ಬಡತನದ ಬೇಗೆಯಲ್ಲಿ ಕರಗಿಹೋಗುತ್ತಿದೆ ಅಂತರಾಷ್ಟ್ರೀಯ ಅಥ್ಲೀಟ್ ಗಣೇಶ್ ಬದುಕು

ಕುಂದಾಪುರ:-  ಗಣೇಶ್ ಪಾಂಡೇಶ್ವರ ಕುಂದಾಪುರ ತಾಲೂಕಿನ ಸಾಸ್ತಾನದ ಯುವಕ.ರಾಷ್ಟ್ರ,ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಉಡುಪಿಯ ಕ್ರೀಡಾಪ್ರತಿಭೆ.ಆದರೆ ಕ್ರೀಡಾ ಲೋಕದಲ್ಲಿ ಸಾಧನೆಗೈಯ್ಯಬೇಕಿದ್ದ ಗಣೇಶ್ ಇಂದು ಹೊಟ್ಟೆಪಾಡಿಗೆ ಮೀನು ಹಿಡಿದು ಮಾರಾಟ ಮಾಡುವ ಹಾಗೂ ಗಾರೆ ಕೆಲಸವನ್ನು ಮಾಡುತ್ತಿದ್ದಾರೆ.ಅಚ್ಚರಿಯಾದರೂ ಇದೇ ವಾಸ್ತವ.

ಗಣೇಶ್ ಶ್ರೀಲಂಕಾದಲ್ಲಿ ನಡೆದ ಮಾಸ್ಟರ್ಸ್ ಗೆದ್ದು ಕರಾವಳಿಯ ಕೀರ್ತಿಯನ್ನು ದೇಶಾದ್ಯಂತ ಪಸರಿಸಿದ ಕ್ರೀಡಾಪಟು. ಆದರೆ ತನ್ನ ಕುಟುಂಬದ ಆರ್ಥಿಕ ಸಮಸ್ಯೆಯಿಂದ ಸ್ಪೇನ್ ಹಾಗೂ ಸಿಂಗಾಪುರದಲ್ಲಿ ನಡೆಯುವ ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಪ್ರತಿಭೆ ಇದ್ದರೂ ಅವಕಾಶವಂಚಿತರು.

ಹುಟ್ಟಿನಿಂದಲೇ ಸಾಸ್ತಾನದ ಪಾಂಡೇಶ್ವರದ ಕಡುಬಡತನದ ಕುಟುಂಬದಲ್ಲಿ ಜನಿಸಿದ ಗಣೇಶ್ ಬರಿಗಾಲಿನಲ್ಲೇ ಓಡಿ ನೂರಾರು ಪದಕಗಳನ್ನು ,ಅನೇಕ ಸನ್ಮಾನಗಳನ್ನು ಪಡೆದಿದ್ದಾರೆ. ‘ಗಣೇಶ್ ಬರಿಗಾಲಿನಲ್ಲೇ ಓಡುತ್ತಾರೆ, ಶ್ರೀಲಂಕಾದಲ್ಲಿ ನಡೆದ ಮಾಸ್ಟರ್ಸ್ ನಲ್ಲಿ ದೇಶಕ್ಕೆ ಬೆಳ್ಳಿ ತಂದಿದ್ದರೂ ಗಣೇಶರನ್ನು ಕ್ರೀಡಾ ಇಲಾಖೆ, ಜಿಲ್ಲಾಡಳಿತ ಗುರುತಿಸದೇ ಇರುವುದು ಬೇಸರ ತಂದಿದೆ’ಎಂದು ಕ್ರೀಡಾಭಿಮಾನಿ ಹೆಬ್ಬಾಡಿ ಸುದೀಪ್ ಶೆಟ್ಟಿ ಉಡುಪಿ ಟೈಮ್ಸ್ ನೊಂದಿಗೆ ಹೇಳಿದ್ದಾರೆ.

ಇದಾಗಲೇ ಜಿಲ್ಲಾಡಳಿತ ಹಾಗೂ ಕ್ರೀಡಾ ಇಲಾಖೆ ನಿರ್ಲಕ್ಷ್ಯದಿಂದ ಕಮರಿಹೋಗುತ್ತಿರುವ ಈ ಬೆಂಕಿಯಲ್ಲಿ ಅರಳಿದ ಹೂವಿಗೆ ಮುಂದಿನ ಅಂತರಾಷ್ಟ್ರೀಯ ಕ್ರೀಡಾಕೂಟಕ್ಕೆ ಆರ್ಥಿಕವಾಗಿ ನೆರವಾಗುವ ದೃಷ್ಟಿಯಿಂದ ಉಡುಪಿಯಾದ್ಯಾಂತ ಇದಾಗಲೇ ಅಭಿಯಾನವೊಂದು ಆರಂಭವಾಗಿದ್ದು ಕೇವಲ ಹಣದ ಕಾರಣಕ್ಕೆ ಪ್ರತಿಭಾವಂತನೊಬ್ಬ ಅವಕಾಶ ವಂಚಿತನಾಗಬಾರದು ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

Leave a Reply

Your email address will not be published. Required fields are marked *

error: Content is protected !!