ಅಕ್ರಮ‌ ಗೋ ಸಾಗಾಟ ಪ್ರಕರಣ : ಆರು ಮಂದಿ ಪೊಲೀಸ್ ಸಿಬ್ಬಂದಿಗಳು ಶಾಮೀಲು, ಇಬ್ಬರ ಬಂಧನ

ಕೋಟ – ಕರಾವಳಿಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಜಾನುವಾರು ಸಾಗಾಟ ಪ್ರಕರಣದಲ್ಲಿ ಸದ್ಯ ಪೊಲೀಸ್ ಸಿಬ್ಬಂದಿಗಳ ಹೆಸರು ಕೂಡ ತಳಕು ಹಾಕಿಕೊಂಡಿದೆ. ಸದ್ಯ ಹಣ ಪಡೆದು ಅಕ್ರಮ ಜಾನುವಾರು ಸಾಗಾಟ ಮತ್ತು ಕಳವಿಗೆ ಅನುವು ಮಾಡಿಕೊಡುತ್ತಿದ್ದ ಆರೋಪದಲ್ಲಿ  ಉತ್ತರ ಕನ್ನಡ ಜಿಲ್ಲೆಯ ಮಂಕಿ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಕುಮಟಾದ ವಿನೋದ್(37) ಹಾಗೂ ಉಡುಪಿ ಜಿಲ್ಲಾ ಕರಾವಳಿ ಕಾವಲು ಪಡೆಯ ಹೆಡ್ಕಾನ್ಸ್ಟೇಬಲ್ ಬ್ರಹ್ಮಾವರದ ಸಂತೋಷ್ (37) ಅವರನ್ನು ಜು. 16 ರಂದು ಬಂಧಿಸಿದ ಘಟನೆ ನಡೆದಿದೆ.
 ಜು.12ರಂದು ಕುಂದಾಪುರ ಕಡೆಯಿಂದ ಕಾಸರಗೋಡು ಅಬ್ದುಲ್ಲಾ ಎನ್ನುವವರ ಕಸಾಯಿ‌ಕಾನೆಗೆ ಲಾರಿಯಲ್ಲಿ ಅಕ್ರಮ ಜಾನುವಾರು ಸಾಗಾಟಕ್ಕೆ ಸಂಬಂಧಿಸಿದಂತೆ ಕೋಟ ಪೊಲೀಸರು  ಗುಂಡ್ಮಿ ಗ್ರಾಮದ ಸಾಸ್ತಾನ ಟೋಲ್ಗೇಟ್ ಬಳಿ ಶಿವಾನಂದ, ಮಾರುತಿ ನಾರಾಯಣ ನಾಯ್ಕ, ಸೈನುದ್ದೀನ್, ಗಣೇಶನ್, ಹಮೀದ್ ಸಿ.ಎಚ್., ಸಮೀರ್ರನ್ನು ಬಂಧಿಸಿ, 13 ಕೋಣ, ಆರು ಎಮ್ಮೆ ಮತ್ತು ಲಾರಿಯನ್ನು ಕೋಟ ಪೊಲೀಸ್ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಳ್ಳಲಾಗಿತ್ತು. ಬಳಿಕ ಬಂಧಿತ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ, ಪೊಲೀಸ್ ಸಿಬ್ಬಂದಿಗಳು ಹಣ ಪಡೆದು ಅಕ್ರಮ ಜಾನುವಾರು ಸಾಗಾಟಕ್ಕೆ ನೆರವು ನೀಡುತ್ತಿರುವ ಮಾಹಿತಿ ಹೊರ ಹಾಕಿದ್ದರು.
 ಪ್ರಕರಣದಲ್ಲಿ ಕೋಟ ಪೊಲೀಸ್ ಠಾಣೆಯ ಹೆಡ್ಕಾನ್ಸ್ಟೇಬಲ್ ರಾಘವೇಂದ್ರ, ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಹಾಯಕ ಉಪ ನಿರೀಕ್ಷಕ ಬಾಲಸುಬ್ರಹ್ಮಣ್ಯ, ಹೆಡ್ಕಾನ್ಟೇಬಲ್ ಪ್ರಶಾಂತ್, ಕಾನ್ಸ್ಟೇಬಲ್ ಚಂದ್ರಶೇಖರ್ ಎಂಬವರು ಕೂಡ ಶಾಮೀಲಾಗಿದ್ದಾರೆ ಎನ್ನಲಾಗಿದ್ದು, ಸದ್ಯ ಇವರೆಲ್ಲಾ ತಲೆ ಮರೆಸಿಕೊಂಡಿದ್ದು ಹುಡುಕಾಟ ನಡೆಯುತ್ತಿದೆ. ಬಂಧಿತರನ್ನು ಇಂದು ಸಂಜೆ ವೇಳೆ ಕುಂದಾಪುರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯ ಇವರನ್ನು ಜು.30ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದೆ. ಬಂಧಿತರ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಕಲಂ 109, 119, 213 ಜೊತೆ 34 ಐಪಿಸಿ ಕಾಯಿದೆಯಡಿ ಪ್ರಕಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!