ಹೆಚ್ಚುತ್ತಿದ್ದೆ ಮಲೇರಿಯಾ, ಡೆಂಗ್ಯೂ ಪ್ರಕರಣ: ಮುಂಜಾಗ್ರತೆ ವಹಿಸಿ


ಉಡುಪಿ : ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಮಲೇರಿಯಾ ರೋಗ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಅಲ್ಲಲ್ಲಿ ಡೆಂಗ್ಯೂ ಪ್ರಕರಣಗಳು ಕೂಡ ಕಂಡುಬರುತ್ತಿವೆ. ಉಡುಪಿ ಸರ್ವಿಸ್ ಬಸ್‌ಸ್ಟ್ಯಾಂಡ್, ಸಿಟಿ ಬಸ್‌ಸ್ಟ್ಯಾಂಡ್, ತೆಂಕಪೇಟೆ ಪ್ರದೇಶದಲ್ಲಿ ಕಂಡು ಬಂದ ಮಲೇರಿಯಾ ಇತರ ಕಡೆಗಳಿಗೂ ವ್ಯಾಪಕವಾಗಿ ಹರಡುತ್ತಿದ್ದು, ಮುಂಜಾಗೃತ ಕ್ರಮ ಕೈಗೊಳ್ಳುವುದು ಅನಿವಾರ್ಯದ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಎನ್.ವಿ.ಬಿ.ಡಿ.ಸಿ.ಪಿ ವಿಭಾಗದವರು ವ್ಯಾಪಕ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.
ಈ ನಿಟ್ಟಿನಲ್ಲಿ ಉಡುಪಿ ನಗರಸಭಾ ವ್ಯಾಪ್ತಿಯ ಎಲ್ಲಾ ಹೋಟೇಲ್‌ಗಳು, ಕ್ಯಾಂಟೀನ್‌ಗಳು ಅಂಗಡಿಗಳು, ಅಪಾರ್ಟ್‌ಮೆಂಟ್‌ಗಳು, ನಿರ್ಮಾಣ ಹಂತದ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುವ ಕೆಲಸಗಾರರು/ಸೆಕ್ಯೂರಿಟಿ ಗಾರ್ಡ್‌ಗಳು ಆರೋಗ್ಯ ಇಲಾಖೆಯವರು ಸೂಚಿಸುವ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ಅವರು ಸೂಚಿಸುವ ಪ್ರತಿಯೊಬ್ಬರು ಮಲೇರಿಯಾ ರಕ್ತ ಪರೀಕ್ಷೆ ಮಾಡಿಸಿಕೊಂಡು ಸಹಕರಿಸಬೇಕು. ಈ ಬಗ್ಗೆ ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆಯ ಸಿಬ್ಬಂದಿಯವರು ಬಂದಾಗ (ಅವರಿಗೆ ಗುರುತಿನ ಚೀಟಿಯನ್ನು ನೀಡಲಾಗಿದೆ) ಅವರು ಸೂಚಿಸಿದ ಎಲ್ಲಾ ಕ್ರಮಗಳನ್ನು ಕೈಗೊಂಡು ಸೊಳ್ಳೆ ಲಾರ್ವಾ ಉತ್ಪತ್ತಿಗೆ ಕಾರಣವಾದ ನೀರು ಶೇಖರಣಾ ಟ್ಯಾಂಕ್, ಡ್ರಮ್ಮ್ ಇತ್ಯಾದಿಗಳನ್ನು ವಾರಕ್ಕೊಂದು ಬಾರಿ ಸ್ವಚ್ಚಗೊಳಿಸಿ, ಸೂಕ್ತ ರೀತಿಯಲ್ಲಿ ಮುಚ್ಚಿಡಬೇಕು. ಈ ರೀತಿ ಕ್ರಮ ಕೈಗೊಳ್ಳುವುದು ಸಾರ್ವಜನಿಕ ಆರೋಗ್ಯ ದೃಷ್ಟಿಯಿಂದ ಅನಿವಾರ್ಯವಾಗಿರುತ್ತದೆ.
ಆರೋಗ್ಯ ಇಲಾಖೆಯವರು ಕೈಗೊಳ್ಳುವ ಮುಂಜಾಗೃತ ಕ್ರಮಗಳಿಗೆ ಸಹಕಾರ ನೀಡದೆ ವ್ಯತಿರಿಕ್ತವಾಗಿ ವರ್ತಿಸಿದಲ್ಲಿ ಸಂಬಂಧಪಟ್ಟವರನ್ನು ರೋಗಹರಡಲು ನೇರ ಹೊಣೆಗಾರರೆಂದು ಪರಿಗಣಿಸಿ ಮುಂದಿನ ಸೂಕ್ತ ಕ್ರಮ ಕೈಗೊಳ್ಳಲಾಗುವುದು, ಸಾರ್ವಜನಿಕರು ಇದಕ್ಕೆ ಅವಕಾಶ ನೀಡದೆ ನಗರಸಭೆಯೊಂದಿಗೆ ಸಹಕರಿಸುವಂತೆ ನಗರಸಭೆ ಪೌರಾಯುಕ್ತರ ಪ್ರಕಟಣೆ ತಿಳಿಸಲಾಗಿದೆ .

Leave a Reply

Your email address will not be published. Required fields are marked *

error: Content is protected !!