ಅಕ್ರಮ ಸುಣ್ಣದಗೂಡು ತೆರವು
ಬಂಟ್ವಾಳ: ಸರಿ ಸುಮಾರು ಎರಡು ದಶಕಗಳಿಗಿಂತಲೂ ಅಧಿಕ ಕಾಲ ಪಾಣೆಮಂಗಳೂರು ಹಳೇ ಸೇತುವೆಯ ಬುಡದಲ್ಲಿ ಅಕ್ರಮವಾಗಿ ಠಿಕಾಣಿಯಾಗಿದ್ದ,ವಿವಾದಿತ ಸುಣ್ಣದಗೂಡನ್ನು ಶನಿವಾರ ಬೆಳಿಗ್ಗೆ ಬಂಟ್ವಾಳ ತಾಲೂಕಾಡಳಿತ ತೆರವುಗೊಳಿಸುವಲ್ಲಿ ಯಶಸ್ವಿಯಾಗಿದೆ. ಮಂಗಳೂರು ಸಹಾಯಕ ಆಯುಕ್ತ ರವಿಚಂದ್ರ ನಾಯ್ಕ್ ಅವರ ಅದೇಶದನ್ವಯ ಬಂಟ್ವಾಳ ಪೊಲೀಸರ ಬಿಗಿಭದ್ರತೆಯಲ್ಲಿ 14 ಅಕ್ರಮ ಕಟ್ಟಡವನ್ನು ಜೆಸಿಬಿ ಬಳಸಿ ನೆಲಸಮಗೊಳಿಸಮಗೊಳಿಸುವ ದಿಟ್ಟತನವನ್ನು ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್ ಅವರು ಮೆರೆದಿದ್ದು, ಯಾವುದೇ ರಾಜಕೀಯ ಒತ್ತಡ,ಪ್ರಭಾವಕ್ಕೆ ಮಣಿಯದೆ ನಡೆಸಿರುವ ಇವರ ಈ ಕಾರ್ಯಾಚರಣೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆಗೊಳಗಾಗಿದೆ. ಒಂದುರೀತಿಯಲ್ಲಿ ಅಕ್ರಮ ಚಟುವಟಿಕೆಗಳ ತಾಣವಾಗಿ, ಹೊರಜಿಲ್ಲೆಯ ಕಾರ್ಮಿಕರ ಪಾಲಿಗೆ ಆಶ್ರಯವಾಗಿದ್ದ ಪಾಣೆಮಂಗಳೂರಿನ ಹಳೇ ಸೇತುವೆಯ ಒಂದು ಬದಿಯಲ್ಲಿ ವಾಸಿಸುತ್ತಿದ್ದ ಸುಮಾರು 14 ಅಕ್ರಮ ಸುಣ್ಣದ ಗೂಡು ನೆಲಸಮಗೊಳಿಸಿದರು .
ಸುಣ್ಣದ ಗೂಡು ತೆರವುಕಾರ್ಯಾಚರಣೆಯ ನೇತ್ರತವನ್ನು ಖುದ್ದು ಸಹಾಯಕ ಕಮಿಷನರ್ ರವಿಚಂದ್ರನಾಯಕ್,ತಹಶೀಲ್ದಾರ್ ರಶ್ಮಿ ಎಸ್.ಆರ್.ವಹಿಸಿದ್ದರು. ಪುರಸಭೆಯ ಮುಖ್ಯಾಧಿಕಾರಿ ರೇಖಾ ಶೆಟ್ಟಿ, ಗ್ರಾಮ ಲೆಕ್ಕಾಧಿಕಾರಿ ವಿಜೇತಾರವರು ಹಾಜರಿದ್ದರು. ಈ ಸಂದರ್ಭ ಸ್ಥಳದಲ್ಲಿ ಯೊವುದೇ ಗೊಂದಲ ಸೃಷ್ಟಿಯಾಗಬಾರದೆಂಬ ನೆಲೆಯಲ್ಲಿ ಬಂಟ್ವಾಳ ಉಪವಿಭಾಗದ ಎ.ಎಸ್.ಪಿ. ಸೈದುಲು ಅಡಾವತ್, ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗಾರಾಜ್ ಹಾಗೂ ಸಬ್ ಇನ್ಸ್ ಪೆಕ್ಟರ್ ಗಳಾದ ಚಂದ್ರಶೇಖರ್. ಸುಧಾಕರ ತೋನ್ಸೆ,ಪ್ರಸನ್ನ ಮತ್ತು ಪೊಲೀಸ್ ಸಿಬಂದಿಗಳು ಬಂದೋಬಸ್ತ್ ಮಾಡಿದ್ದರು.