ಇವರ ಕೂಗೂ ಕೇಳುವವರು ಯಾರು? ಬದುಕು ಕಟ್ಟಿಕೊಳ್ಳಲು ಕೊನೆಯ ಅಸ್ತ್ರವಾದ ಲೋಕಾಯುಕ್ತ ಇಡೇರಿಸುವುದೇ?

ಉಡುಪಿ: ಇಲ್ಲಿನ ಕೊರಗ ಬಾಂಧವರು ಕಳೆದ 8 ವರ್ಷಗಳಿಂದ ನಿವೇಶನಕ್ಕಾಗಿ ಅಲೆದಾಡುತ್ತಿದ್ದಾರೆ. ರಾಜ್ಯ ಸರಕಾರವೇ ವಿತರಿಸಿದ  ಹಕ್ಕುಪತ್ರಗಳಿದ್ದರೂ ಇವರಿಗೆ ನಿವೇಶನ ಸಿಕ್ಕಿಲ್ಲ.
ಇವರ ಅಹವಾಲನ್ನು ಸ್ವೀಕರಿಸಿದ ರಾಜ್ಯ ಲೋಕಾಯುಕ್ತರು ಇದೀಗ ಉಡುಪಿ ಜಿಲ್ಲಾ ಗಿರಿಜನ ಯೋಜನಾ ಸಮನ್ವಯ ಅಧಿಕಾರಿಗೆ ನೋಟಿಸು ನೀಡುವ ಮೂಲಕ ಕೊಂಡಾಡಿ ಕೊರಗ ಕಾಲನಿ ಹಗರಣದ ತನಿಖೆ ಆರಂಭಿಸಿದ್ದಾರೆ.
ನಿವೇಶನಕ್ಕಾಗಿ ಕಾಯುತ್ತಿದ್ದಾರೆ:
2010 ರಲ್ಲೇ ಕೊರಗ ಸಮುದಾಯದವರಿಗಾಗಿ ಜಿಲ್ಲಾಡಳಿತದಿಂದ ಕಾಯ್ದಿರಿಸಲಾಗಿದ್ದ ಉಡುಪಿ ಜಿಲ್ಲೆಯ ಬೊಮ್ಮರಬೆಟ್ಟು ಗ್ರಾಮದ ೨೨೯ನೇ ಸರ್ವೇ ನಂಬ್ರದ ೨-೬೧ ಎಕ್ರೆ ಜಮೀನನ್ನು ನಿವೇಶನಗಳನ್ನಾಗಿ ವಿಂಗಡಿಸದೇ ಕರ್ತವ್ಯ ಲೋಪಮಾಡಿದ್ದ ಗಿರಿಜನ ಯೋಜನಾ ಸಮನ್ವಯ ಅಧಿಕಾರಿಯ ವಿರುದ್ಧ ನಿವೇಶನ ವಂಚಿತರು ದೂರು ನೀಡಿದ್ದರು. ಈ ಕಾಲನಿಗೆ ರಸ್ತೆ, ನಳ್ಳಿನೀರು, ವಿದ್ಯುತ್ ಮುಂತಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಬಿಡುಗಡೆ ಮಾಡಲಾಗಿದ್ದ ೫೦ ಲಕ್ಷ ರೂಪಾಯಿಗಳನ್ನು ಹೇಗೆ ವ್ಯಯಿಸಲಾಗಿದೆ ಎಂಬ ವಿಚಾರದಲ್ಲೂ ಸ್ಪಷ್ಠತೆ ಇಲ್ಲವಾಗಿದೆ.
ಆದೇಶದ ಪಾಲನೆಯಾಗುತ್ತಿಲ್ಲ:
ಜನಪ್ರತಿನಿಧಿಗಳ ಅಸಡ್ಡೆ 2011 ರ ಸ್ವತಂತ್ರ ದಿನಾಚರಣೆಯಂದು ಜಿಲ್ಲಾ ಉಸ್ತುವಾರಿ ಮಂತ್ರಿ, ಶಾಸಕ ಇತ್ಯಾದಿಯವರ ಅಮೃತ ಹಸ್ತದಿಂದ ನಿವೇಶನಗಳ ಹಕ್ಕು ಪತ್ರಗಳನ್ನು ೨೯ ಕೊರಗ ಕುಟುಂಬಗಳಿಗೆ ವಿತರಿಸಲಾಗಿತ್ತು. ಅಂದಿನಿಂದ ಇಂದಿನವರೆಗೂ ಈ ಕೊರಗಬಾಂಧವರು ನಿವೇಶನ ಪಡೆಯಲು ಸಮಾಜ ಕಲ್ಯಾಣ ಮಂತ್ರಿಗಳಿಂದ ಹಿಡಿದು ಮುಖ್ಯಮಂತ್ರಿಗಳವರೆಗೂ ಮನವಿಗಳ ಮೇಲೆ ಮನವಿಗಳನ್ನು ಸಲ್ಲಿಸುತ್ತಲೇ ಬಂದಿದ್ದಾರೆ. ಮನವಿ ಸ್ವೀಕರಿಸಿದ ಪ್ರತಿಯೋರ್ವ ಜನಪ್ರತಿನಿಧಿಯೂ ಅಲ್ಲಿದ್ದ ಅಧಿಕಾರಿಗಳಿಗೆ ಕೂಡಲೇ ನಿವೇಶನ ಹಸ್ತಾಂತರಿಸುವ ಆದೇಶ ನೀಡುತಿದ್ದರೇ ವಿನಹ ಆದೇಶದ ಪಾಲನೆಯಾಗುತ್ತದೋ ಇಲ್ಲವೊ ಎಂಬ ಬಗ್ಗೆ ವಿಚಾರಿಸುವ ಗೋಜಿಗೆ ಹೋಗುತ್ತಿರಲಿಲ್ಲ. ಅಭಿವೃದ್ಧಿ ಯೋಜನೆಯ ಅಡಿ ಈ ಜಾಗವನ್ನು ಸಮತಟ್ಟು ಮಾಡಲು ಎರಡು ಬಾರಿ ಹಣ ಬಿಡುಗಡೆಯಾದರೂ ಈ ಜಮೀನಿನಲ್ಲಿ ಯಾವುದೇ ಕಾಮಗಾರಿ ನಡೆಯಲಿಲ್ಲ. ಇವೆಲ್ಲವನ್ನೂ ಅಂದಿನ ಜಿಲ್ಲಾಧಿಕಾರಿವರ ಗಮನಕ್ಕೆ ತಂದರೂ ಯಾವ ಪ್ರಯೋಜನವೂ ಆಗಿರಲಿಲ್ಲ. ಪ್ರತಿಭಟನೆಗೂ ಕವಡೆಕಾಸಿನ ಕಿಮ್ಮತ್ತು ಸಿಕ್ಕಿಲ್ಲ.
ಲೋಕಾಯುಕ್ತ ತನಿಖೆ:
ಈ ಹಿಂದೆ ಅಧಿಕಾರದಲ್ಲಿದ್ದ ಜಿಲ್ಲಾಧಿಕಾರಿಯೋರ್ವರು “ನಿಮಗೆ ಈಗಾಗಲೇ ನೀಡಿರುವ ಭೂಮಿಯನ್ನು ಸ್ವಚ್ಚವಾಗಿರಿಸುವ ಹಾಗೂ ಸಮತಟ್ಟು ಮಾಡುವ ಜವಾಬ್ದಾರಿ ನಿಮಗೂ ಇದೆ ಮೊದಲು ನಿಮ್ಮ ಪ್ರಯತ್ನ ಆಗಲಿ, ಅನಂತರ ಸರಕಾರವೂ ನೆರವಾಗಲಿದೆ” ಎಂದಿದ್ದರು. ಅವರ ಮಾತನ್ನು ನಂಬಿದ್ದ ಈ ಕೊರಗ ಬಾಂದವರು ಎರಡು ಲಕ್ಷ ಸಾಲ ಮಾಡಿ 15 ದಿನಗಳ ಕಾಲ ಕಾಲನಿಯ ಪ್ರದೇಶವನ್ನು ಜೆಸಿಬಿಯ ಮೂಲಕ ಸ್ವಚ್ಚಗೊಳಿಸಿ ತಮ್ಮಿಂದ ಸಾಧ್ಯವಾದಷ್ಟು ಸಮತಟ್ಟು ಮಾಡಿದ್ದರು. ಅನಂತರದ ದಿನಗಳಲ್ಲಿ ಜಿಲ್ಲಾಧಿಕಾರಿಯವರು ಇವರಿಗೆ ನೆರವಾಗುವ ಯಾವ ಕಾರ್ಯಾಚರಣೆಯನ್ನೂ ಮಾಡಲಿಲ್ಲ. ಇದೀಗ ಕೊಂಡಾಡಿ ಕೊರಗ ಕಾಲನಿ ಹಗರಣವನ್ನು ಲೋಕಾಯುಕ್ತ ತನಿಖೆಗೆ ಒಳಪಡಿಸಲಾಗಿದ್ದು .ತನಿಖೆಯಿಂದ ಮಾಹಿತಿಗಳು ಹೊರಬೀಳಲಿದೆ

Leave a Reply

Your email address will not be published. Required fields are marked *

error: Content is protected !!