲೆಯಲ್ಲಿ ಬಂದಿದ್ದು ಮನೆಯ ತಾರಸಿ. ಮನೆಯ ತಾರಸಿ ಮೇಲೆ ಸುಮಾರು 150 ಕ್ಕಿಂತ ಜಾಸ್ತಿ ಗಿಡಗಳನ್ನು ನೆಟ್ಟರು ಮಕ್ಕಳಂತೆ ಪೋಷಿಸಿದರು ಮಣ್ಣು ಕೈಬಿಡೋದಿಲ್ಲ ಎನ್ನುವುದಕ್ಕೆ ಇವರೇ ಸಾಕ್ಷಿ. ಸುಮಾರು 8 ,000 ದಿಂದ 12 .0000 ಹೂವು ಪ್ರತಿನಿತ್ಯ ಮಾರಾಟಕ್ಕೆ ಸಿಗುತ್ತಿದ್ದೆ. ಉಪ ಕಸುಬಾಗಿಯೂ ಆರ್ಥಿಕ ಶಕ್ತಿಯನ್ನು ಮಲ್ಲಿಗೆ, ಪ್ರೇಮ ಕುಟುಂಬಕ್ಕೆ ಆಸರೆಯಾಗಿದೆ. ಸುಮಾರು 15,000 ಆದಾಯ ಪಡೆಯುವ ಪ್ರೇಮ ಹೂವುಗಳನ್ನು ತಾನೇ ಕೊಯ್ದು, ಕಟ್ಟಿ ಮಾರುಕಟ್ಟೆಗೆ ಹಾಕುವ ಇವರ ಛಲ ಸಮಾಜಕ್ಕೆ ಮಾದರಿ.
ಬದುಕು ಬದಲಾಯಿಸಿದ ಜಾಸ್ಮಿನ್ – ಪ್ರೇಮಾ ಪೂಜಾರ್ತಿ, ಮಲ್ಲಿಗೆ ಬೆಳೆಗಾರರು.
” ನನ್ನ ತವರುಮನೆ ಕಾಳಾವರ. ನಮ್ಮಲ್ಲಿ ಮಲ್ಲಿಗೆ ಗಿಡ ಬೆಳೆಸುತ್ತಿದ್ದೆವು. ಗಂಡನ ಮನೆಗೆ ಬಂದ ಬಳಿಕ ಕಾಯಕ ಮುಂದುವರಿಸಬೇಕೆಂಬ ಇಚ್ಚೆಯಿತ್ತು. ಆದರೆ ಸ್ಥಳಾವಕಾಶದ ಕೊರತೆಯಿತ್ತು. ಮನೆ ನಿರ್ಮಿಸಿದ ಬಳಿಕ ತಾರಸಿಯಲ್ಲಿ ಬೆಳೆಸಿದರೆ ಹೇಗೆ ಅಂತಾ ಪ್ರಯತ್ನ ನಡೆಸಿದೆವು. ಪ್ರಯತ್ನಕ್ಕೆ ಈಗ ಫಲ ಸಿಕ್ಕಿದೆ. ಮಲ್ಲಿಗೆ ಕೃಷಿಯಿಂದ ಜೀವನಕ್ಕೆ ಆಧಾರವಾಗಿದೆ. ”
ಸಾಧನೆಯ ರಹದಾರಿ ಸಂಧಿಸಿದ ನೆಮ್ಮದಿ
ತನ್ನ ಬಳಿಯಿದ್ದ ಜಮೀನಿನಲ್ಲಿ ಕಷ್ಟದ ಜೀವನ ನಡೆಸಿಕೊಂಡಿದ್ದವರು. ಪತಿಯ ಮೀನುಗಾರಿಕೆಯಿಂದ ಜೀವನ ನಡೆಯುತ್ತಿತ್ತು ಬರುವ ಆದಾಯ ಸಾಕಾಗುವುದಿಲ್ಲ ಎಂಬ ಅರಿವಾದಾಗ ಮಲ್ಲಿಗೆ ಕೃಷಿ ಕೈಹಿಡಿಯಿತು .ಮಲ್ಲಿಗೆ ಕೃಷಿಗೆ ಗೊಬ್ಬರ, ನೀರು ಸಮಪ್ರಮಾಣದಲ್ಲಿ ನೀಡುತ್ತಾ ಬರಬೇಕು . ಮಳೆ ಹೆಚ್ಚಾದರೆ ನೀರು ಅತೀವ ನಿಲ್ಲದ್ದಂತೆ ನೋಡಿಕೊಳ್ಳಬೇಕು. ಇವರ ಆರೈಕೆಯ ಫಲ ಎಂಬಂತೆ ಇವರ ಗಿಡಗಳಿಗೆ ಈ ತನಕ ಯಾವುದೇ ರೋಗರುಜಿನಗಳು ಕಾಡಿಲ್ಲ. ಕೆಲವರು ತಾರಸಿ ಮೇಲೆ ಮಲ್ಲಿಗೆ ಬೆಳೆಯಲು ಅಸಾಧ್ಯ ಎಂಬ ಅಭಿಪ್ರಾಯ ತಳೆದಿದ್ದರು. ಆದರೆ ಅದು ಸಾಧ್ಯ ಎಂದು ತೋರಿಸಿಕೊಟ್ಟ ಪ್ರೇಮ ರವರ ಸಾಧನೆ ಸಮಾಜಕ್ಕೆ ಪ್ರೇರಣೆಯಾಗಲಿ ಎಂಬುದೇ ಉಡುಪಿ ಟೈಮ್ಸ್ ಆಶಯ.